ಮೈಸೂರು: ಕಾವೇರಿ ಜಲಾನಯನ ಪ್ರದೇಶದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಡ್ಯಾಂಗಳಿಗೆ ಜೀವಕಳೆ ಬಂದಿದೆ. ಇದರ ಬೆನ್ನಲ್ಲೇ ಕಬಿನಿಯಿಂದ ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಹರಿಬಿಡಲಾಗಿದೆ.
ಭೀಕರ ಬರಗಾಲ ರಾಜ್ಯವನ್ನು ಕಂಗಾಲಾಗಿಸಿದೆ. ಈಗಾಗಲೇ ಕೃಷಿಗೆ ನೀರು ಬಿಡಲು ಆಗಲ್ಲ; ಮಳೆ ನೋಡಿ ಬಿತ್ತನೆ ಮಾಡಿ ಅಂತ ರೈತರಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ. ಇದರ ನಡುವೆ ತಮಿಳುನಾಡಿಗೆ 15 ದಿನದಲ್ಲಿ 4.4 ಟಿಎಂಸಿ ನೀರು ಹರಿಸುವಂತೆ ಕಾವೇರಿ ಪ್ರಾಧಿಕಾರ ಹಾಗೂ ನಿರ್ವಹಣಾ ಮಂಡಳಿ ಆದೇಶಿಸಿದೆ. ಇದರಿಂದ ರೊಚ್ಚಿಗೆದ್ದಿರುವ ಕನ್ನಡ ಸಂಘಟನೆಗಳು ಒಂದು ಹನಿ ಕಾವೇರಿ ನೀರನ್ನೂ ತಮಿಳುನಾಡಿಗೆ ಬಿಡದಂತೆ ಇದೇ 13ಕ್ಕೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ಈ ಹೊತ್ತಲ್ಲೇ, ರಾಜ್ಯಕ್ಕೆ ವರುಣ ಕೃಪೆ ತೋರಿದಂತೆ ಕಾಣ್ತಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಆಗ್ತಿದೆ. ಹೀಗಾಗಿ, ಕಾವೇರಿ ಕೊಳ್ಳದ ಜಲಾಶಯಗಳಾದ ಕಬಿನಿ, ಕೆಆರ್‌ಎಸ್, ಹಾರಂಗಿ, ಹೇಮಾವತಿಗೆ ನೀರು ಹರಿದು ಬರ್ತಿದೆ. ಕೇರಳದ ವಯನಾಡು ಭಾಗದಲ್ಲಿ ಉತ್ತಮ ಮಳೆಯಾಗ್ತಿರುವ ಕಾರಣ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲೂಕಿನಲ್ಲಿರುವ ಕಬಿನಿ ಸಂಪೂರ್ಣ ಭರ್ತಿಯಾಗಿತ್ತು. ಹಾಗಾಗಿ, 10 ಸಾವಿರ ಕ್ಯೂಸೆಕ್ ತಮಿಳುನಾಡಿಗೆ ಬಿಡಲಾಗಿತ್ತು. ಇದೀಗ 5 ಸಾವಿರ ಕ್ಯೂಸೆಕ್‌ಗೆ ಇಳಿಸಲಾಗಿದೆ. ಇದರಿಂದಾಗಿ ಕಾವೇರಿ ಆತಂಕ ಸ್ವಲ್ಪ ದೂರವಾಗುವ ಲಕ್ಷಣ ಕಾಣ್ತಿದೆ.
