ಭಾರತೀಯ ಸೇನೆಯ ಶೌರ್ಯ, ಸಾಹಸ ಕುರಿತಾದ ಅನೇಕ ಸಿನಿಮಾಗಳು ಈಗಾಗಲೇ ಬಾಲಿವುಡ್ನಲ್ಲಿ (Bollywood) ಬಂದಿವೆ, ಈಗಲೂ ಬರುತ್ತಿವೆ. ಉರಿ: ದಿ ಸರ್ಜಿಲ್ ಸ್ಟ್ರೈಕ್, ಸ್ಕೈಫೋರ್ಸ್, ಫೈಟರ್, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಇನ್ನೂ ಅನೇಕ ಸಿನಿಮಾಗಳು ಭಾರತೀಯ ಮೂರು ಸೇನೆಗಳ ಪರಾಕ್ರಮಕ್ಕೆ ಹಿಡಿದ ಕನ್ನಡಿಯಾಗಿವೆ. ಇದೀಗ ಪಹಲ್ಗಾಮ್ ದಾಳಿಗೆ (Pahalgam Attack) ಪ್ರತಿಯಾಗಿ ಭಾರತ ನಡೆದ ʻಆಪರೇಷನ್ ಸಿಂಧೂರʼ ವಿಶೇಷ ಕಾರ್ಯಾಚರಣೆ ಕುರಿತಾದ ಸಿನಿಮಾ ಸೆಟ್ಟೇರಲು ರೆಡಿಯಾಗಿದೆ.
‘ದಿ ಕಾಶ್ಮೀರ್ ಫೈಲ್ಸ್’, ‘ದಿ ವ್ಯಾಕ್ಸಿನ್ ವಾರ್’ ಮತ್ತು ‘ದಿ ಬೆಂಗಾಲ್ ಫೈಲ್ಸ್’ ನಂತಹ ಸಿನಿಮಾಗಳನ್ನ ಮಾಡಿರುವ ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹಾಗೂ ಸಿನಿ ನಿರ್ಮಾಪಕ ಭೂಷಣ್ ಕುಮಾರ್ ಗುರುವಾರ ತಮ್ಮ ಹೊಸ ಚಿತ್ರ ʻಆಪರೇಷನ್ ಸಿಂಧೂರ್ʼ (Operation Sindoor) ಅನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ವಾಯುಪಡೆಯ ಶೌರ್ಯ-ಸಾಹಸಕ್ಕೆ ಕನ್ನಡಿ ಹಿಡಿದ ಸಿನಿಮಾಗಳನ್ನ ನೀವೂ ನೋಡಿ….

ಲೆಫ್ಟಿನೆಂಟ್ ಜನರಲ್ ಕೆಜೆಎಸ್ ‘ಟೈನಿ’ ಧಿಲ್ಲೋನ್ ಅವರ ಪುಸ್ತಕ, ʻಆಪರೇಷನ್ ಸಿಂಧೂರ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಇಂಡಿಯಾಸ್ ಡೀಪ್ ಸ್ಟ್ರೈಕ್ಸ್ ಇನ್ಸೈಡ್ ಪಾಕಿಸ್ತಾನ್ʼ ಆಧರಿಸಿ ಈ ಸಿನಿಮಾ ನಿರ್ಮಾಣ ಮಾಡಲಾಗುತ್ತಿದೆ. ಈ ಬಗ್ಗೆ ಖುದ್ದು ವಿವೇಕ್ ಅಗ್ನಿಹೋತ್ರಿ ಅವ್ರೇ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಶೀಘ್ರದಲ್ಲೇ ಚಿತ್ರೀಕರಣದ ತಯಾರಿ ಶುರುವಾಗಲಿದ್ದು, ನೈಜ ಘಟನಾ ಸ್ಥಳಗಳಿಗೆ ನಿರ್ದೇಶಕರು ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಕಾರ್ಯಕ್ರಮವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ವಿವೇಕ್ ಅಗ್ನಿಹೋತ್ರಿ (Vivek Agnihotri), ಸಿನಿಮಾವನ್ನು ಸಕಾಲಿಕ ಮತ್ತು ಮಹತ್ವದ್ದಾಗಿರಿಸಿಕೊಂಡು ಕಾರ್ಯಾಚರಣೆಯ ಆಳವನ್ನ ತೆರೆಯ ಮೇಲೆ ಇರುವುದು ನಮ್ಮ ಉದ್ದೇಶವಾಗಿದೆ. ಈ ಸಿನಿಮಾ 2025 ರ ಮೇ 6 ರಿಂದ ಮೇ 10 ರ ನಡುವಿನ ಘಟನೆಗಳನ್ನ ಆಧರಿಸಿದ್ದು, ಕಥೆಯನ್ನ ಪ್ರೇಕ್ಷಕರಿಗೆ ವಿಶ್ವಾಸಾರ್ಹತೆಯೊಂದಿಗೆ ಕಟ್ಟಿಕೊಡುವ ಪ್ರಯತ್ನ ಮಾಡುತ್ತೇವೆ. ಒಟ್ಟಾರೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹೇಗೆ ನಡೆಯಿತು ಅನ್ನೋದನ್ನ ತೆರೆಯ ಮೇಲೆ ವಿವರಿಸಲಾಗುತ್ತದೆ ಎಂದು ಹೇಳಿದ್ದಾರೆ.

ನಿರ್ಮಾಪಕ ಭೂಷಣ್ ಕುಮಾರ್ (Bhushan Kumar) ಮಾತನಾಡಿ, ಇದನ್ನ ಸಿನಿಮಾ ಅಂತ ನೋಡೋದಕ್ಕಿಂತ ಮಹತ್ವದ ಕಾರ್ಯ ಅಂತಲೇ ಬಣ್ಣಿಸಬಹುದು. ಕೆಲವು ಕಥೆಗಳನ್ನ ನಾವು ಆಯ್ಕೆ ಮಾಡಲ್ಲ, ಅವು ನಿಮ್ಮನ್ನ ಆಯ್ಕೆ ಮಾಡುತ್ತವೆ ಎಂದು ವಿವೇಕ್ ಅಗ್ನಿಹೋತ್ರಿ ಅವರನ್ನ ಶ್ಲಾಘಿಸಿದ್ದಾರೆ.
ಆಪರೇಷನ್ ಸಿಂಧೂರ್ ಅಂತಹ ಒಂದು ಕಥೆ, ಅದ್ರಲ್ಲೂ ಒಂದು ರಾಷ್ಟ್ರ ಅಂತಹ ಘಟನೆಗಳನ್ನು ನೋಡಿದಾಗ, ಅವುಗಳನ್ನು ಸತ್ಯದರ್ಶನವಾಗಿ ದಾಖಲಿಸುವುದು ಮುಖ್ಯವಾಗುತ್ತದೆ ಎಂದಿದ್ದಾರೆ. ಆದ್ರೆ ಕಥೆಗೆ ಅಗತ್ಯ ಕಲಾವಿದರ ಆಯ್ಕೆ ಕುರಿತು ಎಲ್ಲಿಯೂ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ʻಕಾಂತಾರʼ ದೈವ ನಿಂದಿಸಿದ್ದ ರಣವೀರ್ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ

ಸಿಂಧೂರ ಪ್ರತೀಕಾರ; ಹಿನ್ನೆಲೆ ಏನು?
ಕಾಶ್ಮೀರದ ಪಹಲ್ಗಾಮ್ನ (Pahalgam) ಬೈಸರನ್ ಕಣಿವೆ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದ ಪ್ರವಾಸಿಗರ ಮೇಲೆ ಏ.22 ರಂದು ಸೈನಿಕರ ಸೋಗಿನಲ್ಲಿ ಬಂದ ಉಗ್ರರು ಅಮಾಯಕರನ್ನ ಗುಂಡಿಟ್ಟು ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದೇ ಪಣ ತೊಟ್ಟಿದ್ದ ಭಾರತ ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (PoK) ಪ್ರದೇಶದಲ್ಲಿದ್ದ ಉಗ್ರ ನೆಲೆಗಳನ್ನ ಧ್ವಂಸ ಮಾಡಿತು. ಆದ್ರೂ ಮತ್ತೆ ಕಿತಾಪತಿ ಮಾಡಿದ್ದ ಪಾಕ್, ಭಾರತದ 15 ನಗರಗಳ ಮೇಲೆ ದಾಳಿ ನಡೆಸಲು ಹೊಂಚುಹಾಕಿತ್ತು. ಇದನ್ನರಿತ ಭಾರತ ಪಾಕ್ ದಾಳಿಯನ್ನ ವಿಫಲಗೊಳಿಸಿದ್ದಲ್ಲದೇ ಲಾಹೋರ್ನಲ್ಲಿನ (Lahore) ರೆಡಾರ್ ಕೇಂದ್ರವನ್ನೇ ಛಿದ್ರ ಛಿದ್ರ ಮಾಡಿತು. ʻಆಪರೇಷನ್ ಸಿಂಧೂರʼ ಕಾರ್ಯಾಚರಣೆ ಶುರು ಮಾಡಿ, ಪಾಕಿಸ್ತಾನ ಮಂಡಿಯೂರುವಂತೆ ಮಾಡಿತು.



