ವಾಷಿಂಗ್ಟನ್/ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ(Strait of Hormuz) ವಾಣಿಜ್ಯ ಹಡಗುಗಳು ಹಾಗೂ ಮಧ್ಯಪ್ರಾಚ್ಯದಲ್ಲಿ ನಿಯೋಜನೆಗೊಂಡಿರುವ ಅಮೆರಿಕ ಸೈನಿಕರ ಮೇಲೆ ದಾಳಿಗೆ ಯತ್ನಿಸಿದ್ದಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ನೆಲೆಗಳ ಮೇಲೆ ಅಮೆರಿಕ(USA) ಸೇನೆ ದಾಳಿ ಆರಂಭಿಸಿದೆ.
ಈ ಕುರಿತು ‘ಎಕ್ಸ್’ ಖಾತೆಯಲ್ಲಿ ಮಾಹಿತಿ ನೀಡಿರುವ ಅಮೆರಿಕ ಸೆಂಟ್ರಲ್ ಕಮಾಂಡ್ ಅಮೆರಿಕ ಕಾಲಮಾನ ಮಧ್ಯಾಹ್ನ 12 ಗಂಟೆಗೆ(ಭಾರತೀಯ ಕಾಲಮಾನ ರಾತ್ರಿ 9:30ಕ್ಕೆ) ಇರಾನ್‌ನಲ್ಲಿರುವ ಐಆರ್‌ಜಿಸಿ ಗುರಿಗಳ ಮೇಲೆ ಅಮೆರಿಕ ಪಡೆಗಳು ವೈಮಾನಿಕ ದಾಳಿ ಆರಂಭಿಸಿವೆ ಎಂದು ತಿಳಿಸಿದೆ.
ಹಾರ್ಮುಜ್ ಜಲಸಂಧಿಯ ಪೂರ್ವ ಭಾಗದ ನಗರಗಳ ಮೇಲೆ ನಾಲ್ಕು ಕ್ಷಿಪಣಿಗಳು ಬಿದ್ದಿರುವುದಾಗಿ ಇರಾನ್‌ನ(Iran) ಅಧಿಕೃತ ಸುದ್ದಿ ಸಂಸ್ಥೆ ‘ಐಆರ್‌ಎನ್‌ಎ’ ವರದಿ ಮಾಡಿದೆ. ಚಬಹಾರ್ ಮತ್ತು ಕೊನಾರಕ್ ಕೌಂಟಿಗಳ ವ್ಯಾಪ್ತಿಯಲ್ಲಿ ಈ ಕ್ಷಿಪಣಿಗಳು ಅಪ್ಪಳಿಸಿವೆ ಎಂದು ಪ್ರಾಂತೀಯ ಅಧಿಕಾರಿ ಅಲಿ ಖಲೀಲಾಬಾದಿ ತಿಳಿಸಿದ್ದು, ಹಾನಿಯ ಕುರಿತು ಯಾವುದೇ ಸ್ಪಷ್ಟ ಮಾಹಿತಿ ನೀಡಿಲ್ಲ.
Today at 12 p.m. ET, U.S. forces began striking Islamic Revolutionary Guard Corps (IRGC) targets in Iran. The strikes follow recent attempted attacks by the IRGC against commercial shipping in the Strait of Hormuz and against American service members deployed to the region.
— U.S. Central Command (@CENTCOM) September 1, 2026
ಆರು ತಿಂಗಳ ಯುದ್ಧದ ನಂತರವೂ ಪ್ರಮುಖ ಜಾಗತಿಕ ತೈಲ ಸಾರಿಗೆ ಮಾರ್ಗವಾದ ಹಾರ್ಮುಜ್ ಜಲಸಂಧಿಯು ಮುಚ್ಚಲ್ಪಟ್ಟಿದ್ದು, ಇರಾನ್‌ನ ಬಂದರುಗಳಿಗೆ ಅಮೆರಿಕ ನೌಕಾ ದಿಗ್ಬಂಧನವನ್ನು ಮುಂದುವರಿಸಿದೆ. ಇದನ್ನೂ ಓದಿ: ಸೂಪರ್ ಪವರ್ ನಾಯಕನಂತೆ ಬಿಂಬಿಸಲು ಹೋಗಿ ಜಗತ್ತಿನ ಮುಂದೆ ಬೆತ್ತಲಾದ ಪಾಕ್ ಪಿಎಂ!

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ನಿರಂತರ ಬಾಂಬ್ ದಾಳಿಯಿಂದಾಗಿ ಇರಾನ್ ಸಂಪೂರ್ಣ ವಿಫಲ ರಾಷ್ಟ್ರವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸೋಮವಾರ ಹೇಳಿದ್ದಾರೆ.
ಇರಾನ್‌ನ ನಾಯಕತ್ವ ನಾಶವಾಗಿದೆ, ಸೇನೆ ಧ್ವಂಸಗೊಂಡಿದೆ ಹಾಗೂ ಆರ್ಥಿಕತೆ ನೆಲಕಚ್ಚಿದೆ ಎಂದಿರುವ ಟ್ರಂಪ್, ಅಗತ್ಯಬಿದ್ದರೆ ಮತ್ತಷ್ಟು ದಾಳಿಗಳನ್ನು ನಡೆಸುತ್ತೇವೆ. ನಾವು ಅವರನ್ನು ಹಾಗೇ ಬಿಡುತ್ತೇವೆ ಎಂದಲ್ಲ, ಅವರನ್ನು ಮತ್ತಷ್ಟು ಬಗ್ಗುಬಡಿಯುತ್ತೇವೆ ಎಂದು ಟ್ರಂಪ್ ಗುಡುಗಿದ್ದಾರೆ.
