– 2028 ರಲ್ಲಿ ಬಳ್ಳಾರಿಯ 10 ಸ್ಥಾನ ಗೆಲ್ಲುತ್ತೇವೆ
– 10 ದಿನದ ಮೊದಲೇ ರಾಜೀನಾಮೆ ಸಲ್ಲಿಸಿದ್ದೆ
ಬಳ್ಳಾರಿ: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಹಾಗೂ ನಾಯಕರ ಹೇಳಿಕೆಗಳ ವಿರುದ್ಧ ಮಾಜಿ ಸಚಿವ ಬಿ. ನಾಗೇಂದ್ರ (B Nagendra) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಶಾಸಕ ಜಿ. ಜನಾರ್ದನರೆಡ್ಡಿ(Janardhana Reddy) ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು(B Sriramulu) ಅವರನ್ನು ಬಳ್ಳಾರಿಯಲ್ಲಿ ಚಲಾವಣೆ ಇಲ್ಲದ ನಾಣ್ಯಗಳು ಎಂದು ಕರೆದಿರುವ ನಾಗೇಂದ್ರ, ಅವರ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಲ್ಲದೆ ಚುನಾವಣಾ ಅಖಾಡಕ್ಕೆ ಬರುವಂತೆ ಬಹಿರಂಗ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಜನಾರ್ದನರೆಡ್ಡಿ ಮತ್ತು ಶ್ರೀರಾಮುಲು ಅವರ ಹಾವಭಾವಗಳನ್ನು ಮಿಮಿಕ್ರಿ ಮಾಡಿ ವ್ಯಂಗ್ಯವಾಡಿದ ನಾಗೇಂದ್ರ, ತಮ್ಮ ಮೇಲಿನ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನ್ಯಾಯಾಲಯದಿಂದಲೇ ಅಪರಾಧಿ ಎಂದು ಸಾಬೀತಾಗಿರುವ, 420 ಕೇಸ್ಗಳನ್ನು ಎದುರಿಸುತ್ತಿರುವ ಜನಾರ್ದನರೆಡ್ಡಿ ಈಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ನಿಮ್ಮ ಕಳ್ಳಾಟಗಳ ದಾಖಲೆಗಳು ನನ್ನ ಬಳಿಯೂ ಇವೆ. ಸಮಯ ಬಂದಾಗ ಬಿಚ್ಚಿಡುತ್ತೇನೆ ಎಂದು ನಾಗೇಂದ್ರ ಎಚ್ಚರಿಸಿದರು.
ವಾಲ್ಮೀಕಿ ನಿಗಮದ 187 ಕೋಟಿ ರೂ. ಪ್ರಕರಣದಲ್ಲಿ ನಾನು ಯಾವುದೇ ತಪ್ಪೆಸಗಿಲ್ಲ, ಎಲ್ಲಿಯೂ ಸಹಿ ಮಾಡಿಲ್ಲ. ಇದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಡೆದಿರುವ ಗೋಲ್ಮಾಲ್. ಪಕ್ಷ ಮತ್ತು ಸರ್ಕಾರಕ್ಕೆ ಮುಜುಗರವಾಗಬಾರದು ಎಂಬ ಕಾರಣಕ್ಕೆ ನಾನೇ ಸ್ವತಃ 10 ದಿನ ಮೊದಲೇ ಮುಖ್ಯಮಂತ್ರಿಗಳಿಗೆ ರಾಜೀನಾಮೆ ಸಲ್ಲಿಸಿದ್ದೆ. ನನ್ನ ರಾಜೀನಾಮೆಗೆ ಬಿಜೆಪಿಯವರು ಕ್ರೆಡಿಟ್ ತೆಗೆದುಕೊಳ್ಳುವುದು ಹಾಸ್ಯಾಸ್ಪದ ಎಂದರು. ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪಾದಯಾತ್ರೆ ʻಕಹಳೆʼ – ʻಬಳ್ಳಾರಿ ಚಲೋʼಗೆ ಯಡಿಯೂರಪ್ಪ ಚಾಲನೆ!
ಜನಾರ್ದನರೆಡ್ಡಿ ಮಾಡಿದ ಪ್ರತಿಯೊಂದು ಹಗರಣದಲ್ಲೂ ಶ್ರೀರಾಮುಲುಗೆ ಶೇ. 10ರಷ್ಟು ಪಾಲು ಇತ್ತು ಎಂಬುದನ್ನು ಮರೆಯಬಾರದು. ರೆಡ್ಡಿ ಮಾತ್ರ ಜೈಲಿಗೆ ಹೋದರು, ರಾಮುಲು ತಪ್ಪಿಸಿಕೊಂಡರು. ತಮ್ಮ ಆತ್ಮಸಾಕ್ಷಿಯನ್ನು ಮುಟ್ಟಿ ನೋಡಿಕೊಳ್ಳಲಿ ಎಂದು ನೇರ ಆರೋಪ ಮಾಡಿದರು.
ನಾನು ವಾಲ್ಮೀಕಿ ಸಮುದಾಯದವನು, ದಲಿತ, ಪಾಳೆಗಾರನೂ ಹೌದು. ಪಾಳೇಗಾರಿಕೆಯನ್ನು ಯಾವಾಗ, ಎಲ್ಲಿ ತೋರಿಸಬೇಕೋ ಅಲ್ಲಿ ತೋರಿಸುತ್ತೇನೆ. ಬಡವರ ಕಣ್ಣೀರು ಮತ್ತು ಶಾಪ ನಿಮ್ಮನ್ನು ಸುಮ್ಮನೆ ಬಿಡಲ್ಲ. 2028ರ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ 10ಕ್ಕೆ 10 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ನಾಗೇಂದ್ರ, ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿರುಗೇಟು ನೀಡಿದರು.
