ಯಾರ ಆಸ್ತಿಯೂ ಅಲ್ಲ ಇದು ನಿಮ್ಮ ಟಿವಿ ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿಗೆ (PUBLiC TV) ಹದಿನಾಲ್ಕನೇ ವಾರ್ಷಿಕೋತ್ಸವದ (14th Anniversary) ಸಂಭ್ರಮ. ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್
ಪಬ್ಲಿಕ್ ಟಿವಿಯ ಸುದ್ದಿ ಜಗತ್ತಿನ ಯಾನ 14 ಸಂವತ್ಸರ ಪೂರೈಸಿ 15ನೇ ವಸಂತದತ್ತ ಅಬಾಧಿತವಾಗಿ ಸಾಗಿದೆ ಅಂದರೆ ಅದಕ್ಕೆ ವೀಕ್ಷಕ ಮಹಾಪ್ರಭುಗಳಾದ ನೀವೇ ಕಾರಣ. ಫೆಬ್ರವರಿ 12, 2012. ಈ ದಿನ ಪಬ್ಲಿಕ್ ಟಿವಿ ಮಾಧ್ಯಮಲೋಕವೇ ಅಚ್ಚರಿಯಿಂದ ನೋಡುವಂತೆ ಮಾಡಿದ ದಿನ. ಅದೆಷ್ಟು ದಿನ ನಡೆಸುತ್ತಾರೆ ನೋಡೋಣ ಎಂದು ನಕ್ಕವರ ಮುಂದೆ ಭರ್ತಿ 14 ಸಂವತ್ಸರಗಳನ್ನು ಪೂರೈಸಿದ ಸಾರ್ಥಕ ದಿನ.
ಇಡೀ ಕರುನಾಡಿಗೆ ನಮಸ್ಕಾರ ಎಂದು ಹೇಳುತ್ತಾ, ಚಾನೆಲ್ಲನ್ನು ಸಂಪೂರ್ಣ ಕನ್ನಡಿಗರಿಗೆ ಸಮರ್ಪಿಸಿ ಶುರುಮಾಡಿದ್ದ ಸುದ್ದಿ ಯಜ್ಞ ಇವತ್ತಿಗೂ ನಿರ್ವಿಘ್ನ, ನಿರರ್ಗಳವಾಗಿ ಸಾಗುತ್ತಲೇ ಇದೆ. ಇಂದು ಪಬ್ಲಿಕ್ ಟಿವಿಯು ಮನೆ ಮನೆಯ ಮನ ಮನಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ.
ಸಮಾಜಕ್ಕೆ ಸತ್ಯ, ಸ್ಪಷ್ಟ, ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಪಬ್ಲಿಕ್ ಟಿವಿಗೆ ಸಾಟಿ ಮತ್ತೊಂದಿಲ್ಲ. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಕನ್ನಡ ನಾಡಿನಲ್ಲಿ ಕನ್ನಡದವರೇ ಸಮರ್ಥ, ಸದೃಢ, ನಿಷ್ಪಕ್ಷಪಾತ ಸುದ್ದಿವಾಹಿನಿಯೊಂದನ್ನು ಶುರುಮಾಡಿ, ದಕ್ಷತೆ, ಪ್ರಾಮಾಣಿಕತೆ, ಪಕ್ಷಾತೀತವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ನಿದರ್ಶನವೊಂದಿದ್ದರೇ ಅದು ಪಬ್ಲಿಕ್ ಟಿವಿಯ ಹೆಮ್ಮೆ.

ಕಳೆದ ವರ್ಷ ಇಡೀ ದೇಶದ ಎಲ್ಲಾ ಮಾಧ್ಯಮಗಳ ಪಾಲಿಗೂ ಅತ್ಯಂತ ವಿಶೇಷ ಮತ್ತು ಸವಾಲಿನ ಸಂದರ್ಭ ಸೃಷ್ಚಿಸಿತ್ತು ಅಂದರೆ ತಪ್ಪಾಗಲ್ಲ. ಶತ್ರುದೇಶ ನೆರೆಯ ಪಾಕಿಸ್ತಾನದ ದುಷ್ಟ ಕೃತ್ಯಕ್ಕೆ ಭಾರತ ದಿಟ್ಟ ಪ್ರತ್ಯುತ್ತರ ಕೊಟ್ಟ ಸಮಯವಾಗಿತ್ತು. ಕಾರ್ಗಿಲ್ ಯುದ್ಧದ ಬಳಿಕ, ಪಾಕ್ ವಿರುದ್ಧ ಮತ್ತೆ ರಣಕಹಳೆ ಮೊಳಗಿತ್ತು. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ರಾಕ್ಷಸೀಕೃತ್ಯಕ್ಕೆ ಪ್ರತೀಕಾರವಾಗಿ ಕೈಗೊಂಡ ಆಪರೇಷನ್ ಸಿಂಧೂರವು, ಭಾರತದ ವೀರಚರಿತೆಯಲ್ಲಿ ದಾಖಲಾದ ಮಹಾಶೌರ್ಯದ ಮಹಾ ಅಧ್ಯಾಯ.
ಆಪರೇಷನ್ ಸಿಂಧೂರದಲ್ಲಿ ದೇಶದ ಗಂಡುಗಲಿ ಯುದ್ಧ ವಿಮಾನಗಳು, ಪಾಕ್ ಗಡಿದಾಟಿ ಪ್ರಮುಖ ಟಾರ್ಗೆಟ್‌ಗಳನ್ನು ಚಿಂದಿ ಉಡಾಯಿಸಿ, ವಿಜಯಪತಾಕೆ ಹಾರಿಸಿದ್ದವು. ದೇಶದ ಗಡಿ ಕಾಯುವ, ದೇಶದ ಜನರಿಗೆ ನೆಮ್ಮದಿ, ರಕ್ಷಣೆ, ಅಭಯದ ಭಾವನೆ ಕೊಡ ಮಾಡುವ ನಮ್ಮ ಹೆಮ್ಮೆಯ ಸೈನಿಕರನ್ನು ಮನಃಪೂರ್ವಕವಾಗಿ ನೆನೆಯಲೇ ಬೇಕಾದ ವರ್ಷವಿದು. ಹೀಗಾಗಿಯೇ ಪಬ್ಲಿಕ್ ಟಿವಿಯ ವರ್ಷಾಚರಣೆಯ ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನಗೈದ ವೀರ ಯೋಧರನ್ನು ಸನ್ಮಾನಿಸಿದ್ದೇವೆ.
ಪಬ್ಲಿಕ್ ಟಿವಿ ಆಯ್ತು, ಪಬ್ಲಿಕ್ ಮ್ಯೂಸಿಕ್ ಆಯ್ತು, ಮುಂದೇನು ಎನ್ನುವ ಯೋಚನೆಯಲ್ಲಿದ್ದಾಗ ಆನ್ ಪಬ್ಲಿಕ್ ಡಿಮ್ಯಾಂಡ್ ಹೊಳೆದಿದ್ದೇ ಪಬ್ಲಿಕ್ ಮೂವೀಸ್. ಹೌದು ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರವೇ ಆರಂಭವಾಗಿದ್ದು ಪಬ್ಲಿಕ್ ಮೂವೀಸ್. ಕರುನಾಡಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಿಮ್ಮ ನೆಚ್ಚಿನ ಪಬ್ಲಿಕ್ ಮೂವೀಸ್‌ಗೂ (Public MOVIES)ಇಂದು ಎಂಟು ವರ್ಷಗಳ ಸಾರ್ಥಕ ಸಂಭ್ರಮ.
ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಮೂವೀಸ್‌ನ ಸಂಭ್ರಮ ಮತ್ತು ಸಡಗರಗಳಿಗೆ ಮುಖ್ಯ ಕಾರಣ ಕನ್ನಡಿಗರಾದ ನೀವು ಮತ್ತು ಕೇವಲ ನೀವು. ನಿಮ್ಮೆಲ್ಲರ ವಿಶ್ವಾಸ, ಹಾರೈಕೆ ಮತ್ತು ಬೆಂಬಲ ಸದಾ ಹೀಗೆ ಇರಲಿ ಎಂದು ಆಶಿಸುತ್ತೇವೆ. ಧನ್ಯವಾದ ಕರ್ನಾಟಕ.

