ಪಲ್ಲೆಕೆಲೆ: ಟಿ20 ವಿಶ್ವಕಪ್‌ನ (T20 World Cup) ಲೀಗ್ ಕೊನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿದ್ದ ಶ್ರೀಲಂಕಾ ತಂಡ, ಸೂಪರ್-8 ನ ಆರಂಭಿಕ ಪಂದ್ಯದಲ್ಲೇ ಇಂಗ್ಲೆಂಡ್ (England) ವಿರುದ್ಧ ಹೀನಾಯ ಸೋಲಿಗೆ ತುತ್ತಾಗಿದೆ. ಕರಾರುವಕ್ಕಾದ ಬೌಲಿಂಗ್ ದಾಳಿಯಿಂದ 146 ರನ್‌ಗಳಿಗೆ ಆಂಗ್ಲ ಪಡೆಯನ್ನ ಲಂಕಾ ಬೌಲರ್‌ಗಳು ಕಟ್ಟಿಹಾಕಿದ್ದರು. ಆದ್ರೆ ಅಗ್ರ ಬ್ಯಾಟರ್‌ಗಳ ವೈಫಲ್ಯದಿಂದ ತಂಡ ಸೋಲು ಕಂಡಿತು.

ಇಂಗ್ಲೆಂಡ್ ವಿರುದ್ಧ ಗೆಲುವಿಗೆ 147 ರನ್‌ಗಳ ಗುರಿ ಪಡೆದ ಶ್ರೀಲಂಕಾ (Sri Lanka) ತಂಡ 16.4 ಓವರ್‌ಗಳಲ್ಲೇ 95 ರನ್‌ಗಳಿಗೆ ಸರ್ವಪತನ ಕಂಡಿತು. ಇದರಿಂದ ಇಂಗ್ಲೆಂಡ್ 51 ರನ್‌ಗಳ ಭರ್ಜರಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ಹೀನಾಯ ಸೋಲು ಕಂಡ ಲಂಕಾ ಈಗ ಸೆಮಿಸ್ ತಲುಪುವ ಹಾದಿಯನ್ನ ಇನ್ನಷ್ಟು ಕಠಿಣವಾಗಿಸಿಕೊಂಡಿದೆ.

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಅಂಗಳದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧ ಬೌಲಿಂಗ್‌ನಲ್ಲಿ ಬಿಗಿ ಹಿಡಿತ ಸಾಧಿಸಿತು. ಡುನಿತ್ ವೆಲ್ಲಾಲಗೆ, ದಿಲ್ಶಾನ್ ಮಧುಸಂಕ, ಮಹೀಶ್ ತೀಕ್ಷಣ ಬೌಲಿಂಗ್ ದಾಳಿಗೆ ಆಂಗ್ಲ ಬ್ಯಾಟರ್‌ಗಳು ತರಗೆಲೆಗಳಂತೆ ಉದುರಿದ್ರು. ಆರಂಭಿಕ ಆಟಗಾರ ಫಿಲ್ ಸಾಲ್ಟ್ 62 ರನ್ (2 ಸಿಕ್ಸರ್, 6 ಬೌಂಡರಿ), ವಿಲ್ ಜಾಕ್ಸ್ 21 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರೂ, ನೆಲಕಚ್ಚಿದರು. ಅಂತಿಮವಾಗಿ ಇಂಗ್ಲೆಂಡ್ 9 ವಿಕೆಟ್ ನಷ್ಟಕ್ಕೆ 20 ಓವರ್‌ಗಳಲ್ಲಿ 146 ರನ್ ಗಳಿಸಿತು.

ಸುಲಭ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಗೆಲುವಿನ ವಿಶ್ವಾಸದದಲ್ಲಿ ಕಣಕ್ಕಿಳಿದಿತ್ತು. ಆದ್ರೆ ಪವರ್ ಪ್ಲೇ ನಲ್ಲಿ ಅಂದ್ರೆ 5.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಮಧ್ಯಮ ಕ್ರಮಾಂಕದಲ್ಲಿ ನಾಯಕ ದಸುನ್ ಶನಾಕ (Dasun Shanaka) 30 ರನ್ ಗಳಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಶನಾಕ ವಿಕೆಟ್ ಕಸಿಯುತ್ತಿದ್ದಂತೆ ಗೆಲುವಿನ ಕನಸು ಭಗ್ನಗೊಂಡಿತು. ಅಂತಿಮವಾಗಿ ಲಂಕಾ 95 ರನ್‌ಗಳಿಗೆ ಸರ್ವಪತನಗೊಂಡಿತು.

