ಬೆಳಗಾವಿ: ಈಜಲು(Swimming) ಹೋಗಿದ್ದ ಇಬ್ಬರು ಅಪ್ರಾಪ್ತ ಬಾಲಕರು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾದ ಮನಕಲಕುವ ಘಟನೆ ನಗರದ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ಕಪಿಲೇಶ್ವರ(Kapaleeshwarar Temple) ಹೊಂಡದಲ್ಲಿ ನಡೆದಿದೆ.
ನಗರದ ಶಿವಾಜಿ ನಗರದ ನಿವಾಸಿ ಶಿವಂ ಪರಶುರಾಮ ಸುಂಡೀಕರ್ (07) ಮತ್ತು ಶಹಾಪುರ ಜೇಡಗಲ್ಲಿಯ ನಿವಾಸಿ ಪರಶುರಾಮ ರಾಜು ನೀಲಜಕರ್ (11) ಮೃತಪಟ್ಟವರು.
ಬೇಸಿಗೆಯ ಹಿನ್ನೆಲೆ ಈಜಲು ತೆರಳಿದ್ದ ಬಾಲಕರು ನೀರಿನ ಆಳ ತಿಳಿಯದೇ ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿ ಧಾವಿಸಿ ಸತತ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ಜೋಯಿಡಾದಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಹೃದಯಾಘಾತಕ್ಕೆ ಬಲಿ

ಸುದೀರ್ಘ ಕಾರ್ಯಾಚರಣೆಯ ನಂತರ ಏಳು ವರ್ಷದ ಬಾಲಕ ಶಿವಂ ಸುಂಡೀಕರ್ ಮೃತದೇಹ ಪತ್ತೆಯಾಗಿದೆ. ಶಿವಂ ನೀರಿನಲ್ಲಿ ಬಿದ್ದಾಗ ತಲೆಗೆ ಕಲ್ಲಿನ ಪೆಟ್ಟು ಬಿದ್ದಿದ್ದರಿಂದ ಗಂಭೀರ ಗಾಯಗೊಂಡು ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇನ್ನೊಬ್ಬ ಬಾಲಕ ಪರಶುರಾಮನಿಗಾಗಿ ಎಸ್‌ಡಿಆರ್‌ಎಫ್ ತಂಡದ ಶೋಧ ಕಾರ್ಯ ಮುಂದುವರೆದಿದೆ.
ಬಾಲಕರು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಪೋಷಕರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಖಡೇಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

