ಮುಂಬೈ: ಬಿಸಿಸಿಐ (BCCI) ಮುಂಬರುವ ಐರ್ಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20 (T20I) ಸರಣಿ ಹಾಗೂ ಏಷ್ಯನ್ ಗೇಮ್ಸ್‌ಗೆ ಭಾರತ ತಂಡವನ್ನು (Team India) ಪ್ರಕಟಿಸಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಸತತ ಎರಡು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಯಶಸ್ವಿ ನಾಯಕ ರಜತ್ ಪಟಿದಾರ್ ಅವರಿಗೆ ತಂಡದಲ್ಲಿ ಸ್ಥಾನ ನೀಡದೆ ಕಡೆಗಣಿಸಿರುವುದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.
ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದರೂ ಪಟಿದಾರ್ ಅವರನ್ನು ಆಯ್ಕೆ ಮಾಡದಿರುವುದಕ್ಕೆ ಅಭಿಮಾನಿಗಳು ಹಾಗೂ ಕ್ರಿಕೆಟ್ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದ್ದು, ಆಯ್ಕೆ ಸಮಿತಿಯ ನಿರ್ಧಾರವನ್ನು ಹಲವರು ಟೀಕಿಸಿದ್ದಾರೆ.
ಈ ಬೆನ್ನಲ್ಲೇ, ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ (Ajit Agarkar) ರಜತ್ ಪಟಿದಾರ್ ಅವರನ್ನು ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡದಿರುವ ಕುರಿತು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಅಜಿತ್ ಅಗರ್ಕರ್, ನಾವು ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಆಟಗಾರನ ಬಗ್ಗೆಯೂ ಸುದೀರ್ಘವಾಗಿ ಚರ್ಚೆ ನಡೆಸುತ್ತೇವೆ. ಸುಮ್ಮನೆ ಕುಳಿತು 15 ಆಟಗಾರರನ್ನು ಆಯ್ಕೆ ಮಾಡುವುದಿಲ್ಲ. ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಅಪಾರ ಪ್ರತಿಭೆಗಳಿವೆ. ನೀವು ಐಪಿಎಲ್ ಅಥವಾ ದೇಶಿ ಕ್ರಿಕೆಟ್ ಅನ್ನು ಗಮನಿಸಿದರೆ, ರಾಷ್ಟ್ರೀಯ ತಂಡದಲ್ಲಿ ಆಡಲು ಅರ್ಹರಾಗಿರುವ ನೂರಾರು ಆಟಗಾರರು ನಮಗೆ ಸಿಗುತ್ತಾರೆ ಎಂದರು.

ಈಗಾಗಲೇ ಭಾರತ ತಂಡದಲ್ಲಿರುವ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇತ್ತೀಚಿಗಷ್ಟೇ ನಾವು ಟಿ20 ವಿಶ್ವಕಪ್ ಗೆದ್ದಿದ್ದೇವೆ. ಸದ್ಯಕ್ಕೆ ಅತ್ಯಂತ ಸಮತೋಲಿತ ತಂಡವನ್ನೇ ಆಯ್ಕೆ ಮಾಡಿದ್ದೇವೆ ಎಂಬ ವಿಶ್ವಾಸ ನಮಗಿದೆ. ನಿಯಮದ ಪ್ರಕಾರ ನಾವು ಕೇವಲ 15 ಆಟಗಾರರನ್ನು ಮಾತ್ರ ಆಯ್ಕೆ ಮಾಡಲು ಸಾಧ್ಯ. ಇಂತಹ ಸಂದರ್ಭದಲ್ಲಿ ಫಾರ್ಮ್‌ನಲ್ಲಿದ್ದರೂ ಕೆಲವು ಆಟಗಾರರು ಅವಕಾಶದಿಂದ ವಂಚಿತರಾಗುವುದು ಸಹಜ. ಸದ್ಯದ ಭಾರತೀಯ ಟಿ20 ತಂಡದ ಆಟಗಾರರ ಬಗ್ಗೆ ನಮಗೆ ಹೆಮ್ಮೆಯಿದೆ ಎಂದು ಅಗರ್ಕರ್ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.
ಇತ್ತೀಚೆಗಷ್ಟೇ ಮುಕ್ತಾಯಗೊಂಡ 2026ರ ಐಪಿಎಲ್ ಋತುವಿನಲ್ಲಿ ರಜತ್ ಪಟಿದಾರ್ ನಾಯಕತ್ವದ ಜವಾಬ್ದಾರಿಯ ನಡುವೆಯೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಆರ್‌ಸಿಬಿ ಪರ 15 ಪಂದ್ಯಗಳನ್ನಾಡಿದ್ದ ಅವರು 192.69ರ ಭರ್ಜರಿ ಸ್ಟ್ರೈಕ್ ರೇಟ್‌ನಲ್ಲಿ ಒಟ್ಟು 501 ರನ್ ಸಿಡಿಸಿದ್ದರು. ವಿಶೇಷವಾಗಿ ಸ್ಪಿನ್ನರ್‌ಗಳ ವಿರುದ್ಧ ಅಬ್ಬರಿಸುವ ಪಟಿದಾರ್, 12 ರಿಂದ 16ನೇ ಓವರ್‌ಗಳ ಅವಧಿಯಲ್ಲಿ 216.67ರ ಸ್ಟ್ರೈಕ್ ರೇಟ್‌ನಲ್ಲಿ 234 ರನ್ ಕಲೆಹಾಕಿ ಮಧ್ಯಮ ಕ್ರಮಾಂಕದ ಬೆನ್ನೆಲುಬಾಗಿದ್ದರು. ಅಲ್ಲದೆ, ಡೆತ್ ಓವರ್‌ಗಳಲ್ಲಿ (ಕೊನೆಯ 4 ಓವರ್) 278.57ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸುವ ಅಸಾಧಾರಣ ಸಾಮರ್ಥ್ಯ ಪ್ರದರ್ಶಿಸಿದ್ದರು. ಇಷ್ಟೆಲ್ಲಾ ಬಲಿಷ್ಠ ಅಂಕಿ-ಅಂಶಗಳನ್ನು ಹೊಂದಿದ್ದರೂ ಅವರಿಗೆ ಸ್ಥಾನ ಸಿಗದಿರುವುದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಆಯ್ಕೆ ಸಮಿತಿಯು ಈ ಬಾರಿ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಸೂರ್ಯಕುಮಾರ್ ಯಾದವ್ ಬದಲಿಗೆ ಶ್ರೇಯಸ್ ಅಯ್ಯರ್ ಅವರಿಗೆ ನಾಯಕತ್ವ ನೀಡಲಾಗಿದ್ದು, ಯುವ ಬ್ಯಾಟಿಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅವರಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ರಜತ್ ಪಟಿದಾರ್ ಅವರು ಆಡುವ 4 ಮತ್ತು 5ನೇ ಕ್ರಮಾಂಕಕ್ಕೆ ಆಯ್ಕೆ ಸಮಿತಿಯು ಸದ್ಯ ಹಳೆಯ ಆಟಗಾರರಾದ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರನ್ನೇ ಮುಂದುವರಿಸಲು ನಿರ್ಧರಿಸಿದೆ. ಈ ರಣತಂತ್ರವೇ ಪಟಿದಾರ್ ಅವರ ಕೈ ತಪ್ಪಲು ಮುಖ್ಯ ಕಾರಣ ಎನ್ನಲಾಗುತ್ತಿದೆ.
