ಮಳೆಗಾಲದ ಹನಿಗಳು ಧರೆಗಿಳಿಯುತ್ತಿದ್ದಂತೆ ಪಶ್ಚಿಮ ಘಟ್ಟಗಳ ಮಡಿಲು ಮೈದುಂಬಿ ನಿಲ್ಲುತ್ತದೆ. ಕಡಿದಾದ ಬೆಟ್ಟಗುಡ್ಡಗಳು, ಕಣಿವೆಗಳು ಎತ್ತ ಹೋದರೂ ಹಸಿರ ಹೊದಿಕೆಯನ್ನು ಹೊದ್ದು, ದಟ್ಟ ಮಂಜಿನ ಪರದೆಯೊಳಗೆ ಅಡಗಿ ಕುಳಿತುಕೊಳ್ಳುತ್ತವೆ. ಈ ನೈಸರ್ಗಿಕ ಸೌಂದರ್ಯಕ್ಕೆ ಮುಕುಟವಿಟ್ಟಂತೆ ಕಂಗೊಳಿಸುವುದೇ ಮಹಾರಾಷ್ಟ್ರದ ಖಂಡಾಲಾ (Khandala) ಮತ್ತು ಲೋನಾವಾಲಾ (Lonawala) ಎಂಬ ಅವಳಿ ತಾಣಗಳು.
ಮುಂಬೈ ಮತ್ತು ಪುಣೆ ನಗರಗಳ ಸದ್ದು-ಗದ್ದಲದಿಂದ ತುಸು ದೂರವಿರುವ ಈ ಬೆಟ್ಟದ ಸಾಲುಗಳು, ಮಳೆಗಾಲದಲ್ಲಿ ಸ್ವರ್ಗವನ್ನೇ ಧರೆಗಿಳಿಸಿದಂತೆ ಭಾಸವಾಗುತ್ತವೆ. ಬೆಟ್ಟದ ತುದಿಯಿಂದ ಧುಮ್ಮಿಕ್ಕುವ ಹಾಲಿನ ನೊರೆಯಂತಹ ಜಲಪಾತಗಳು, ಮೋಡಗಳನ್ನು ಕೈಬೆರಳುಗಳಿಂದ ಮುಟ್ಟುವಂತೆ ಮಾಡುವ ತಂಪಾದ ಗಾಳಿ ಹಾಗೂ ಮಣ್ಣಿನ ಸುವಾಸನೆ ಇವೆಲ್ಲವೂ ಪ್ರವಾಸಿಗರನ್ನು ಮತ್ತೊಂದು ಲೋಕಕ್ಕೆ ಕರೆದೊಯ್ಯುತ್ತವೆ.

ಮಳೆಗಾಲದ ನಿಜವಾದ ಸೌಂದರ್ಯವನ್ನು ಅನುಭವಿಸಬೇಕೆಂದರೆ, ಪ್ರಕೃತಿಯ ಈ ಅಪರೂಪದ ಕಾವ್ಯದಂತಿರುವ ಖಂಡಾಲಾ ಮತ್ತು ಲೋನಾವಾಲಾಗೆ ಒಮ್ಮೆ ಭೇಟಿ ನೀಡಲೇಬೇಕು. ಪ್ರಕೃತಿ ಪ್ರೇಮಿಗಳಿಗೆ, ಚಾರಣಿಗರಿಗೆ ಹಾಗೂ ರಮಣೀಯ ವಾತಾವರಣದಲ್ಲಿ ಮನಸ್ಸನ್ನು ಹಗುರಗೊಳಿಸಲು ಬಯಸುವವರಿಗೆ ಈ ಅವಳಿ ತಾಣಗಳು ನಿಜಕ್ಕೂ ಅದ್ಭುತ ಕೊಡುಗೆ.
ಲೋನಾವಾಲಾ ಮತ್ತು ಖಂಡಾಲಾ:
ಲೋನಾವಾಲಾ ಮತ್ತು ಖಂಡಾಲಾ ಸಹ್ಯಾದ್ರಿ ಪರ್ವತ ಶ್ರೇಣಿಯ (ಪಶ್ಚಿಮ ಘಟ್ಟಗಳು) ಮಡಿಲಿನಲ್ಲಿ, ಡೆಕ್ಕನ್ ಪ್ರಸ್ಥಭೂಮಿ ಹಾಗೂ ಕೊಂಕಣ ಕರಾವಳಿಯನ್ನು ಬೇರ್ಪಡಿಸುವ ಸೀಮೆಯಲ್ಲಿ ನೆಲೆಸಿವೆ.
ಲೋನಾವಾಲಾ:
ಮುಂಬೈನಿಂದ ಸುಮಾರು 92 ಕಿ.ಮೀ ಪುಣೆಯಿಂದ ಸುಮಾರು 64 ಕಿ.ಮೀ ದೂರದಲ್ಲಿದೆ. ಲೋನಾವಾಲಾ (Lonawala) ‘ಲೇಣ’ ಮತ್ತು ‘ಆವಳಿ’ ಎಂಬ ಪದಗಳಿಂದ ಬಂದಿದೆ. ಅಂದರೆ “ಗುಹೆಗಳ ಸಾಲು”. ಈ ಪ್ರದೇಶದ ಬಳಿ ಇರುವ ಪ್ರಾಚೀನ ಬೌದ್ಧ ಧರ್ಮದ ಕರ್ಲಾ, ಭಾಜಾ ಮತ್ತು ಬೇಡ್ಸೆ ಗುಹೆಗಳು ಇದಕ್ಕೆ ಸಾಕ್ಷಿಯಾಗಿವೆ. ಈ ಪ್ರದೇಶವು ಆರಂಭದಲ್ಲಿ ಸೇವುಣ (ಯಾದವ) ರಾಜಮನೆತನದ ಭಾಗವಾಗಿತ್ತು, ನಂತರ ಮೊಘಲರು ತಮ್ಮ ವಿಸ್ತರಣೆಯ ಭಾಗವಾಗಿ ಇದನ್ನು ಕಾಯ್ದುಕೊಂಡರು. ರಾಜ ಛತ್ರಪತಿ ಶಿವಾಜಿ ಮಹಾರಾಜರ ಕಾಲದಲ್ಲಿ ಹಾಗೂ ತದನಂತರದ ಪೇಷ್ವೆಗಳ ಆಡಳಿತದಲ್ಲಿ ಈ ಬೆಟ್ಟದ ಸಾಲುಗಳು ಯುದ್ಧತಂತ್ರಕ್ಕೆ ಪ್ರಮುಖ ಕೇಂದ್ರವಾಗಿದ್ದವು.

ಮಹಾರಾಷ್ಟ್ರ ಜಿಲ್ಲೆಯ ಪುಣೆ ತಾಲೂಕಿನ ಮಾವಳ್ ಎಂಬಲ್ಲಿ ಸಮುದ್ರ ಮಟ್ಟದಿಂದ ಸುಮಾರು 622 ಮೀಟರ್ ಎತ್ತರದಲ್ಲಿದೆ. ಇಡೀ ಗಿರಿಧಾಮವು ಸುಮಾರು 38 ಚದರ ಕಿ.ಮೀ ವ್ಯಾಪಿಸಿದೆ.
ಲೋನಾವಾಲಾದ ಮುಖ್ಯ ಪ್ರವಾಸಿ ಆಕರ್ಷಣೆಗಳು:
ಮಳೆಗಾಲದಲ್ಲಿ ಪ್ರವಾಸಿಗರ ನೆಚ್ಚಿನ ತಾಣ. ಪ್ರಾಚೀನ ಗುಹೆಗಳಿಂದ ಹಿಡಿದು, ನಯನಮನೋಹರ ಜಲಪಾತಗಳು ಹಾಗೂ ಜಲಾಶಯಗಳವರೆಗೆ ಲೋನಾವಾಲಾದಲ್ಲಿ ನೋಡಲು ಅನೇಕ ಅತ್ಯದ್ಭುತ ಸ್ಥಳಗಳಿವೆ.
ಭೂಷಿ ಡ್ಯಾಮ್:
ಲೋನಾವಾಲಾಗೆ ಭೇಟಿ ನೀಡುವ ಪ್ರವಾಸಿಗರ ಮೊದಲ ಆಯ್ಕೆ ಭೂಷಿ ಡ್ಯಾಮ್. ಮಳೆಗಾಲದಲ್ಲಿ ಡ್ಯಾಮ್ ತುಂಬಿ ನೀರು ಕಲ್ಲಿನ ಮೆಟ್ಟಿಲುಗಳ ಮೇಲೆ ಹರಿಯುವಾಗ, ಅಲ್ಲಿ ಕುಳಿತು ನೀರಿನಲ್ಲಿ ಆಟವಾಡುವುದು ಕಣ್ಣಿಗೆ ಹಾಗೂ ಮನಸ್ಸಿಗೆ ಹಬ್ಬ. ಮಳೆಗಾಲದಲ್ಲಿ ಇಲ್ಲಿ ಪ್ರವಾಸಿಗರ ದಂಡೇ ಇರುತ್ತದೆ.

ಲಯನ್ಸ್ ಪಾಯಿಂಟ್: ಲೋನಾವಾಲಾದ ಅತ್ಯಂತ ಎತ್ತರವಾದ ಹಾಗೂ ರಮಣೀಯ ನೋಟ ಈ ಪಾಯಿಂಟ್‌ನಲ್ಲಿದೆ.ಕಡಿದಾದ ಕಣಿವೆಗಳು, ಸಾಲು ಸಾಲು ಜಲಪಾತಗಳು ಮತ್ತು ಕಾಲಡಿಯಲ್ಲಿ ತೇಲುವ ಮೋಡಗಳನ್ನು ಇಲ್ಲಿ ಕಣ್ಣುತುಂಬಿಕೊಳ್ಳಬಹುದು. ಸೂರ್ಯಾಸ್ತದ ಸುಂದರ ನೋಟದೊಂದಿಗೆ ಮೆಣಸಿನಕಾಯಿ ಬಜ್ಜಿ ಹಾಗೂ ಚಹಾ ಸವಿಯಲು ಇದು ಬೆಸ್ಟ್ ಸ್ಪಾಟ್.
ಕರ್ಲಾ ಮತ್ತು ಭಾಜಾ ಗುಹೆಗಳು: ಕ್ರಿಸ್ತಪೂರ್ವ 2ನೇ ಶತಮಾನಕ್ಕೆ ಸೇರಿದ ಪ್ರಾಚೀನ ಬೌದ್ಧ ಧರ್ಮದ ಕಲ್ಲಿನಲ್ಲಿ ಕೊರೆದ ಗುಹೆಗಳು. ಭಾರತದ ಅತಿದೊಡ್ಡ ಬೌದ್ಧ ಪ್ರಾರ್ಥನಾ ಮಂದಿರಗಳಲ್ಲಿ (ಚೈತ್ಯ) ಕರ್ಲಾ ಗುಹೆ ಒಂದಾಗಿದೆ. ಇಲ್ಲಿನ ನಯವಾದ ಕಲ್ಲಿನ ಕೆತ್ತನೆಗಳು, ಸ್ತೂಪಗಳು ಮತ್ತು ಬೌದ್ಧ ಭಿಕ್ಷುಗಳು ವಾಸಿಸುತ್ತಿದ್ದ ಕೊಠಡಿಗಳು ಪ್ರಾಚೀನ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿವೆ. ಕರ್ಲಾ ಗುಹೆಯ ಬಳಿಯೇ ಪ್ರಸಿದ್ಧ ಏಕವೀರ ದೇವಿ ದೇವಾಲಯವೂ ಇದೆ.
ಲೋಹಗಡ್ ಕೋಟೆ: ಚಾರಣಿಗರು ಮತ್ತು ಇತಿಹಾಸ ಪ್ರೇಮಿಗಳಿಗೆ ಅತ್ಯಂತ ನೆಚ್ಚಿನ ಜಾಗ. ‘ಕಬ್ಬಿಣದ ಕೋಟೆ’ ಎಂದೇ ಹೆಸರುವಾಸಿಯಾದ ಈ ಕೋಟೆಯನ್ನು ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದರು. ಮಳೆಗಾಲದಲ್ಲಿ ಈ ಕೋಟೆಯ ಹಾದಿಯಲ್ಲೆಲ್ಲಾ ಹಸಿರು ಹುಲ್ಲು ಮತ್ತು ಮಂಜು ಆವರಿಸಿರುತ್ತದೆ. ಕೋಟೆಯ ತುದಿಯಿಂದ ಸುತ್ತಲಿನ ಸರೋವರಗಳ ನೋಟ ಅತ್ಯದ್ಭುತ.

ರಾಜ್‌ಮಾಚಿ ಕೋಟೆ: ಸಾಹಸ ಪ್ರಿಯರಿಗಾಗಿ ಇರುವ ಪ್ರಸಿದ್ಧ ಚಾರಣ ತಾಣ. ಶ್ರೀವರ್ಧನ್ ಮತ್ತು ಮನರಂಜನ್ ಎಂಬ ಎರಡು ಪ್ರಮುಖ ಕೋಟೆಗಳನ್ನೊಳಗೊಂಡ ರಾಜ್‌ಮಾಚಿಯು ದಟ್ಟವಾದ ಅರಣ್ಯದಿಂದ ಕೂಡಿದೆ. ಮಳೆಗಾಲದಲ್ಲಿ ಇಲ್ಲಿನ ಹಸಿರು, ಕಣಿವೆಗಳು ಮತ್ತು ಸಣ್ಣ-ಸಣ್ಣ ಜಲಪಾತಗಳು ಮನಸೆಳೆಯುತ್ತವೆ.
ಪಾವ್ನಾ ಸರೋವರ: ಲೋನಾವಾಲಾದಿಂದ ತುಸು ದೂರದಲ್ಲಿರುವ ಅತ್ಯಂತ ಪ್ರಶಾಂತವಾದ ಕೃತಕ ಸರೋವರ. ಇತ್ತೀಚಿನ ದಿನಗಳಲ್ಲಿ ಕ್ಯಾಂಪಿಂಗ್ (Camping), ರಾತ್ರಿ ವೇಳೆ ನಕ್ಷತ್ರ ವೀಕ್ಷಣೆ ಮತ್ತು ಬಾರ್ಬೆಕ್ಯು (BBQ) ಪಾರ್ಟಿಗಳಿಗೆ ಇದು ಮಹಾರಾಷ್ಟ್ರದಲ್ಲೇ ಪ್ರಸಿದ್ಧ ತಾಣವಾಗಿದೆ.
ವ್ಯಾಕ್ಸ್ ಮ್ಯೂಸಿಯಂ: ಲಂಡನ್‌ನ ಮ್ಯಾಡಮ್ ತುಸ್ಸಾದ್ ಮಾದರಿಯಲ್ಲಿ ನಿರ್ಮಿಸಲಾದ ಮೇಣದ ಪ್ರತಿಮೆಗಳ ಮ್ಯೂಸಿಯಂ. ದೇಶ-ವಿದೇಶಗಳ ಪ್ರಸಿದ್ಧ ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಬಾಲಿವುಡ್ ನಟ-ನಟಿಯರ ನೈಜ ಗಾತ್ರದ ಮೇಣದ ಪ್ರತಿಮೆಗಳನ್ನು ಇಲ್ಲಿ ಕಾಣಬಹುದು.

ಖಂಡಾಲಾ:
ಖಂಡಾಲಾ (Khandala), ಸಹ್ಯಾದ್ರಿ ಪರ್ವತ ಶ್ರೇಣಿಯ ಮತ್ತೊಂದು ಅದ್ಭುತ ಗಿರಿಧಾಮ. ಲೋನಾವಾಲಾಗೆ ಹೋಲಿಸಿದರೆ ಖಂಡಾಲಾ ಸ್ವಲ್ಪ ಸಣ್ಣದಾಗಿದ್ದರೂ, ಇಲ್ಲಿನ ಪ್ರಾಕೃತಿಕ ಸೌಂದರ್ಯ, ಕಡಿದಾದ ಕಣಿವೆಗಳು ಮತ್ತು ಪ್ರಶಾಂತ ವಾತಾವರಣ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತವೆ. ಇದೂ ಕೂಡ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಮಾವಳ್ ತಾಲೂಕಿನಲ್ಲಿದೆ. ಲೋನಾವಾಲಾದಿಂದ ಕೇವಲ 3 ಕಿಲೋಮೀಟರ್, ಮುಂಬೈನಿಂದ 93 ಕಿ.ಮೀ ಹಾಗೂ ಪುಣೆಯಿಂದ 71 ಕಿ.ಮೀ ದೂರದಲ್ಲಿದೆ.
ಇಲ್ಲಿನ ಪ್ರವಾಸಿ ಆಕರ್ಷಣೆಗಳು:
ಡ್ಯೂಕ್ಸ್ ನೋಸ್ (Duke’s Nose):
ಖಂಡಾಲಾದ ಅತ್ಯಂತ ಪ್ರಸಿದ್ಧ ಸ್ಥಳ. ಈ ಬೆಟ್ಟದ ತುದಿಯ ಆಕಾರವು ‘ವೆಲ್ಲಿಂಗ್ಟನ್‌ನ ಡ್ಯೂಕ್’ ಅವರ ಮೂಗಿನಂತೆ ಕಾಣುವುದರಿಂದ ಬ್ರಿಟಿಷರು ಈ ಹೆಸರು ಕೊಟ್ಟರು. ಸ್ಥಳೀಯವಾಗಿ ಇದನ್ನು ‘ನಾಗಫಣಿ’ (ಹಾವಿನ ಹೆಡೆ) ಎಂದು ಕರೆಯುತ್ತಾರೆ. ಚಾರಣಿಗರಿಗೆ (Trekking) ಮತ್ತು ರಾಕ್ ಕ್ಲೈಂಬಿಂಗ್ ಮಾಡುವವರಿಗೆ ಇದು ಸ್ವರ್ಗ. ಇಲ್ಲಿಂದ ನಿಂತು ನೋಡಿದರೆ ಇಡೀ ಕಣಿವೆಯ ರಮಣೀಯ ನೋಟ ಕಣ್ಣಿಗೆ ಮುದ ನೀಡುತ್ತದೆ.

ಹುಲಿ ಜಿಗಿತ:
ಬೆಟ್ಟದ ಈ ಭಾಗವು ಕಣಿವೆಗೆ ಜಿಗಿಯಲು ಸಿದ್ಧವಾಗಿರುವ ಹುಲಿಯಂತೆ ಕಾಣುತ್ತದೆ. ಮಳೆಗಾಲದಲ್ಲಿ ಇಲ್ಲಿ ಮೋಡಗಳು ನಿಮ್ಮ ಕಾಲಡಿಯಲ್ಲಿ ತೇಲುವಂತೆ ಭಾಸವಾಗುತ್ತದೆ. ಬೆಟ್ಟದ ತುದಿಯಿಂದ ಧುಮ್ಮಿಕ್ಕುವ ಸಣ್ಣ-ಸಣ್ಣ ಜಲಪಾತಗಳು ಮತ್ತು ಕಣಿವೆಯ ಪ್ರಕೃತಿ ಸೌಂದರ್ಯ ಇಲ್ಲಿ ಅತ್ಯದ್ಭುತ.
ಅಮೃತಾಂಜನ್ ಪಾಯಿಂಟ್
ಖಂಡಾಲಾಗೆ ಹೋಗುವ ಆರಂಭದಲ್ಲೇ ಸಿಗುವ ವಿಶಾಲವಾದ ನೋಟದ ತಾಣ. ಇಲ್ಲಿ ನಿಂತರೆ ಸುಂದರವಾದ ಕಣಿವೆ, ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯ ಅಂಕುಡೊಂಕು ರಸ್ತೆಗಳು ಹಾಗೂ ದುರ್ಗಮವಾದ ರೈಲು ಮಾರ್ಗಗಳನ್ನು ಒಟ್ಟಿಗೆ ಕಣ್ಣು ತುಂಬಿಕೊಳ್ಳಬಹುದು.

ಭೋರ್ ಘಾಟ್:
ಇದು ಕೊಂಕಣ ಕರಾವಳಿಯನ್ನು ದಖನ್ ಪ್ರಸ್ಥಭೂಮಿಗೆ ಸಂಪರ್ಕಿಸುವ ಐತಿಹಾಸಿಕ ಪರ್ವತ ಮಾರ್ಗ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾದ ಅತ್ಯಂತ ಕಷ್ಟಕರ ಹಾಗೂ ಇಂಜಿನಿಯರಿಂಗ್ ಚಮತ್ಕಾರದ ರೈಲ್ವೇ ಮಾರ್ಗಕ್ಕೆ ಈ ಘಾಟ್ ಹೆಸರುವಾಸಿ.
ಕುನೆ ಜಲಪಾತ:
ಖಂಡಾಲಾ ಬಳಿ ಇರುವ ‘ಕುನೆ ಜಲಪಾತ’ (Kune Falls) ಭಾರತದ ೧೪ನೇ ಅತಿ ದೊಡ್ಡ ಜಲಪಾತವಾಗಿದ್ದು, ಮೂರು ಹಂತಗಳಲ್ಲಿ ಧುಮ್ಮಿಕ್ಕುವ ಇದರ ದೃಶ್ಯ ಮಳೆಗಾಲದಲ್ಲಿ ನೋಡಲು ಎರಡು ಕಣ್ಣು ಸಾಲದು.
ಖಂಡಾಲಾ ಭೇಟಿಗೆ ಸೂಕ್ತ ಸಮಯ:
ಖಂಡಾಲಾದ ನಿಜವಾದ ಸೌಂದರ್ಯವನ್ನು ಅನುಭವಿಸಲು ಮಳೆಗಾಲವೇ ಬೆಸ್ಟ್. ಇಡೀ ಬೆಟ್ಟ ಹಸಿರು ಹೊದ್ದು, ಜಲಪಾತಗಳು ಮೈದುಂಬಿ ಹರಿಯುತ್ತವೆ. ಇನ್ನೂ ಚಾರಣಕ್ಕಾಗಿ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಚಳಿಗಾಲ ಬೆಸ್ಟ್. ತಂಪಾದ ಮತ್ತು ಹಿತಕರವಾದ ಹವಾಮಾನವಿರುತ್ತದೆ.
ಲೋನಾವಾಲಾ ಕೊಂಚ ಗಿಜಿಗಿಜಿ ಹಾಗೂ ಜನನಿಬಿಡ ಪ್ರದೇಶವಾದರೆ, ಖಂಡಾಲಾ ಶಾಂತತೆ, ನಿಸರ್ಗದ ಮಡಿಲು ಮತ್ತು ಪ್ರಕೃತಿಯ ಮಂಜಿನ ಸ್ಪರ್ಶವನ್ನು ಬಯಸುವ ಪ್ರವಾಸಿಗರಿಗೆ ಅತ್ಯುತ್ತಮ ತಾಣ.

