– ಉಗ್ರರು ಬೈಸರನ್ ಕಣಿವೆಯನ್ನೇ ಟಾರ್ಗೆಟ್ ಮಾಡಿದ್ದು ಯಾಕೆ?
ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಬೀಭತ್ಸ ನರಮೇಧದ ಕುರಿತು ತನಿಖೆ ನಡೆಸುತ್ತಾ ಹೋದಂತೆ ಸ್ಫೋಟಕ ರಹಸ್ಯಗಳು ಬೆಳಕಿಗೆ ಬಂದಿದ್ದವು. ಪಾಕಿಸ್ತಾನಿ ಮತ್ತು ಸ್ಥಳೀಯ ಕಾಶ್ಮೀರಿ ಭಯೋತ್ಪಾದಕರು ಸೇನಾ ಸಮವಸ್ತ್ರದಲ್ಲಿ ಬಂದು ಈ ಕೃತ್ಯ ಎಸಗಿದ್ದರು.
ಮಹಿಳೆಯರಿಂದ ಪುರುಷರನ್ನ ಬೇರ್ಪಡಿಸಿ ಹತ್ಯೆಗೈಯುತ್ತಿದ್ದ ನಾಲ್ವರು ಉಗ್ರರು, ದಾಳಿ ನಡೆಸುವ ಮೊದಲು ಸಂಪೂರ್ಣ ಈ ಜಾಗದ ಬಗ್ಗೆ ತಿಳಿದಿದ್ದರು. ಭಾರೀ ಪ್ರಮಾಣದಲ್ಲಿ ಸಾವು ನೋವು ಸಂಘಟಿಸಲೆಂದೇ ಉಗ್ರರು ಪ್ಲ್ಯಾನ್ ಮಾಡಿದ್ದರು ಅನ್ನೋ ಸ್ಫೋಟಕ ರಹಸ್ಯ ನಂತರವೇ ಗೊತ್ತಾಯಿತು.

ಬೈಸರನ್ ಕಣಿವೆ ಪ್ರದೇಶವನ್ನೇ ಟಾರ್ಗೆಟ್ ಮಾಡಿದ್ದು ಯಾಕೆ?
ಪಹಲ್ಗಾಮ್‌ನಿಂದ ಸರಿಸುಮಾರು 6.5 ಕಿಲೋಮೀಟರ್ ದೂರದಲ್ಲಿ ಬೈಸರನ್ ಕಣಿವೆ ಪ್ರದೇಶ ಇದೆ. ಈ ಜಾಗಕ್ಕೆ ವಾಹನ ಸಂಚಾರ ಇಲ್ಲ. ಕಾಲ್ನಡಿಗೆ ಅಥವಾ ಕುದುರೆ ಸವಾರಿಯ ಮೂಲಕ ಮಾತ್ರ ಈ ಜಾಗಕ್ಕೆ ಹೋಗಲು ಸಾಧ್ಯವಾಗುತ್ತದೆ.
ದಟ್ಟವಾದ ಕಾಡುಗಳಿಂದ ಆವೃತವಾದ ಸುಂದರವಾದ ಹುಲ್ಲುಗಾವಲು ಬೈಸರನ್‌ನಲ್ಲಿ ಸಾಧಾರಣವಾಗಿ 1,000 ರಿಂದ 1,500 ಪ್ರವಾಸಿಗರು ಇರುತ್ತಾರೆ. ಏಪ್ರಿಲ್ 22 ರ ಆ ದಿನ ಸುಮಾರು 2,000 ಪ್ರವಾಸಿಗರು ಅಲ್ಲಿದ್ದರು.

ವಾಹನ ಸಂಚರಿಸಲು ರಸ್ತೆ ಇಲ್ಲದ ಕಾರಣ ಕೂಡಲೇ ಸ್ಥಳಕ್ಕೆ ರಕ್ಷಣಾ ಪಡೆಗಳು ಆಗಮಿಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೇ ಗಂಭೀರವಾಗಿ ಗಾಯಗೊಂಡವರನ್ನ ಈ ಸ್ಥಳದಿಂದ ಅಂಬುಲೆನ್ಸ್‌ನಲ್ಲಿ ಸಾಗಿಸಲು ಸಾಧ್ಯವಿಲ್ಲದ ಕಾರಣ ಸಾವು ನೋವು ಹೆಚ್ಚಾಗಬಹುದು ಎಂಬುದನ್ನು ಮೊದಲೇ ತಿಳಿದುಕೊಂಡಿದ್ದ ಉಗ್ರರು ನಿಖರವಾಗಿ ಯೋಜಿಸಿ ಕೃತ್ಯ ನಡೆಸಿದ್ದರು.
ದಾಳಿಗೆ ಮುನ್ನ ದಟ್ಟವಾದ ಅರಣ್ಯ ಪ್ರದೇಶದಲ್ಲಿ ಭಯೋತ್ಪಾದಕರು ಅಡಗುತಾಣಗಳನ್ನ ನಿರ್ಮಿಸಿದ್ದರು. ಭಯೋತ್ಪಾದಕರು ಬಾಡಿ ಕ್ಯಾಮೆರಾಗಳನ್ನ ಧರಿಸಿದ್ದರು. ವಿಶೇಷವಾಗಿ ಹೆಲ್ಮೆಟ್ ಅಳವಡಿಸಿದ ಕ್ಯಾಮೆರಾಗಳನ್ನ ಧರಿಸಿ ಕೃತ್ಯವನ್ನ ಸಂಪೂರ್ಣವಾಗಿ ಚಿತ್ರೀಕರಿಸಿದ ವಿಚಾರ ತನಿಖೆಯಲ್ಲಿ ಗೊತ್ತಾಗಿತ್ತು.

ಪ್ರವಾಸಿಗರನ್ನು ಒಟ್ಟುಗೂಡಿಸಿ ಪುರುಷ ಮತ್ತು ಮಹಿಳಾ ಗುಂಪುಗಳಾಗಿ ಬೇರ್ಪಡಿಸಿ, ನಂತರ ಅವರ ಧರ್ಮ, ಹೆಸರನ್ನ ಕೇಳಿದ್ದಾರೆ. ಈ ವೇಳೆ ಹಿಂದೂ ಹೆಸರು ಹೇಳಿದವರನ್ನ ಶೂಟ್ ಮಾಡಿ ಹತ್ಯೆ ಮಾಡಿದ್ದರು. ಸೇನಾ ಸಮವಸ್ತ್ರದಲ್ಲಿ ಬಂದ ಉಗ್ರರನ್ನು ನೋಡಿ ಪ್ರವಾಸಿಗರು ಇವರು ಸೈನಿಕರು ಎಂದೇ ಭಾವಿಸಿದ್ದರು. ಸುಮಾರು 20 ನಿಮಿಷ ಸ್ಥಳದಲ್ಲಿ ಇದ್ದ ಉಗ್ರರು ಸಾಲು ನಿಲ್ಲಿಸಿ ಹತ್ಯೆ ಮಾಡಿದ್ದರು. ಈ ವೇಳೆ ಕೆಲವರು ಓಡಿ ಹೋಗಲು ಯತ್ನಿಸಿದಾಗ ಅವರ ಗುಂಡು ಹಾರಿಸಲಾಗಿತ್ತು. ದಾಳಿಯಿಂದ ಪಾರಾಗಲು ಕೆಲ ಪ್ರವಾಸಿಗರು ಡೇರೆಗಳಲ್ಲಿ ಅಡಗಿ ಕುಳಿತಿದ್ದರು.
ಪಹಲ್ಗಾಮ್ ದಾಳಿಗೆ 1 ವರ್ಷ ಸಮೀಪಿಸಿದ ದಿನ ಕರಾಳ ದಿನದ ಎಲ್ಲ ದೃಶ್ಯಗಳು ಭಾರತೀಯರ ಕಣ್ಣಿಗೆ ಕಟ್ಟಿವೆ.



