ಮುಂಬೈ: ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಟೊಯೊಟಾ ಕಂಪನಿಯು ತನ್ನ ಚೊಚ್ಚಲ ಸಂಪೂರ್ಣ ಎಲೆಕ್ಟ್ರಿಕ್ ಎಸ್‌ಯುವಿ (SUV) ಮಾದರಿಯಾದ ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ (Toyota Urban Cruiser Ebella) ಕಾರನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ.
ಮಾರುತಿ ಸುಜುಕಿ ಇ-ವಿಟಾರಾ (e Vitara) ಕಾರಿನ ಪ್ಲಾಟ್‌ಫಾರ್ಮ್ ಆಧಾರಿತವಾಗಿ ಈ ಎಲೆಕ್ಟ್ರಿಕ್ ಕಾರನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗಿದೆ. ಇದರ ಟಾಪ್ ಮಾಡೆಲ್ E3 ಕಾರಿನ ಎಕ್ಸ್-ಶೋರೂಮ್ ಬೆಲೆ 23.60 ಲಕ್ಷ ರೂ. ಆಗಿದ್ದು, ಈ ಕಾರು ಗ್ರಾಹಕರಿಗೆ ಎರಡು ವಿಭಿನ್ನ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ.
49 kWh ಬ್ಯಾಟರಿ ಪ್ಯಾಕ್ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 440 ಕಿ.ಮೀ. ಮೈಲೇಜ್ ನೀಡುತ್ತದೆ. ಇದು 142.15 bhp ಪವರ್ ಉತ್ಪಾದಿಸುತ್ತದೆ. 61 kWh ಬ್ಯಾಟರಿ ಇರುವ ಕಾರು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಬರೋಬ್ಬರಿ 543 ಕಿ.ಮೀ. ವರೆಗೆ ಮೈಲೇಜ್ ನೀಡುತ್ತದೆ. ಈ ಕಾರು 71.65 bhp ಪವರ್ ಮತ್ತು 189 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಈ ಕಾರುಗಳು 150kW DC ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯನ್ನು ಬೆಂಬಲಿಸುವುದರಿಂದ ಅತ್ಯಂತ ವೇಗವಾಗಿ ಚಾರ್ಜ್ ಮಾಡಿಕೊಳ್ಳಬಹುದಾಗಿದೆ.
ಮುಂಭಾಗದಲ್ಲಿ ಸಿಗ್ನೇಚರ್ ಹ್ಯಾಮರ್‌ಹೆಡ್ ಮಾದರಿಯ ಎಲ್‌ಇಡಿ ಲೈಟಿಂಗ್ ಅಳವಡಿಸಲಾಗಿದ್ದು, ರಸ್ತೆಯಲ್ಲಿ ಬಲಿಷ್ಠ ನೋಟವನ್ನು ನೀಡುತ್ತದೆ. ಒಳಗಡೆ ಡ್ಯುಯಲ್ ಟೋನ್ (ಕಪ್ಪು ಮತ್ತು ಬ್ರೌನ್) ಬಣ್ಣದ ಒಳಾಂಗಣ ಮತ್ತು ವಿಶಿಷ್ಟವಾದ ಸ್ಕ್ವಿರ್ಕಲ್ (Squircle) ಸ್ಟೀರಿಂಗ್ ವೀಲ್ ನೀಡಲಾಗಿದೆ.

ಡ್ಯಾಶ್‌ಬೋರ್ಡ್‌ನಲ್ಲಿ 10.1-ಇಂಚಿನ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ ಮತ್ತು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ. ವೈರ್‌ಲೆಸ್ ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಚಾಲಕನ ಸೀಟಿಗೆ 10-ವೇ ಪವರ್ ಅಡ್ಜಸ್ಟ್‌ಮೆಂಟ್, ಮುಂಭಾಗದ ಸೀಟುಗಳಿಗೆ ವೆಂಟಿಲೇಶನ್ ಸೌಲಭ್ಯ, ವೈರ್‌ಲೆಸ್ ಚಾರ್ಜರ್, ವಿಶಾಲವಾದ ಪನರೋಮಿಕ್ ಸನ್‌ರೂಫ್ ನೀಡಲಾಗಿದೆ. ಮನರಂಜನೆಗಾಗಿ ಕಾರಿನಲ್ಲಿ ಉನ್ನತ ದರ್ಜೆಯ JBL ಆಡಿಯೊ ಸಿಸ್ಟಮ್ ಅನ್ನು ಅಳವಡಿಸಲಾಗಿದೆ.
ಚಾಲನೆಯ ಅನುಭವವನ್ನು ಉತ್ತಮಗೊಳಿಸಲು Eco, Normal ಮತ್ತು Sport ನಂತಹ ಮಲ್ಟಿಪಲ್ ಡ್ರೈವ್ ಮೋಡ್‌ಗಳನ್ನು ನೀಡಲಾಗಿದೆ. ಪ್ರಯಾಣಿಕರ ಸುರಕ್ಷತೆಗಾಗಿ 7 ಏರ್‌ಬ್ಯಾಗ್‌ಗಳು, 360-ಡಿಗ್ರಿ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ ಇದನ್ನೂ ಓದಿ: ವಾಹನ ಪ್ರಿಯರಿಗೆ ಶಾಕ್| ಜೂನ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ 30 ಸಾವಿರ ರೂ.ವರೆಗೆ ಏರಿಕೆ!
ಟೊಯೊಟಾ ಕಂಪನಿಯು ತನ್ನ ಗ್ರಾಹಕರಿಗೆ ಬ್ಯಾಟರಿ ಸುರಕ್ಷತೆಯ ಭರವಸೆ ನೀಡಲು 8 ವರ್ಷಗಳ ಬ್ಯಾಟರಿ ವಾರಂಟಿ, ಅಶ್ಯೂರ್ಡ್ ಬೈಬ್ಯಾಕ್ (Assured Buy Back) ಪ್ಲಾನ್ ಹಾಗೂ ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ನಂತಹ ಆಕರ್ಷಕ ಮಾಲೀಕತ್ವದ ಆಯ್ಕೆಗಳನ್ನು ನೀಡಿದೆ.

ಬೆಲೆ ಎಷ್ಟು?
ಟೊಯೊಟಾ ಅರ್ಬನ್ ಕ್ರೂಸರ್ ಎಬೆಲ್ಲಾ ಒಟ್ಟು 3 ಪ್ರಮುಖ ವೆರಿಯೆಂಟ್‌ಗಳಲ್ಲಿ (E1, E2, E3) ಬಿಡುಗಡೆ ಮಾಡಿದೆ. ಈಗ ಟಾಪ್ ಮಾಡೆಲ್ ಬೆಲೆ ಮಾತ್ರ ಬಹಿರಂಗ ಪಡಿಸಿದೆ. ಉಳಿದ ಎರಡು ವೆರಿಯೆಂಟ್ ಬೆಲೆ ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಟಾಪ್ ಮಾಡೆಲ್‌ಗೆ (E3 – 61 kWh ) 23.60 ಲಕ್ಷ ರೂ. ಎಕ್ಸ್-ಶೋರೂಮ್ ಬೆಲೆ ನಿಗದಿಯಾಗಿದ್ದರೆ ಬೇಸ್ ಮಾಡೆಲ್ (E1 – 49 kWh) ಇದರ ಆರಂಭಿಕ ಎಕ್ಸ್-ಶೋರೂಮ್ ಬೆಲೆ ಅಂದಾಜು 18.00 ಲಕ್ಷ ರೂ. ನಿಂದ 19 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ. ಬೇಸ್ ಮತ್ತು ಟಾಪ್ ಮಾಡೆಲ್ ನಡುವೆ ಸುಮಾರು 4.50 ಲಕ್ಷ ರೂ. ನಿಂದ 5.50 ಲಕ್ಷ ರೂ. ವರೆಗೆ ಬೆಲೆ ವ್ಯತ್ಯಾಸವಿರುವ ಸಾಧ್ಯತೆಯಿದೆ.
