ಬೆಂಗಳೂರು: ಹೊಸದಾಗಿ ರೌಡಿ ನಿಗ್ರಹ ಪಡೆ (Rowdy Squads) ರಚನೆ ಮಾಡಿ ಡಿಜಿ-ಐಜಿಪಿ ಡಾ. ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಯಾ ಸರ್ಕಲ್ ಇನ್ಸ್‌ಪೆಕ್ಟರ್‌ಗಳ ಉಸ್ತುವಾರಿಯಲ್ಲಿ ರೌಡಿ ನಿಗ್ರಹ ಪಡೆಗಳ ರಚನೆ ಮಾಡಿ ಆದೇಶಿಸಿದ್ದಾರೆ.
ನೂತನ ಸಿಎಂ ಡಿ.ಕೆ.ಶಿವಕುಮಾರ್ ಮೊದಲ ಪತ್ರಿಕಾಗೋಷ್ಠಿಯಲ್ಲಿ ರೌಡಿಗಳನ್ನ ಹಾಗೂ ರೌಡಿ ಚಟುವಟಿಕೆಯನ್ನ ಮಟ್ಟ ಹಾಕಲು ರೌಡಿ ನಿಗ್ರಹ ದಳವನ್ನ ರಚನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಸಿಎಂ ಡಿ.ಕೆ.ಶಿವಕುಮಾರ್ ಸೂಚನೆಯ ಮೇರೆಗೆ ರೌಡಿ ನಿಗ್ರಹ ಪಡೆಯನ್ನ ರಚಿಸಿ ಆದೇಶಿಸಲಾಗಿದೆ. ಇದನ್ನೂ ಓದಿ: 2ನೇ ಹಂತದ ಕ್ಯಾಬಿನೆಟ್ ರಚನೆಗೆ ಸಿದ್ಧತೆ – ಸಚಿವಾಕಾಂಕ್ಷಿಗಳ ಲಾಬಿ ಜೋರು
ರೌಡಿ ನಿಗ್ರಹ ದಳ ಮಾಡಬೇಕದ ಕೆಲಸಗಳು
* ವ್ಯಕ್ತಿಗಳ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಪರಿಶೀಲನೆ ನಡೆಸಬೇಕು.
* ಪದೇ ಪದೇ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದರೆ ಹೊಸ ರೌಡಿಶೀಟ್‌ಗಳನ್ನು ತೆರೆಯಬೇಕು.
* ಠಾಣಾ ವ್ಯಾಪ್ತಿಯ ರೌಡಿಶೀಟರ್‌ಗಳ ಮಾಹಿತಿ ಸಂಗ್ರಹವಾಗಿರಬೇಕು.
* ರೌಡಿಶೀಟರ್‌ಗಳ ಚಟುವಟಿಕೆಗಳು, ಚಲನವಲನಗಳ ಮೇಲೆ ಕಣ್ಗಾವಲು ಇಟ್ಟಿರಬೇಕು.
* ಅಕ್ಟಿವ್ ರೌಡಿಗಳು, ಅಪರಾಧ ಚಟುವಟಿಯಲ್ಲಿ ಭಾಗಿಯಾಗುವ ಗ್ಯಾಂಗ್‌ಗಳ ಹಿನ್ನೆಲೆ, ಚಲನವಲನದ ಮೇಲೆ ನಿಗಾ ಇಟ್ಟಿರಬೇಕು.
* ನಿರಂತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವವರ ವಿರುದ್ಧ ಕೋಕಾ, ಗೂಂಡಾ ಕಾಯ್ದೆ, ಕೋಕಾ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡಬೇಕು.
* ರೌಡಿಗಳ ವಿರುದ್ಧ ವಾರೆಂಟ್‌ಗಳು, ಬಾಂಡ್‌ಗಳು ಮತ್ತು ಇತರ ಕಾನೂನು ಪ್ರಕ್ರಿಯೆಗಳ ಪರಿಣಾಮಕಾರಿ ಜಾರಿಯನ್ನು ಖಚಿತಪಡಿಸಿಕೊಳ್ಳಬೇಕು.
* ಬೀಟ್ ಪೊಲೀಸರು ಮತ್ತು ಸ್ಥಳೀಯ ಗುಪ್ತಚರ ಮೂಲಗಳೊಂದಿಗೆ ನಿಕಟ ಸಂಪರ್ಕವನ್ನು ಕಾಪಾಡಿಕೊಳ್ಳಬೇಕು.
* ದುರ್ಬಲ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆಗಳು ಮತ್ತು ಆಕಸ್ಮಿಕ ತಪಾಸಣೆಗಳನ್ನು ನಡೆಸಬೇಕು.
ಕ್ರಿಮಿನಲ್ ಒಬ್ಬ ಪದೇ ಪದೇ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ವಿಚಾರ ತಿಳಿದು ಕ್ರಿಮಿನಲ್‌ಗಳ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಅಧಿಕಾರಿಗಳು ವಿಫಲವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.
