ಕೊಲಂಬೊ: ಇಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 8ನೇ ಪಂದ್ಯದಲ್ಲಿ ಒಮನ್ ವಿರುದ್ಧ ಜಿಂಬಾಬ್ವೆ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಇನ್ನೂ 6.3 ಓವರ್ ಇರುವಾಗಲೇ ಜಿಂಬಾಬ್ವೆ ಗೆದ್ದು ಬೀಗಿದೆ.
ಸೋಮವಾರ ಕೊಲಂಬೊದಲ್ಲಿ ನಡೆದ ಟಿ20 ವಿಶ್ವಕಪ್ ಗ್ರೂಪ್ ಬಿ ಆರಂಭಿಕ ಪಂದ್ಯದಲ್ಲಿ ಜಿಂಬಾಬ್ವೆ ತಂಡವು ಓಮನ್ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿತು. ಬೌಲಿಂಗ್ ಆಯ್ಕೆ ಮಾಡಿಕೊಂಡ ಜಿಂಬಾಬ್ವೆ ವೇಗಿಗಳಾದ ಬ್ಲೆಸ್ಸಿಂಗ್ ಮುಜರಬಾನಿ, ರಿಚರ್ಡ್ ನ್ಗಾರವಾ ಮತ್ತು ಬ್ರಾಡ್ ಇವಾನ್ಸ್ ತಲಾ ಮೂರು ವಿಕೆಟ್ ಪಡೆದು ಮಿಂಚಿದರು.
ಓಮನ್ ಕೇವಲ 103 ರನ್‌ಗಳಿಗೆ ಆಲೌಟ್ ಆಗಿತ್ತು. ಒಂದು ಹಂತದಲ್ಲಿ ಒಮನ್ 27/5 ಕ್ಕೆ ಸಂಕಷ್ಟದಲ್ಲಿತ್ತು. ಈ ನಡುವೆ ಆಡಿದ ಬ್ಯಾಟರ್‌ಗಳು ಯಾರು ಕೂಡ ಒಂದಂಕಿ ರನ್ ದಾಟುವಲ್ಲಿ ವಿಫಲರಾದರು. ಸುಫ್ಯಾನ್ ಮೆಹಮೂದ್ 25, ವಿನಾಯಕ ಶುಕ್ಲಾ 28, ನದೀಮ್ ಖಾನ್ 20 ರನ್ ನೆರವಿನಿಂದ ಒಮನ್ 100ರ ಗಡಿ ದಾಟಿತು. ಒಮನ್ ನೀಡಿದ 104 ರನ್ ಗುರಿ ಬೆನ್ನತ್ತಿದ ಜಿಂಬಾಬ್ವೆ ಕೇವಲ 13.3 ಓವರ್‌ಗಳಲ್ಲೇ ಗುರಿ ತಲುಪಿ ಗೆಲುವು ಸಾಧಿಸಿತು. ಜಿಂಬಾಬ್ವೆ ಪರ ಬ್ಯಾಟಿಂಗ್‌ನಲ್ಲಿ ಬ್ರಿಯಾನ್ ಬೆನೆಟ್ 48 ರನ್ ಗಳಿಸಿ ಅಜೇಯರಾಗಿ ಉಳಿದರು. ಬ್ರೆಂಡನ್ ಟೇಲರ್ 31, ತದಿವನಾಶೆ ಮರುಮಾನಿ 21 ರನ್ ಗಳಿಸುವ ಮೂಲಕ ಜಿಂಬಾಬ್ವೆಗೆ ಗೆಲುವಿನ ಕಾಣಿಕೆ ನೀಡಿದರು.

