– ಕ್ರಮ ಕೈಗೊಳ್ಳುವ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ
ಚಿತ್ರದುರ್ಗ: ಜಿಲ್ಲೆಯಲ್ಲಿ ಬರ ಪರಿಹಾರ (Drought Relief) ವಿತರಣೆಯಲ್ಲಿ ಅಕ್ರಮ ಕೇಸ್ ಸಂಬಂಧ ಶೀಘ್ರ ಕ್ರಮಕ್ಕೆ ಚಳ್ಳಕೆರೆ ಶಾಸಕ ಟಿ ರಘುಮೂರ್ತಿ (T Raghumurthy) ಒತ್ತಾಯಿಸಿದ್ದಾರೆ.
ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಳಂಬ ಹಿನ್ನೆಲೆ ಶಾಸಕ ಅಸಮಾಧಾನ ವ್ಯಕ್ತಪಡಿಸಿದ್ದು, ಸದನದಲ್ಲಿ ಈ ಕುರಿತು ಪ್ರಸ್ತಾಪಿಸಿದ್ದಾರೆ. 2022-23ನೇ ಸಾಲಿನ ಬರ ಪರಿಹಾರದಲ್ಲಿ ಹಣ ದುರುಪಯೋಗವಾಗಿದೆ. 48 ಕೋಟಿ ರೂ. ಹಣ ದುರುಪಯೋಗವಾಗಿದೆ ಎಂದು ಆರೋಪಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಕ್ರಮ ಆಗಿದೆ. ಚಳ್ಳಕೆರೆಯಲ್ಲಿ ಬೆಳೆವಿಮೆ, ಫಸಲ್ ಭೀಮಾ ಯೋಜನೆಯಲ್ಲಿ ಅಕ್ರಮವಾಗಿದ್ದು, 83.10ಲಕ್ಷ ರೂ. ಹಣ ದುರುಪಯೋಗವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 38 ಕೋಟಿ ರೂ. ದುರುಪಯೋಗಗೊಂಡಿದೆ. ಇದರಲ್ಲಿ ಗ್ರಾಮ ಆಡಳಿತಾಧಿಕಾರಿಗಳು, ತಹಸೀಲ್ದಾರರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದು, ಮೂರು ವರ್ಷ ಕಳೆದರೂ ಕ್ರಮ ಆಗಿಲ್ಲ ಎಂದು ಕಿಡಿಕಾರಿದ್ದಾರೆ.
ಇನ್ನು ಶಾಸಕ ರಘುಮೂರ್ತಿಗೆ ಸಚಿವ ಪ್ರಿಯಾಂಕ ಖರ್ಗೆ ಉತ್ತರ ನೀಡಿದ್ದಾರೆ. ಪ್ರಕರಣ ಸಂಬಂಧ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಕೋರ್ಟ್ ನಿರ್ಬಂಧಕ ಆಜ್ಞೆ ಇದೆ. ಎಜಿ ಜೊತೆ ಈ ಬಗ್ಗೆ ಚರ್ಚಿಸಿ ನಿರ್ಬಂಧ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಭರವಸೆ ನೀಡಿದ್ದಾರೆ.

