ಕಾಬೂಲ್: ಆಸ್ಪತ್ರೆ (Kabul Hospital) ಮೇಲೆ ಪಾಕಿಸ್ತಾನ (Pakistan) ನಡೆಸಿದ ಭೀಕರ ದಾಳಿಯನ್ನು ಅಫ್ಘಾನಿಸ್ತಾನ ಕ್ರಿಕೆಟ್ ಆಟಗಾರರು ಖಂಡಿಸಿದ್ದಾರೆ. ಪಾಕಿಸ್ತಾನ ಸೇನೆಯಿಂದ ಹತ್ಯೆ ನಡೆದಿದೆ ಎಂದು ರಶೀದ್ ಖಾನ್ (Rashid Khan) ಕಿಡಿಕಾರಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯ ಪರಿಣಾಮವಾಗಿ ಸಂಭವಿಸಿದ ಜೀವಹಾನಿಗೆ ಅಫ್ಘಾನಿಸ್ತಾನ ಕ್ರಿಕೆಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಫ್ಘಾನ್ ಇತಿಹಾಸದಲ್ಲೇ ಅತ್ಯಂತ ಭೀಕರ: ಕಾಬೂಲ್ ಆಸ್ಪತ್ರೆ ಮೇಲೆ ಪಾಕಿಸ್ತಾನ ದಾಳಿ – 400 ಜನರು ಸಾವು
ಕಾಬೂಲ್‌ನಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಉಂಟಾದ ನಾಗರಿಕರ ಸಾವು-ನೋವುಗಳಿಂದ ನಾನು ತೀವ್ರವಾಗಿ ದುಃಖಿತನಾಗಿದ್ದೇನೆ. ನಾಗರಿಕರ ಮನೆಗಳು, ಶೈಕ್ಷಣಿಕ ಸೌಲಭ್ಯಗಳು ಅಥವಾ ವೈದ್ಯಕೀಯ ಮೂಲಸೌಕರ್ಯಗಳನ್ನು ಟಾರ್ಗೆಟ್ ಮಾಡುವುದು ತಪ್ಪು. ಇದು ಯುದ್ಧಾಪರಾಧ ಎಂದು ರಶೀದ್ ಖಾನ್ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪವಿತ್ರ ರಂಜಾನ್ ತಿಂಗಳಲ್ಲಿ ಜೀವಗಳ ವಿರುದ್ಧ ಅಮಾನವೀಯವಾಗಿ ನಡೆದುಕೊಳ್ಳುವುದು ಅಸಹ್ಯಕರ ಮತ್ತು ತೀವ್ರ ಕಳವಳಕಾರಿ. ಈ ನಡೆ ವಿಭಜನೆ ಮತ್ತು ದ್ವೇಷವನ್ನು ಹೆಚ್ಚಿಸುತ್ತದೆ. ದೌರ್ಜನ್ಯವನ್ನು ಕೂಲಂಕಷವಾಗಿ ತನಿಖೆ ಮಾಡಿ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕು ಸಂಸ್ಥೆಗಳಿಗೆ ಮನವಿ ಮಾಡುತ್ತಾನೆ. ಈ ಕಷ್ಟದ ಸಮಯದಲ್ಲಿ ನಾನು ನನ್ನ ಆಫ್ಘನ್ ಜನರೊಂದಿಗೆ ನಿಲ್ಲುತ್ತೇನೆ ಎಂದು ರಶೀದ್ ಖಾನ್ ತಿಳಿಸಿದ್ದಾರೆ. ಇದನ್ನೂ ಓದಿ: 18ನೇ ದಿನಕ್ಕೆ ಕಾಲಿಟ್ಟ ಯುದ್ಧ – ಇರಾನ್‌ನ 200ಕ್ಕೂ ಹೆಚ್ಚು ಸೇನಾ ನೆಲೆಗಳು ಉಡೀಸ್
ಕಾಬೂಲ್‌ನ ಆಸ್ಪತ್ರೆ ಮೇಲೆ ಪಾಕಿಸ್ತಾನ ನಡೆಸಿದ ಬಾಂಬ್ ದಾಳಿಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಫ್ಘಾನಿಸ್ತಾನ (Afghanistan) ಇತಿಹಾಸದಲ್ಲೇ ಇದು ಅತ್ಯಂತ ಭೀಕರ ದಾಳಿಯಾಗಿದೆ. ಸ್ಥಳೀಯ ಸಮಯ ರಾತ್ರಿ 9 ಗಂಟೆ ಸುಮಾರಿಗೆ 2,000 ಹಾಸಿಗೆ ಸೌಲಭ್ಯವಿರುವ ದೊಡ್ಡ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದೆ. 400 ಮಂದಿ ಸಾವಿಗೀಡಾಗಿದ್ದು, 250 ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಉಪ ಸರ್ಕಾರಿ ವಕ್ತಾರ ಹಮ್ದುಲ್ಲಾ ಫಿತ್ರಾತ್ ಹೇಳಿದ್ದಾರೆ.

