ಮಡಿಕೇರಿ: ಕೊಡಗು-ಕೇರಳ ಗಡಿಯ ಮಾಕುಟ್ಟ ಚೆಕ್ಪೋಸ್ಟ್ನಲ್ಲಿ (Makutta Check Post) ಲಂಚ ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದೆ.
ಚೆಕ್ಪೋಸ್ಟ್ನಲ್ಲಿ ವಾಹನ ಚಾಲಕರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ ಆರೋಪಿಸಿದ್ದಾರೆ. ಕೇರಳದಿಂದ ಕೊಡಗಿಗೆ ಪ್ರತಿನಿತ್ಯ ಸಾವಿರಾರು ಸರಕು ಸಾಗಣೆ ವಾಹನಗಳು ಬರುತ್ತಿವೆ. ಈ ವಾಹನಗಳ ಚಾಲಕರಿಂದ ಕನಿಷ್ಠ 30 ರೂ. ವಸೂಲಿ ಮಾಡಲಾಗುತ್ತಿದೆ. ಜಲ್ಲಿ ಕಲ್ಲು, ಇಟ್ಟಿಗೆ ಸೇರಿದಂತೆ ಕಟ್ಟಡ ಸಾಮಗ್ರಿ ಸಾಗಿಸುವ ಲಾರಿಗಳಿಂದ 3,000 ರೂ. ವರೆಗೆ ಹಣ ವಸೂಲಿ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ (Congress President) ರಂಜಿ ಪೂಣಚ್ಚ ಅವರು ಮಾಕುಟ್ಟ ಚೆಕ್ಪೋಸ್ಟ್ಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ತಮಗೆ ಪರಿಚಯವಿಲ್ಲದ ಕಾರಣ, ರಂಜಿ ಪೂಣಚ್ಚ ಅವರಿಗೂ ಹಣ ನೀಡಲು ಮುಂದಾದ ಘಟನೆ ನಡೆದಿದೆ. ಈ ಸಂದರ್ಭದಲ್ಲಿ ವಿರಾಜಪೇಟೆ ನಗರ ಠಾಣೆಯ ಎಸ್ಐ ಪ್ರದೀಪ್ ಕೂಡ ಸ್ಥಳದಲ್ಲಿದ್ದರು ಎನ್ನಲಾಗಿದೆ.
ಎಸ್ಐ ಅವರ ಎದುರಲ್ಲೇ ಹಣ ನೀಡಿದ ಘಟನೆ ಕುರಿತು ರಂಜಿ ಪೂಣಚ್ಚ ಪ್ರಶ್ನಿಸಿದ್ದು, ಹಣವನ್ನ ಪ್ರದರ್ಶಿಸಿ ಚೆಕ್ಪೋಸ್ಟ್ ಪ್ರಶ್ನಿಸಿದ್ದು, ಹಣವನ್ನ ಪ್ರದರ್ಶಿಸಿ ಚೆಕ್ಪೋಸ್ಟ್ ಕಡೆಗೆ ಎಸೆದಿರುವುದು ವಿಡಿಯೋದಲ್ಲಿದೆ. ಚೆಕ್ಪೋಸ್ಟ್ನಲ್ಲಿ ವಾಹನಗಳಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಆರೋಪಗಳ ಸತ್ಯಾಸತ್ಯತೆ ಬಹಿರಂಗಪಡಿಸಬೇಕೆಂಬ ಆಗ್ರಹ ಕೇಳಿಬಂದಿದೆ.
