ಟೆಹ್ರಾನ್: ತೈಲ ಬಿಕ್ಕಟ್ಟು ನಿವಾರಿಸುವ ನಿಟ್ಟಿನಲ್ಲಿ ಕೊನೆಗೂ ಇರಾನ್ನಿಂದ ಭಾರತಕ್ಕೆ ಗುಡ್ನ್ಯೂಸ್ ಸಿಕ್ಕಿದೆ. ಭಾರತ ಸೇರಿದಂತೆ ಮಿತ್ರ ರಾಷ್ಟ್ರಗಳ ಹಡುಗುಗಳು ಹಾರ್ಮುಜ್ ಜಲಸಂಧಿಯ (Strait Of Hormuz) ಮೂಲಕ ಸಾಗಲು ಇರಾನ್ ಅನುಮತಿ ನೀಡಿದೆ ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ (Abbas Araghchi) ಹೇಳಿದ್ದಾರೆ.
ಚೀನಾ, ರಷ್ಯಾ, ಭಾರತ (India), ಇರಾಕ್ ಮತ್ತು ಪಾಕಿಸ್ತಾನ (Pakistan) ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಾಗಲು ನಾವು ಅನುಮತಿ ನೀಡಿದ್ದೇವೆ ಎಂದು ಅರಘ್ಚಿ ತಿಳಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಯುದ್ಧ ಕೊನೆಗೊಳಿಸಲು 15 ಅಂಶಗಳನ್ನ ಪ್ರಸ್ತಾಪಿಸಿದ ಮರುದಿನವೇ ಈ ಬೆಳವಣಿಗೆ ಕಂಡುಬಂದಿದೆ.

ಇಸ್ರೇಲ್ ಮತ್ತು ಅಮೆರಿಕ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ತೈಲ (Oil) ಸಾಗಾಟ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನ ಇರಾನ್ ನಿರ್ಬಂಧಿಸಿತ್ತು. ಆದ್ರೆ ಇತ್ತೀಚೆಗೆ ಅಮೆರಿಕ 1 ತಿಂಗಳ ಕದನ ವಿರಾಮ ಘೋಷಿಸಿದ ಕೆಲ ದಿನಗಳ ಬಳಿಕ ಇರಾನ್ ಮಿತ್ರರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿಯನ್ನ ಮುಕ್ತಗೊಳಿಸಿದೆ.
ಮಿತ್ರರಾಷ್ಟ್ರಗಳಿಗೆ ಜಲಮಾರ್ಗವನ್ನ ಮುಕ್ತಗೊಳಿಸಲಾಗಿದ್ದು, ಶತ್ರು ರಾಷ್ಟ್ರಗಳಿಗೆ ಮಾತ್ರ ಮುಚ್ಚಲಾಗಿದೆ. ಶತ್ರು ರಾಷ್ಟ್ರದ ಹಡಗುಗಳು ಹಾದುಹೋಗಲು ಯಾವುದೇ ಕಾರಣಕ್ಕೂ ಅವಕಾಶ ಕೊಡಲ್ಲ ಎಂದು ಇರಾನ್ನ ಸಚಿವರು ಎಚ್ಚರಿಕೆ ನೀಡಿದ್ದಾರೆ.

ವಿಶ್ವಸಂಸ್ಥೆ ಕರೆ
ಜಾಗತಿಕ ಮಟ್ಟದಲ್ಲಿ ಇಂಧನ ಪೂರೈಕೆಯಲ್ಲಿ ವ್ಯತ್ಯಯಗಳು ಕಂಡುಬರುತ್ತಿದ್ದ ಹಿನ್ನೆಲೆ ಹಾರ್ಮುಜ್ ಜಲಸಂಧಿಯನ್ನ ತೆರೆಯುವಂತೆ ಇರಾನ್ಗೆ ವಿಶ್ವಸಂಸ್ಥೆ ಕರೆ ನೀಡಿತ್ತು. ಯುಎನ್ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಈ ಬಗ್ಗೆ ಇರಾನ್ಗೆ ಹೇಳಿದ್ದರು. ಗುಟೆರೆಸ್ ಹೇಳಿಕೆಗಳ ನಂತರ ಇರಾನ್ ಸಚಿವರು ಪ್ರತಿಕ್ರಿಯಿಸಿದ್ದಾರೆ.

