ಚಿಕ್ಕಬಳ್ಳಾಪುರ: ರೈಲು ಹಳಿ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದು ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ದುರ್ಮರಣ ಹೊಂದಿರುವ ಘಟನೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೊಡ್ಡಬಳ್ಳಾಪುರ ರೈಲು ನಿಲ್ದಾಣದಲ್ಲಿ (Doddaballapura Railway Station) ನಡೆದಿದೆ.
ರೈಲು ನಿಲ್ದಾಣದಲ್ಲಿ ಸ್ಕೈವಾಕ್ ವ್ಯವಸ್ಥೆ ಇಲ್ಲದಿರುವುದೇ ಈ ದುರಂತಕ್ಕೆ ಕಾರಣ ಎನ್ನಲಾಗುತ್ತಿದೆ. ರೈಲು ಡಿಕ್ಕಿಯ ರಭಸಕ್ಕೆ ಅಜ್ಜಿ ಹಾಗೂ ಇಬ್ಬರು ಮೊಮ್ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ದೊಡ್ಡಬಳ್ಳಾಪುರ ನಗರದ ಪಾಲನಜೋಗಹಳ್ಳಿ ನಿವಾಸಿಗಳಾದ ಇರ್ಫಾನಾ (46), ರುಕಿಯಾ (13) ಹಾಗೂ ರಾಕಿಯಾ (8) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಅನಾರೋಗ್ಯದಿಂದ ಬಳಲುತ್ತಿದ್ದ ಒಂದೂವರೆ ವರ್ಷದ ಮಗು ಚಿಕಿತ್ಸೆ ಫಲಿಸದೇ ಸಾವು
ಎರಡು ದಿನಗಳ ರಜೆ ಹಿನ್ನೆಲೆಯಲ್ಲಿ ಹಿಂದೂಪುರದಿಂದ ಅಜ್ಜಿ ಮನೆಗೆ ಮೊಮ್ಮಕ್ಕಳು ಬಂದಿದ್ದರು. ರಜೆ ಮುಗಿದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶಾಲೆಗೆ ತೆರಳಬೇಕಾಗಿತ್ತು. ಹೀಗಾಗಿ ಅಜ್ಜಿ ಜೊತೆ ಹಿಂದೂಪುರ ಪ್ಯಾಸೆಂಜರ್ ರೈಲು ಹತ್ತಲು ದೊಡ್ಡಬಳ್ಳಾಪುರ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ರೈಲು ನಿಲ್ದಾಣದಲ್ಲಿ ಸ್ಕೈವಾಕ್ ವ್ಯವಸ್ಥೆ ಇಲ್ಲದ ಕಾರಣ ರೈಲು ಹಳಿ ದಾಟಿ ಮತ್ತೊಂದು ಬದಿಗೆ ತೆರಳಲು ಮುಂದಾಗಿದ್ದಾರೆ. ಈ ವೇಳೆ ವೇಗವಾಗಿ ಬಂದ ರೈಲು ಮೂವರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.
ಯಶವಂತಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಚಾಕಲೇಟ್ ಕದ್ದಿದ್ದಕ್ಕೆ ಬಾಲಕನಿಗೆ ಮನಸೋ ಇಚ್ಛೆ ಹಲ್ಲೆ – ಆರೋಪಿ ಅರೆಸ್ಟ್
