ಗಾಜಿಯಾಬಾದ್: ಕೊರಿಯನ್ ಲವ್ ಗೇಮ್‌ಗೆ ಗಾಜಿಯಾಬಾದ್‌ನ (Ghaziabad) ಮೂವರು ಸಹೋದರಿಯರು ತಮ್ಮ ಅಪಾರ್ಟ್ಮೆಂಟ್‌ನ 9ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಪೊಲೀಸ್ ತನಿಖೆಯಲ್ಲಿ ಒಂದೊಂದೇ ವಿಷಯಗಳು ಬಹಿರಂಗಗೊಳ್ಳುತ್ತಿದೆ. ಇದೀಗ ಮೂವರು ಸಹೋದರಿಯರು ಸೋಷಿಯಲ್ ಮೀಡಿಯಾದಲ್ಲಿ (Social Media) ಕೊರಿಯನ್ ಹೆಸರಲ್ಲಿ ಅಕೌಂಟ್ ಸೃಷ್ಟಿಸಿ ಹೆಚ್ಚಿನ ಫಾಲೋವರ್ಸ್ ಹೊಂದಿದ್ದ ವಿಷಯ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ನಿಶಿಕಾ (16), ಪ್ರಾಚಿ (14), ಮತ್ತು ಪಖಿ (12) ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್‌ವೊಂದನ್ನು ಕ್ರಿಯೇಟ್ ಮಾಡಿದ್ದರು. ಈ ಅಕೌಂಟ್‌ನಲ್ಲಿ ಮೂವರು ಸಹೋದರಿಯರು ಮಾರಿಯಾ, ಅಲಿಜಾ ಮತ್ತು ಸಿಂಡಿ ಎಂಬ ಕೊರಿಯನ್ ಹೆಸರನ್ನು ಇಟ್ಟುಕೊಂಡಿದ್ದರು. ಈ ಖಾತೆ ಹೆಚ್ಚಿನ ಫಾಲೋವರ್ಸ್ ಅನ್ನು ಹೊಂದಿತ್ತು. ಸುಮಾರು 10 ದಿನಗಳ ಹಿಂದೆ, ಅವರ ತಂದೆಗೆ ಈ ಅಕೌಂಟ್ ಬಗ್ಗೆ ತಿಳಿದು ಖಾತೆಯನ್ನು ಡಿಲೀಟ್ ಮಾಡಿದ್ದರು. ಅಲ್ಲದೇ ಅವರಿಂದ ಮೊಬೈಲ್ ಕಿತ್ತುಕೊಂಡಿದ್ದರು. ಇದರಿಂದ ಕೆ-ಡ್ರಾಮಾಗಳನ್ನು ವೀಕ್ಷಿಸಲಾಗದೇ ಸಹೋದರಿಯರು ಬೇಸರಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.

ಇನ್ನು ಸಹೋದರಿಯರ ಸಾವಿಗೆ ಕೊರಿಯನ್ ಲವ್ ಗೇಮ್ (Korean Lov ಒಂದೇ ಕಾರಣವಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಹೆಣ್ಣುಮಕ್ಕಳ ತಂದೆ ಚೇತನ್ ಕುಮಾರ್ ಸುಮಾರು 2 ಕೋಟಿ ರೂ. ಸಾಲ ಮಾಡಿದ್ದರು. ವಿದ್ಯುತ್ ಬಿಲ್ ಪಾವತಿಸುವ ಸಲುವಾಗಿ ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡಿದ್ದರು. ಅಲ್ಲದೇ ಮಕ್ಕಳನ್ನು ಮದುವೆ ಮಾಡಿ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದರು. ಕುಟುಂಬವು ಆರ್ಥಿಕ ತೊಂದರೆಗಳನ್ನು ಎದುರಿಸುತ್ತಿತ್ತು. ಅಲ್ಲದೇ ಸಹೋದರಿಯರು ಕಳೆದ ಎರಡು ವರ್ಷಗಳಿಂದ ಶಾಲೆಗೆ ಹೋಗುತ್ತಿರಲಿಲ್ಲ. ಸಾಲದ ಹೊರೆಯೇ ಇದಕ್ಕೆ ಕಾರಣ. ಸಾಲದಿಂದಾಗಿ ತಂದೆ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್‌ನೋಟ್‌ನಲ್ಲಿ ಏನಿದೆ?
ಆತ್ಮಹತ್ಯೆಗೂ ಮುನ್ನ ಮೂವರು ಸಹೋದರಿಯರು ಡೆತ್‌ನೋಟ್‌ವೊಂದನ್ನು ಬರೆದಿಟ್ಟಿದ್ದರು. ಈ ಡೈರಿಯಲ್ಲಿ ಬರೆದಿರುವ ಎಲ್ಲವನ್ನೂ ಓದಿ. ಏಕೆಂದರೆ ಇದೆಲ್ಲವೂ ನಿಜ. ನಮ್ಮನ್ನು ಕ್ಷಮಿಸಿ, ಅಪ್ಪಾ ಎಂದು ಅಳುವ ಈಮೋಜಿಯನ್ನು ಬರೆಯಲಾಗಿತ್ತು. ಇನ್ನು ಪಾಕೆಟ್ ಡೈರಿಯಲ್ಲಿ 8 ಪುಟಗಳ ಡೆತ್‌ನೋಟ್ ಬರೆಯಲಾಗಿದೆ. ಈ ಡೈರಿಯಲ್ಲಿ ಕೊರಿಯನ್ ಗೇಮಿಂಗ್ ಬಗ್ಗೆ ವಿವರಿಸಲಾಗಿದೆ.
ಕೊರಿಯನ್ ಗೇಮಿಂಗ್ ನಮ್ಮ ಜೀವನ, ನೀವು ನಮ್ಮ ಜೀವನವನ್ನು ಬಿಡಲು ಹೇಗೆ ಹೇಳುತ್ತೀರಿ? ನಾವು ಅವರನ್ನು ಎಷ್ಟು ಪ್ರೀತಿಸುತ್ತಿದ್ದೆವು ಎಂದು ನಿಮಗೆ ತಿಳಿದಿಲ್ಲ. ಕೊರಿಯನ್ ಮತ್ತು ಕೆ-ಪಾಪ್ ನಮ್ಮ ಜೀವನ ಎಂದು ನಮಗೆ ಮನವರಿಕೆಯಾಗಿದೆ. ನಾವು ಕೊರಿಯನ್ ನಟ ಮತ್ತು ಕೆ-ಪಾಪ್ ಗುಂಪನ್ನು ಪ್ರೀತಿಸಿದಷ್ಟು ನಿಮ್ಮನ್ನು ಮತ್ತು ಕುಟುಂಬವನ್ನು ಪ್ರೀತಿಸಲಿಲ್ಲ. ಕೊರಿಯನ್ ನಮ್ಮ ಜೀವನ. ನಾವು ಕೊರಿಯನ್ನರನ್ನು ಪ್ರೀತಿಸುತ್ತಿದ್ದರೂ ತಂದೆ ಭಾರತೀಯರೊಂದಿಗೆ ಮದುವೆ ಮಾಡುವುದರ ಬಗ್ಗೆ ಬೆದರಿಕೆ ಹಾಕಿದ್ದಾರೆ. ನಾವು ಇದನ್ನು ನಿರೀಕ್ಷಿಸಿರಲಿಲ್ಲ. ಅದಕ್ಕಾಗಿಯೇ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ನಮ್ಮನ್ನು ಕ್ಷಮಿಸಿ ಅಪ್ಪಾ ಎಂದು ಡೈರಿಯಲ್ಲಿ ಬರೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

