ನವದೆಹಲಿ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ದ್ವಿ ಪೌರತ್ವ ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ, ರಾಹುಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್ (Allahabad High Court) ಶುಕ್ರವಾರ (ಇಂದು) ಆದೇಶ ನೀಡಿದೆ.
ಉತ್ತರ ಪ್ರದೇಶದ (Uttar Pradesh) ರಾಯ್ಬರೇಲಿ ಜಿಲ್ಲೆಯ ಕೊತ್ವಾಲಿ ಪೊಲೀಸ್ ಠಾಣೆಗೆ ಎಫ್ಐಆರ್ ದಾಖಲಿಸುವಂತೆ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು (Lucknow Bench) ಆದೇಶ ಹೊರಡಿಸಿದೆ. ಇದನ್ನೂ ಓದಿ: ರಾಹುಲ್ ದ್ವಿ ಪೌರತ್ವ ಕೇಸ್ – ಪರಿಶೀಲನೆ ನಡೆಸುತ್ತಿದ್ದೇವೆ ಎಂದ ಕೇಂದ್ರ ಸರ್ಕಾರ
ರಾಹುಲ್ ಗಾಂಧಿ ಅವರು ಪ್ರಸ್ತುತ ರಾಯ್ ಬರೇಲಿ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ರಾಹುಲ್ ವಿರುದ್ಧ ಕಾನೂನು ಕ್ರಮಕ್ಕೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್ ಪ್ರಕರಣ ದಾಖಲಿಸಲು ಆದೇಶಿಸಿದೆ.

ಏನಿದು ಪ್ರಕರಣ?
ಕರ್ನಾಟಕ ಮೂಲದ ಬಿಜೆಪಿ ಕಾರ್ಯಕರ್ತ ಎಸ್. ವಿಘ್ನೇಶ್ ಶಿಶಿರ್ (S Vignesh Shishir) ಎಂಬುವವರು ದ್ವಿ ಪೌರತ್ವ ಹೊಂದಿದ್ದಾರೆಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದರು. ಈ ಮೊದಲು ಜನವರಿ 28 ರಂದು ಲಕ್ನೋದ ವಿಶೇಷ ನ್ಯಾಯಾಲಯವು ರಾಹುಲ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಕೋರಿದ್ದ ವಿಘ್ನೇಶ್ ಅವರ ಅರ್ಜಿಯನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ರಾಹುಲ್ ಗಾಂಧಿ ಅವರು ಭಾರತೀಯ ಪ್ರಜೆಯ ಜೊತೆಗೆ ಬ್ರಿಟಿಷ್ ಪ್ರಜೆಯೂ ಆಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಬ್ರಿಟನ್ ಸರ್ಕಾರದ ಗೌಪ್ಯ ಇಮೇಲ್ಗಳು ಮತ್ತು ಪ್ರಮುಖ ದಾಖಲೆಗಳು ತಮ್ಮ ಬಳಿ ಇವೆ ಎಂದು ಅರ್ಜಿದಾರ ಶಿಶಿರ್ ಹೇಳಿಕೊಂಡಿದ್ದರು.
ಅಲ್ಲದೇ ಬ್ರಿಟಿಷ್ ಪೌರತ್ವ ಹೊಂದಿರುವುದರಿಂದ ರಾಹುಲ್ ಗಾಂಧಿ ಅವರು ಭಾರತದ ಚುನಾವಣೆಗಳಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದಾರೆ ಮತ್ತು ಲೋಕಸಭಾ ಸದಸ್ಯ ಹುದ್ದೆಯನ್ನು ಹೊಂದಲು ಸಾಧ್ಯವಿಲ್ಲ ಎಂದು ಆರೋಪಿಸಿದ್ದರು.

ಈ ಸಂಬಂಧ 2025ರ ಡಿಸೆಂಬರ್ 17 ರಂದು ರಾಹುಲ್ ಗಾಂಧಿ ವಿರುದ್ಧ ರಾಯ್ ಬರೇಲಿಯ ವಿಶೇಷ ಸಂಸದ/ಶಾಸಕ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಬಳಿಕ ಹೈಕೋರ್ಟ್ ಪ್ರಕರಣವನ್ನ ಲಕ್ನೋ ಪೀಠಕ್ಕೆ ವರ್ಗಾಯಿಸಿತು. ಲಕ್ನೋ ಪೀಠ ಅರ್ಜಿಯನ್ನ ವಜಾಗೊಳಿಸಿದ ಬಳಿಕ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಅರ್ಜಿಯನ್ನ ಪುರಸ್ಕರಿಸಿದ ಕೋರ್ಟ್ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.

