ದಾವಣಗೆರೆ: ಜಿಲ್ಲಾ ಬಿಜೆಪಿಯಲ್ಲಿ (BJP) ಬಣ ಬಡಿದಾಟಕ್ಕೆ ಬ್ರೇಕ್ ಬೀಳ್ತಿಲ್ಲ. ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಈಗಾಗಲೇ ಮುಂದಿನ ಚುನಾವಣೆಗೆ ದಾವಣಗೆರೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಿದ್ದು, ಜಿಎಂ ಸಿದ್ದೇಶ್ವರ್ ಬಣದ ಕಣ್ಣು ಕೆಂಪಗಾಗಿಸಿದೆ.
ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನದಿಂದ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಹೀಗಾಗಿ ದಾವಣಗೆರೆಯಲ್ಲಿನ ಎರಡು ಬಣಗಳು ಒಟ್ಟಾಗಿ ಹೋಗಬೇಕೆಂಬ ಮನಸ್ಸು ಮಾಡಿದ್ದವು. ಆದರೆ ಇತ್ತೀಚೆಗೆ ಹೊನ್ನಾಳಿಯಲ್ಲಿ ಎಂ.ಪಿ ರೇಣುಕಾಚಾರ್ಯ (M.P Renukacharya) ಜನ್ಮದಿನದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಯಡಿಯೂರಪ್ಪ ಅವರು ಅಭ್ಯರ್ಥಿಗಳ ಹೆಸರು ಘೋಷಿಸಿದ್ದರು. ಸಮಾವೇಶದಲ್ಲಿ ಚೀಟಿ ಬರೆದುಕೊಟ್ಟು ಗೊಂದಲ ಮಾಡಿದ್ದಾರೆ ಎಂಬುದು ಮತ್ತೊಂದು ಬಣ ವಾದವಾಗಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕೆ ಪತ್ರ ಬರೆದಿರೋದು ಬಂಡಾಯದ ಸೂಚನೆ – ರೇಣುಕಾಚಾರ್ಯ
ಈ ಗೊಂದಲದಿಂದ ಎಚ್ಚೆತ್ತುಕೊಂಡ ಹೈಕಮಾಂಡ್ ಎರಡು ಬಣವನ್ನು ಒಂದು ಮಾಡಲು ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್, ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರೀತಂ ಗೌಡ ಆಗಮಿಸಿದ್ದರು. ಆದರೆ ಈ ಸಂಧಾನ ಯತ್ನ ವಿಫಲವಾಗಿದೆ. ಮೊದಲು ಖಾಸಗಿ ರೆಸಾರ್ಟ್‍ನಲ್ಲಿ ಎಂ.ಪಿ ರೇಣುಕಾಚಾರ್ಯ ಬಣದ ಜೊತೆಗೆ ಸಭೆ ನಡೆಸಲಾಯಿತು. ಬಳಿಕ ಜಿ.ಎಂ ಸಿದ್ದೇಶ್ವರ್ (G.M. Siddeswar) ಬಣದ ಜೊತೆ ಐಟಿ ಗೆಸ್ಟ್ ಹೌಸ್‍ನಲ್ಲಿ ಜೊತೆ ಸಂಧಾನ ಮಾತುಕತೆ ನಡೆಸಲಾಯಿತು. ಈ ವೇಳೆ ರೊಚ್ಚಿಗೆದ್ದ ಸಿದ್ದೇಶ್ವರ್ ಬೆಂಬಲಿಗರು, ನಾಯಕರ ಸುದ್ದಿಗೋಷ್ಟಿ ನಡೆಸೋದಕ್ಕೂ ಬಿಡಲಿಲ್ಲ.
ಈ ತೇಪೆ ಹಚ್ಚುವ ಮಾತು ಬೇಡ. ಮೊದಲು ನಿರ್ಧಾರ ತಿಳಿಸಿ, ರೇಣುಕಾಚಾರ್ಯರನ್ನು ಉಚ್ಛಾಟಿಸಿ ಅಂತ ಘೋಷಣೆ ಕೂಗಿದರು. ಬಳಿಕ ವಿಜಯೇಂದ್ರ ಕಾರಿಗೆ ಮುತ್ತಿಗೆ ಯತ್ನವನ್ನೂ ಮಾಡಿದರು. ವಿಜಯೇಂದ್ರ (B.Y Vijayendra), ಪ್ರೀತಂ ಗೌಡ ಎಷ್ಟೇ ಮನವೊಲಿಸಿದರೂ ಜಿ.ಎಂ ಸಿದ್ದೇಶ್ವರ್ ಮಾತ್ರ ಕಾರು ಹತ್ತಲಿಲ್ಲ. ಕಾರ್ಯಕರ್ತರ, ವಿಸ್ತಾರಕರ ಅಭಿನಂದನಾ ಸಮಾರಂಭಕ್ಕೂ ಹೋಗಲಿಲ್ಲ.
ಕಳೆದ ಲೋಕಸಭೆ ಚುನಾವಣೆ ಸೋಲಿಗೆ ರೇಣುಕಾಚಾರ್ಯ ಕಾರಣ, ಈಗ ಟಿಕೆಟ್ ಘೋಷಣೆ ಮಾಡಿಸಿ ಬಣ ನಿರ್ಮಾಣ ಮಾಡಿದ್ದಾರೆ ಎಂದು ಸಭೆಯಲ್ಲಿ ದೂರುಗಳ ಸುರಿಮಳೆಯನ್ನೆ ಸುರಿಸಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಆಡಳಿತ ಪಕ್ಷದ ಶಾಸಕರೇ ದಂಗೆ ಏಳುತ್ತಿದ್ದಾರೆ: ವಿಜಯೇಂದ್ರ

