ಇತ್ತೀಚಿನ ದಿನಗಳಲ್ಲಿ ಸರ್ಕಾರ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಮಿತಿಮೀರಿದ ಭ್ರಷ್ಟಾಚಾರದಿಂದ ಬಡವರು, ಜನಸಾಮಾನ್ಯರು ಹೈರಾಣಾಗುತ್ತಿದ್ದಾರೆ. ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ ವಿರುದ್ದ ಅಲ್ಲಲ್ಲಿ ಹೋರಾಟಗಳು, ಪ್ರತಿಭಟನೆಗಳು ನಡೆಯುತ್ತಿದ್ದರೂ, ಅದಾವುದಕ್ಕೂ ಇನ್ನೂ ಪೂರ್ಣ ಕಡಿವಾಣವಂತೂ ಬಿದ್ದಿಲ್ಲ ಎಂಬುದು ವಾಸ್ತವ. ಈಗ ಇದೇ ಭ್ರಷ್ಟಾಚಾರ, ಅನ್ಯಾಯ, ಸಾಮಾಜಿಕ ಅಸಮಾನತೆಯ ವಿರುದ್ದ ಸ್ಯಾಂಡಲ್‌ವುಡ್‌ನ ಯುವ ಪ್ರತಿಭೆಗಳ ತಂಡವೊಂದು ‘ನಮ್ಮೂರು ನಮ್ಮವರು’ ಎಂಬ ಮ್ಯೂಸಿಕ್ ಆಲ್ಬಂ ಹಾಡಿನ ಮೂಲಕ ಜನಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗುತ್ತಿದೆ.
ಹೌದು, ನಮ್ಮೂರು ನಮ್ಮವರು ಎಂಬ ಹೆಸರಿನಲ್ಲಿ ತಯಾರಾಗಿರುವ ಈ ಮ್ಯೂಸಿಕ್ ಆಲ್ಬಂ ಹಾಡಿನಲ್ಲಿ ಭಾವತೀರ ಯಾನ ಚಿತ್ರದ ನಾಯಕ ನಟ ತೇಜಸ್ ಕಿರಣ್, ಡಿಕೆಡಿ ಖ್ಯಾತಿಯ ಶಶಿನ್ ಆರ್, ಶ್ರೀರಾಘವೇಂದ್ರ ಮಹಾತ್ಮೆ ಧಾರಾವಾಹಿ ಖ್ಯಾತಿಯ ಭವಾನಿ ಪುರೋಹಿತ್, ಮಗ್ಗಿ ಪುಸ್ತಕ ಚಿತ್ರದ ಖ್ಯಾತಿಯ ನಟ ಸಂದೀಪ್ ರಾಜಗೋಪಾಲ್, ನಟರಾದ ಸುನಿಲ್, ಅರುಣ್, ಮುರುಡಯ್ಯ ಸೇರಿದಂತೆ ಅನೇಕ ಕಲಾವಿದರು ತೆರೆಮೇಲೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಶಾಖಾಹಾರಿ, ಭಾವತೀರ ಯಾನ, ಪಬ್ಬಾರ್ ಸೇರಿದಂತೆ ಹಲವು ಸದಭಿರುಚಿ ಚಿತ್ರಗಳಿಗೆ ವಿಭಿನ್ನ ರೀತಿಯಲ್ಲಿ ಸಂಗೀತ ಸಂಯೋಜಿಸಿ, ಯುವ ಸಂಗೀತ ನಿರ್ದೇಶಕರ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಿರುವ ಮಯೂರ್ ಅಂಬೇಕಲ್ಲು ‘ನಮ್ಮೂರು ನಮ್ಮವರು’ ಆಲ್ಬಂಗೆ ಸಂಗೀತ ಸಂಯೋಜಿಸಿ, ಇದರ ಗೀತೆಗೆ ಧ್ವನಿಯಾಗಿದ್ದಾರೆ. ವಿಶಾಕ್ ನಾಗಲಾಪುರ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಸಮಾಜದ ನಿಜ ದನಿ ಏನಾಗಬೇಕು? ಎಂಬ ಪ್ರಶ್ನೆಗೆ ಸೆಡ್ಡು ಹೊಡೆದು ಪ್ರತಿಧ್ವನಿಸುವಂತ ಪದಗಳನ್ನು ಮೂಲಕ ಹಾಡಿನಲ್ಲಿ ಪೋಣಿಸಿದ್ದಾರೆ.

‘ನಮ್ಮೂರು ನಮ್ಮವರು’ ಹಾಡಿಗೆ ತೇಜಸ್ ಕಿರಣ್ ಹಾಗೂ ಮಯೂರ್ ಅಂಬೆಕಲ್ಲು ಒಟ್ಟಾಗಿ ತಮ್ಮ ಪರಿಕಲ್ಪನೆಯ ದೃಶ್ಯರೂಪ ಕೊಟ್ಟು ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ ‘ಭಾವತೀರ ಯಾನ’, ‘ಉಡಾಳ’, ‘ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’, ‘ಇನ್ ಹಿಸ್ ನೇಮ್’ ಮುಂತಾದ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ ಅನುಭವವಿರುವ ಛಾಯಾಗ್ರಹಕ ಶಿವಶಂಕರ ನೂರಂಬಡ ಈ ಗೀತೆಗೆ ಛಾಯಾಗ್ರಹಣ ಮಾಡಿದ್ದಾರೆ. ಅನು ರಂಜನ್ ಹೆಚ್. ಆರ್. ಸಂಕಲನ ಮತ್ತು ಡಿಐ ಹಾಗೂ ಶಿಬಿನ್ ನಡು ವೀಟ್ಟಿಲ್ ಆಡಿಯೋಗ್ರಫಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ‘ನಮ್ಮೂರು ನಮ್ಮವರು’ ಮ್ಯೂಸಿಕ್ ಆಲ್ಬಂ ಬಗ್ಗೆ ಮಾತನಾಡಿರುವ ತಂಡ, ‘ಇದು ಯಾವುದೇ ಫಲಾಪೇಕ್ಷೆ ಇಲ್ಲದೆ ಮಾಡಿರುವ ಒಂದು ಕಾರ್ಯ ‘ನಮ್ಮೂರು ನಮ್ಮವರು’ ಹಾಡಿನ ಮೂಲಕ ಸಂಘಟನೆಯ ಆಶಯ, ಮಣ್ಣಿನ ನಂಟು, ಜನರ ಆತ್ಮೀಯತೆ ಹಾಗೂ ಸಮುದಾಯದ ಒಗ್ಗಟ್ಟಿನ ದನಿ, ಹಾಗೂ ಅದರ ಶಕ್ತಿಗಳನ್ನು, ಸಂಗೀತ ಮತ್ತು ದೃಶ್ಯ ರೂಪದಲ್ಲಿ ಅಭಿವ್ಯಕ್ತಿಸುವ ಪ್ರಯತ್ನವನ್ನ ಮಾಡಲಾಗಿದೆ. ಇದು ಕೇವಲ ಒಂದು ಗೀತೆಯಲ್ಲ; ಊರು, ಜನ, ಜನದನಿ ಮತ್ತು ಪರಿವರ್ತನಾತ್ಮಕ ನಾಯಕತ್ವದ ಬಗ್ಗೆ ಇರುವ, ಬದ್ಧತೆಯನ್ನು ಪ್ರತಿಧ್ವನಿಸುವ ಸಮೂಹ ಧ್ವನಿಯಾಗಿದೆ. ಈ ಗೀತೆಯ ಮೂಲಕ ‘ನಮ್ಮೂರು ನಮ್ಮವರು’ ಎಂಬ ದೃಷ್ಟಿಕೋನವನ್ನು ಜನಸಾಮಾನ್ಯರ ಹೃದಯಕ್ಕೆ ಹತ್ತಿರವಾಗುವಂತೆ ಪರಿಚಯಿಸಲಾಗುತ್ತದೆ’ ಎಂದಿದೆ. ಅಂದಹಾಗೆ, ಹಾನಗಲ್ ಮೂಲದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂದೀಪ್ ಪಾಟೀಲ್ ‘ನಮ್ಮೂರು ನಮ್ಮವರು’ ಎಂಬ ಈ ಸಾಮಾಜಿಕ ಸಂಘಟನೆಯ ಗೀತೆಗೆ ಬೆಂಬಲವಾಗಿ ನಿಂತಿದ್ದಾರೆ. ‘ಆರೋಹ ಫಿಲಂಸ್’ ಮತ್ತು ‘ಆರಾ ಫಿಲಂಸ್’ ಸಹಯೋಗದಲ್ಲಿ ‘ನಮ್ಮೂರು ನಮ್ಮವರು’ ಸಂಘಟನಾ ಗೀತೆ ನಿರ್ಮಾಣವಾಗಿದ್ದು ಈಗಾಗಲೇ ‘ನಮ್ಮೂರು ನಮ್ಮವರು’ ಮ್ಯೂಸಿಕ್ ಆಲ್ಬಂನ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೇ ಜೂ. 5 ರಂದು ಈ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ.
