ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿದ್ದ ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಲ್ಲಿ (Gruhalakshmi, Gruha Jyothi Scheme) ಮೇಜರ್ ಸರ್ಜರಿಗೆ ರಾಜ್ಯ ಸರ್ಕಾರ ಮುಂದಾಗಿದೆ. ಎರಡು ಯೋಜನೆಗಳಲ್ಲಿ ನಕಲಿ ಫಲಾನುಭವಿಗಳನ್ನ ಪತ್ತೆ ಹಚ್ಚುವುದಕ್ಕಾಗಿ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆ ಮಾಡೋದಕ್ಕೆ ಕಡ್ಡಾಯ ಮಾಡಿದೆ. ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳು ಸೌಲಭ್ಯ ಪಡೆಯಬೇಕಾದ್ರೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.
ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ ಮಾಡೋದಕ್ಕೆ ಕಾರಣ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿ ಯೋಜನೆಯಲ್ಲಿ ನಕಲಿ ಫಲಾನುಭವಿಗಳು ಇದ್ದಾರೆ ಎಂಬುದು ಸರ್ಕಾರದ ಆರೋಪ. ಗೃಹಲಕ್ಷ್ಮಿ ಯೋಜನೆಯಲ್ಲಿ 1.28 ಕೋಟಿ ಫಲಾನುಭವಿಗಳು ಇದ್ದಾರೆ. ಅದರಲ್ಲಿ 4.30 ಲಕ್ಷ ಫಲಾನುಭವಿಗಳು ತೆರಿಗೆ ಪಾವತಿದಾರರಿದ್ದಾರೆ. ಮೃತಪಟ್ಟವರ ಖಾತೆಗೂ ಹಣ ಸಂದಾಯವಾಗುತ್ತಿದೆ. ಸುಮಾರು 100 ಕೋಟಿ ರೂ. ಹಣ ಸತ್ತವರ ಖಾತೆಗೆ ಹೋಗಿದೆ ಎಂದು ಹೇಳಲಾಗ್ತಿದೆ. ಮತ್ತೆ ಬೇರೆ ನಂಬರ್ ಗಳನ್ನ ಸೇರಿಸಿ ಹಣ ಪಡೆಯುತ್ತಾ ಇದ್ದಾರೆ. ಯಾರು ಏನು ಅಂತಾ ಗೊತ್ತಿಲ್ಲ. ಹಾಗಾಗಿ ಹೊಸ ಅರ್ಜಿ ಸಲ್ಲಿಕೆ ಮಾಡಬೇಕು ಅಂತಾ ಸಿಎಂ ಡಿಕೆ ಶಿವಕುಮಾರ್ (DK Shivakumar) ಆದೇಶ ಮಾಡಿದ್ದಾರೆ.

ಇನ್ನೂ 1.68 ಕೋಟಿಗೂ ಹೆಚ್ಚು ಗೃಹಜ್ಯೋತಿ ಫಲಾನುಭವಿಗಳು ಇದ್ದಾರೆ. ಅವರು ಕೂಡ ಹೊಸದಾಗಿ ಅರ್ಜಿ ಸಲ್ಲಿಸಬೇಕು. ಈ ಯೋಜನೆಯಲ್ಲೂ ಒಬ್ಬರು ಐದಾರೂ ಮೀಟರ್ ಪಡೆದಿದ್ದಾರೆ. ಅವರು ಅಲ್ಲೇ ವಾಸ ಮಾಡ್ತಾ ಇದ್ದಾರಾ? ಅಥವಾ ಆ ನಿವಾಸದಲ್ಲಿ ಬೇರೆ ರಾಜ್ಯದವರು ವಾಸ ಮಾಡ್ತಾ ಇದ್ದಾರಾ? ಕರ್ನಾಟಕದವರು ಅಲ್ವೋ ಅಂತಾ ಪತ್ತೆ ಹಚ್ಚುವುದಕ್ಕೆ ಮುಂದಾಗಿದ್ದಾರೆ.
ಮನೆ, ಅಂಗಡಿ ಮೇಲೆ ಕೆಳಗೆ ಇರುತ್ತೆ. ಅಂಗಡಿಗೆ ಬೇಕಾದ್ರೆ ಅವರು ಮೀಟರ್ ಬೇರೆ ಹಾಕಿಸಲಿ… ನಾವು ವಾಸಕ್ಕೆ ಮಾತ್ರ ಗೃಹಜ್ಯೋತಿ ಕೊಡುತ್ತಿದ್ದೇವೆ. ಅವರ ಬ್ಯುಸಿನೆಸ್‌ಗೆಲ್ಲಾ ನಾವು ಕೊಡೋದಕ್ಕೆ ಆಗಲ್ಲ ಅಂತಾ ಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹೊಸ ಅರ್ಜಿ ಸಲ್ಲಿಕೆ ಮಾಡಿದವರಿಗೆ ಗ್ಯಾರಂಟಿ ಕಾರ್ಡ್ ಕೊಡ್ತೇವೆ ಅಂತಲೂ ತಿಳಿಸಿದ್ದಾರೆ.
ಹೊಸ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಹೇಗಿರಲಿದೇ?
ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಅರ್ಜಿ ತಯಾರಿಸಿದೆ. ಹೊಸ ಅರ್ಜಿ ಮತ್ತು ಅದರಲ್ಲಿ ಇರುವ ಪ್ರಶ್ನೆಗಳನ್ನ ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅರ್ಜಿ ಪ್ರತಿಯಲ್ಲಿ ಯಾವೆಲ್ಲ ಪ್ರಶ್ನೆಗಳನ್ನ ಓಕೆ ಮಾಡ್ತಾರೆ ಎಂಬುದು ಪ್ರಶ್ನೆ ಆಗಿದೆ. ಸುಮಾರು 8-10 ಪ್ರಶ್ನೆಗಳು ಅರ್ಜಿ ಇರಲಿದೆ. ಬಯೋಮೆಟ್ರಿಕ್ ಜೊತೆಗೆ ಫಲಾನುಭವಿಗಳು ಅರ್ಜಿಯಲ್ಲಿ ಇರುವ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಆಗಿದ್ರೆ ಅರ್ಜಿ ಪ್ರತಿಯಲ್ಲಿ ಯಾವೆಲ್ಲ ಪ್ರಶ್ನೆಗಳು ಇರಲಿವೆ ಅಂತಾ ನೋಡೋದಾದ್ರೆ..

ಏನೆಲ್ಲ ಪ್ರಶ್ನೆಗಳು ಇರಲಿವೆ? ಯಾವೆಲ್ಲಾ ದಾಖಲೆ ಕೊಡಬೇಕು?
* ಮನೆ ಯಜಮಾನಿ ಯಾರು? ಆಧಾರ್ ಸಂಖ್ಯೆ ಏನು ?
* ಮನೆಯ ಯಜಮಾನಿ ಬ್ಯಾಂಕ್ ಖಾತೆ ವಿವರ
* ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು
* ಯಾವ ಜಾತಿ ?
* ಮನೆಯ ಪತಿಯ ಹೆಸರು? ಆಧಾರ್ ಸಂಖ್ಯೆ ?
* ಆಧಾರ್ ಕಾರ್ಡ್ ದಾಖಲಾತಿ ಸಲ್ಲಿಕೆ ಮಾಡಬೇಕು
* ನೀವು ಐಟಿ ಮತ್ತು ಜಿಎಸ್ ಟಿ ಪಾವತಿದಾರರ ?
* ನಿಮ್ಮ ಬಳಿ APL ಕಾರ್ಡ್ ಅಥವಾ BPL ಕಾರ್ಡ್ ಇದೆಯಾ?
ಗ್ಯಾರಂಟಿ ಯೋಜನೆಗಳ ಹೊಸ ಅರ್ಜಿ ಸಲ್ಲಿಕೆಗೆ ಸರ್ಕಾರ ಶೀಘ್ರದಲ್ಲೇ ಅವಕಾಶ ನೀಡುವ ಸಾಧ್ಯತೆ ಇದೆ. ಬೆಂಗಳೂರು ಒನ್ , ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಆಫ್ ಲೈನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ. ಜೊತೆಗೆ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರು, ಸದಸ್ಯರು ಮತ್ತು ಪದಾಧಿಕಾರಿಗಳಿಗೆ ಅರ್ಜಿ ಸಲ್ಲಿಕೆ ಜವಾಬ್ದಾರಿ ನೀಡುವ ಸಾಧ್ಯ ಇದೆ. ಸರ್ಕಾರ ಯಾವಾಗ ಅರ್ಜಿ ಸಲ್ಲಿಕೆ ಗೆ ಅವಕಾಶ ಕೊಡುತ್ತೆ? ಏನು ಮಾರ್ಗಸೂಚಿ ಬರಲಿದೆ ಎಂಬುದನ್ನ ಕಾದು ನೋಡಬೇಕಿದೆ.
