ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿಂದು ಭಾರೀ ಮಳೆಯಾಗಿದೆ. ರಸ್ತೆಗಳು (Delhi Roads) ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ (ಆ.8), ಭಾನುವಾರವೂ (ಆ.9) ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ ಶುಕ್ರವಾರ (ಇಂದು) ಗಂಟೆಗಳ ಕಾಲ ಸುರಿದ ಮಳೆಗೆ ಹಲವೆಡೆ ರಸ್ತೆಗಳು ಮುಳುಗಡೆಯಾಗಿವೆ. ಅದರಲ್ಲೂ ದಕ್ಷಿಣ ದೆಹಲಿಯ ಕೆಲವು ಸ್ಥಳಗಳಲ್ಲಿ 3-4 ಅಡಿ ಆಳದವರೆಗೆ ರಸ್ತೆಯಲ್ಲೇ ನೀರು ನಿಂತಿರುವುದು ಕಂಡುಬಂದಿದೆ.
ಮೆಹ್ರೌಲಿ-ಬಾದರ್ಪುರ್ (MB) ಪ್ರದೇಶದ ರಸ್ತೆಗಳಲ್ಲಿ ನದಿಯಂತೆ ನೀರು ಹರಿಯುತ್ತಿದ್ದು, ವಾಹನ ಸವಾರರು ಪರದಾಡಿದ್ದಾರೆ. ದಕ್ಷಿಣಪುರಿ, ಓಖ್ಲಾ, ಸಂಗಮ್ ವಿಹಾರ್, ಸೈನಿಕ್ ಫಾರ್ಮ್‌ಗಳು ಮತ್ತು ನಗರದಾದ್ಯಂತ ಹಲವಾರು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ ಕಂಗಾಲಾಗಿದ್ದಾರೆ.


ದಕ್ಷಿಣ ದೆಹಲಿಯಲ್ಲಿ ಭಾರೀ ಮಳೆಯಿಂದಾಗಿ ಎಂ.ಬಿ ರಸ್ತೆ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾಗಿದೆ. ವಾಯುಸೇನಾ ಬಾದ್ (ವಾಯುಪಡೆ ನಿಲ್ದಾಣ) ಬಳಿ ಅತಿ ಹೆಚ್ಚು ನೀರು ನಿಂತಿದ್ದು, ಕ್ಯಾರೇಜ್‌ವೇಯ ಕೆಲವು ಭಾಗಗಳಲ್ಲಿ 3-4 ಅಡಿಗಳಷ್ಟು ನೀರು ತುಂಬಿಕೊಂಡಿವೆ. ಅಲ್ಲದೇ ಓಖ್ಲಾ ಮೋರ್, ಸಂಗಮ್ ವಿಹಾರ್, ಖಾನ್ಪುರ್, ದಿಯೋಲಿ ಮತ್ತು ಅಂಬೇಡ್ಕರ್ ನಗರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ನೀರಿನ ಮಧ್ಯೆಯೇ ಸಂಚಾರಕ್ಕೆ ಯತ್ನಿಸಿದ ಹಲವರ ವಾಹನಗಳು ಕೆಟ್ಟಿನಿಂತಿದ್ದು, ಬಳಿಕ ಮಿಲಿಟರಿ ಟ್ರಕ್‌ಗಳ ಸಹಾಯದಿಂದ ವಾಹನಗಳನ್ನು ಸಾಗಿಸಿರುವ ದೃಶ್ಯಗಳು ಕಂಡುಬಂದಿದೆ.
ಅಲ್ಲದೇ MB ರಸ್ತೆಯ ಹೊರತಾಗಿ, ದೆಹಲಿಯಾದ್ಯಂತ ಐಟಿಒ, ವಜೀರಾಬಾದ್ ರಸ್ತೆ, ಪಟೇಲ್ ರಸ್ತೆ, ರೋಹ್ಟಕ್ ರಸ್ತೆ, ಶಂಕರ್ ರಸ್ತೆ, ಕೀರ್ತಿ ನಗರ ವಿಭಾಗ, ದೆಹಲಿ-ಜೈಪುರ ಹೆದ್ದಾರಿ, ಪೀರಗಢಿ ಮತ್ತು ಶಾಹೀನ್ ಬಾಗ್ ಸೇರಿದಂತೆ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಸಂಚಾರ ದಟ್ಟಣೆ ಕಂಡುಬಂದಿದೆ.
9 ಮನೆಗಳು ಕುಸಿತ
ನಿನ್ನೆ ತಡರಾತ್ರಿಯಿಂದಲೂ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ 9 ಮನೆ ಕುಸಿತ ಘಟನೆಗಳು ವರದಿಯಾಗಿವೆ. ವಿವಿಧ ಭಾಗಗಳಲ್ಲಿ ಮರಗಳು ಬಿದ್ದಿದ್ದು, ತೆರುಗೊಳಿಸುವಂತೆ ಸಾರ್ವಜನಿಕರು ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ್ದಾರೆ. ಅದೃಷ್ಟವಶಾತ್ ಯಾವುದೇ ಸಾವು – ನೋವಿನ ವರದಿಯಾಗಿಲ್ಲ.

