ನವದೆಹಲಿ: EMI ಪಾವತಿ ತಡವಾದರೆ ಬ್ಯಾಂಕ್ ಅಥವಾ ರಿಕವರಿ ಏಜೆಂಟ್‌ಗಳಿಂದ ಪದೇ ಪದೇ ಕರೆ, ಬೆದರಿಕೆ, ಅವಮಾನ ಎದುರಿಸುವವರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ನಿಯಮಗಳನ್ನು ತಂದಿದೆ.
ಸಾಲ ವಸೂಲಾತಿ ವೇಳೆ ಗ್ರಾಹಕರಿಗೆ ಕಿರುಕುಳ ಆಗದಂತೆ ಬ್ಯಾಂಕ್‌ಗಳು ಮತ್ತು ನಿಯಂತ್ರಿತ ಸಾಲದಾತರು ಕಟ್ಟುನಿಟ್ಟಿನ ನಿಯಮ ಪಾಲಿಸಬೇಕು. ಈ ಹೊಸ ನಿಯಮಗಳು 2027ರ ಜನವರಿ 1ರಿಂದ ಜಾರಿಗೆ ಬರಲಿವೆ.
ಹೊಸ ನಿಯಮದನುಸಾರ ಬ್ಯಾಂಕ್‌ಗಳು ಮತ್ತು ರಿಕವರಿ ಏಜೆಂಟ್‌ಗಳು ಸಾಮಾನ್ಯವಾಗಿ ಬೆಳಗ್ಗೆ 8 ರಿಂದ ಸಂಜೆ 7 ರವರೆಗೆ ಮಾತ್ರ ಸಾಲಗಾರರನ್ನು ಸಂಪರ್ಕಿಸಬೇಕು. ಈ ಸಮಯ ಹೊರತುಪಡಿಸಿ ಕರೆ ಅಥವಾ ಭೇಟಿ ಮಾಡಬೇಕಾದರೆ ಸಾಲಗಾರರ ಮನವಿ ಅಥವಾ ಅನುಮತಿ ಇರಬೇಕು. ಅಷ್ಟೇ ಅಲ್ಲ, ಬೆದರಿಕೆ, ನಿಂದನೀಯ ಮಾತು, ಅವಮಾನ ಮಾಡುವ ರೀತಿಯ ಭಾಷೆ ಬಳಸುವಂತಿಲ್ಲ. ಅನಾಮಧೇಯವಾಗಿ ಕರೆ ಮಾಡಿ ಹೆದರಿಸುವುದು, ಪದೇ ಪದೇ ಕರೆ ಮಾಡುವುದು ಅಥವಾ ಆಸ್ತಿ ಜಪ್ತಿ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕುವುದಕ್ಕೂ ಅವಕಾಶವಿಲ್ಲ.
ಸಾಲಗಾರರ ಫೋಟೋ, ವಿಡಿಯೋ ಅಥವಾ ವೈಯಕ್ತಿಕ ಮಾಹಿತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿ ಅವಮಾನಿಸುವಹಾಗಿಲ್ಲ. ದುಃಖ, ವೈದ್ಯಕೀಯ ತುರ್ತು ಪರಿಸ್ಥಿತಿ ಅಥವಾ ಮದುವೆಯಂತಹ ಸೂಕ್ಷ್ಮ ಸಂದರ್ಭಗಳಲ್ಲಿ ರಿಕವರಿ ಏಜೆಂಟ್‌ಗಳು ಸಾಲಗಾರರನ್ನು ಸಂಪರ್ಕಿಸುವುದನ್ನು ತಪ್ಪಿಸಬೇಕು.
ಮನೆಗೆ ಬರುವ ಮುನ್ನವೂ ಮಾಹಿತಿ ಕೊಡಬೇಕು
ರಿಕವರಿ ಏಜೆಂಟ್‌ಗಳು ಬೇಕಾಬಿಟ್ಟಿ ಸಾಲಗಾರರ ಮನೆಗೆ ಬರುವಂತಿಲ್ಲ. ಮೊದಲ ಬಾರಿ ವೈಯಕ್ತಿಕವಾಗಿ ಭೇಟಿ ಮಾಡುವ ಮುನ್ನ ಕನಿಷ್ಠ ಒಂದು ದಿನ ಮುಂಚಿತವಾಗಿ ಮಾಹಿತಿ ನೀಡಬೇಕು. ಏಜೆಂಟ್ ಯಾವ ಸಂಸ್ಥೆಯಿಂದ ಬಂದಿದ್ದಾರೆ ಎಂಬ ವಿವರವನ್ನು ಬ್ಯಾಂಕ್ ನೀಡಬೇಕು.
ಭೇಟಿ ವೇಳೆ ಏಜೆಂಟ್ ತಮ್ಮ ಐಡಿ ಕಾರ್ಡ್, ಅಧಿಕಾರ ಪತ್ರ ಮತ್ತು ಸಂಬಂಧಿತ ನೋಟಿಸ್ ಹೊಂದಿರಬೇಕು. ಅದರಲ್ಲೂ ಬ್ಯಾಂಕ್ ಹಾಗೂ ರಿಕವರಿ ಏಜೆನ್ಸಿಯ ದೂರು ಅಧಿಕಾರಿಯ ಸಂಪರ್ಕ ವಿವರ ಇರಬೇಕು. ಇದನ್ನೂ ಓದಿ: ಮೇಕೆದಾಟು ಕುರಿತು ಸರ್ವಪಕ್ಷ ಸಭೆಯ ಅಗತ್ಯವಿಲ್ಲ, ಕೀಳುಮಟ್ಟದ ರಾಜಕೀಯ ಬೇಡ: ಉದಯನಿಧಿಗೆ ತ.ನಾಡು ಸಿಎಂ ತರಾಟೆ
ರಿಕವರಿ ಕರೆಗಳಿಗೂ ಲೆಕ್ಕ ಇರಲಿದೆ
ಇನ್ನು ಮುಂದೆ ಸಾಲ ವಸೂಲಾತಿ ವೇಳೆ ನಡೆದ ಕರೆಗಳನ್ನೂ ಬ್ಯಾಂಕ್‌ಗಳು ದಾಖಲಿಸಬೇಕು. ಕರೆ ಮಾಡಿದ ಸಮಯ ಮತ್ತು ಎಷ್ಟು ಬಾರಿ ಕರೆ ಮಾಡಲಾಗಿದೆ ಎಂಬ ವಿವರಗಳನ್ನು ನಿರ್ವಹಿಸಬೇಕು. ಈ ದಾಖಲೆಗಳನ್ನು ಸಾಮಾನ್ಯವಾಗಿ ಕನಿಷ್ಠ 6 ತಿಂಗಳವರೆಗೆ ಸಂರಕ್ಷಿಸಬೇಕು.
ರಿಕವರಿ ಏಜೆನ್ಸಿಗೆ ಕೆಲಸ ಕೊಟ್ಟಿದ್ದರೂ ಜವಾಬ್ದಾರಿಯಿಂದ ಬ್ಯಾಂಕ್ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏಜೆಂಟ್‌ಗಳ ನಡೆ-ನುಡಿಯನ್ನು ಬ್ಯಾಂಕ್‌ಗಳು ಮೇಲ್ವಿಚಾರಣೆ ಮಾಡಬೇಕು. ರಿಕವರಿ ಏಜೆಂಟ್‌ಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು RBI ಸೂಚಿಸಿದೆ.
EMI ಕಟ್ಟದಿದ್ರೆ ಫೋನ್ ಲಾಕ್ ಮಾಡಬಹುದಾ?
ಇದು ಕೂಡ ಹೊಸ ನಿಯಮದಲ್ಲಿ ಪ್ರಮುಖ ವಿಚಾರವಾಗಿದೆ. EMI ಪಾವತಿಸದ ಕಾರಣಕ್ಕೆ ಹಣಕಾಸು ನೀಡಿ ಖರೀದಿಸಿದ ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್ ಅನ್ನು ರಿಮೋಟ್ ಮೂಲಕ ಲಾಕ್ ಮಾಡುವ ವ್ಯವಸ್ಥೆಗೆ RBI ನಿಯಮ ರೂಪಿಸಿದೆ. ಆದರೆ, EMI ತಪ್ಪಿದ ತಕ್ಷಣವೇ ಫೋನ್ ಲಾಕ್ ಮಾಡಲು ಸಾಧ್ಯವಿಲ್ಲ. ಸಾಲ ಕನಿಷ್ಠ 30 ದಿನ ಬಾಕಿ ಉಳಿದ ನಂತರ ಮಾತ್ರ ನಿರ್ಬಂಧ ಆರಂಭಿಸಬಹುದು. 60 ದಿನಗಳವರೆಗೆ ಬಾಕಿ ಉಳಿದರೆ ಸಂಪೂರ್ಣ ನಿರ್ಬಂಧ ವಿಧಿಸಬಹುದು. ತುರ್ತು ಕರೆಗಳು, SMS ಮತ್ತು ಉದ್ಯೋಗಕ್ಕೆ ಅಗತ್ಯವಿರುವ ಕೆಲವು ಮೂಲಭೂತ ಕಾರ್ಯಗಳನ್ನು ಸಂಪೂರ್ಣವಾಗಿ ಬಂದ್ ಮಾಡುವಂತಿಲ್ಲ. ಸಂಪರ್ಕಗಳು, ಫೋಟೋಗಳು, ವಿಡಿಯೋಗಳು, ಕರೆ ದಾಖಲೆಗಳು ಮತ್ತು ಲೊಕೇಶನ್ ಹಿಸ್ಟರಿಯಂತಹ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಈ ತಂತ್ರಜ್ಞಾನ ಬಳಸುವಂತಿಲ್ಲ. ಇದನ್ನೂ ಓದಿ: ಬಾವಿಯ ನೀರಲ್ಲಿ ನಿಗೂಢ ಅಲೆಗಳು – ಗ್ರಾಮಸ್ಥರಲ್ಲಿ ಆತಂಕ, ವಿಸ್ತೃತ ವರದಿಗೆ ಡಿಸಿ ಆದೇಶ
ಹಣ ಕಟ್ಟಿದ ಬಳಿಕ ಒಂದು ಗಂಟೆಯೊಳಗೆ ಫೋನ್ ಅನ್‌ಲಾಕ್
ಬಾಕಿ EMI ಪಾವತಿಸಿ ಸಾಲವನ್ನು ಸರಿಪಡಿಸಿದ ಬಳಿಕ ಸಾಧನವನ್ನು ಮತ್ತೆ ಸಾಮಾನ್ಯ ಸ್ಥಿತಿಗೆ ತರಲು ಸಮಯ ಮಿತಿ ಕೂಡ ನಿಗದಿಯಾಗಿದೆ. ಪಾವತಿ ಅಥವಾ ಇತ್ಯರ್ಥವಾದ ಒಂದು ಗಂಟೆಯೊಳಗೆ ಸಾಧನವನ್ನು ಮರುಸ್ಥಾಪಿಸಬೇಕು.
ವಿಳಂಬವಾದರೆ ಪ್ರತಿ ಗಂಟೆಗೆ 250 ರೂ. ನೀಡಬೇಕು. ಆದರೆ, ಇದಕ್ಕೂ ಬಾಕಿ ಸಾಲದ ಮೊತ್ತಕ್ಕೆ ಸಂಬಂಧಿಸಿದ ಮಿತಿ ಅನ್ವಯಿಸುತ್ತದೆ. EMI ತಪ್ಪಿದ ಕಾರಣಕ್ಕೆ ಸಾಲಗಾರರಿಗೆ ಕಿರುಕುಳ ನೀಡುವುದಕ್ಕೆ ಕಡಿವಾಣ ಹಾಕುವುದು ಮತ್ತು ಸಾಲ ವಸೂಲಾತಿ ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕವಾಗಿಸುವುದು RBI ಹೊಸ ನಿಯಮಗಳ ಉದ್ದೇಶವಾಗಿದೆ.



