ಪ್ರೀತಿಸಿ ಮದುವೆಯಾಗಿದ್ದ ಪತ್ನಿ ಕತ್ತು ಹಿಸುಕಿ ಕೊಂದ ಪತಿ – ಪೊಲೀಸರ ಮುಂದೆ ಶರಣಾದ

2 Min Read

ಲಕ್ನೋ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ಬಳಿಕ ಪೊಲೀಸರ ಮುಂದೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ (Kanpur) ನಡೆದಿದೆ.

ಮಹಾರಾಜಪುರ ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಗ್ಗೆ ವ್ಯಕ್ತಿ ಅಳುತ್ತಾ ಒಳಗೆ ಬಂದು ಇನ್ಸ್‌ಪೆಕ್ಟರ್‌ಗೆ, ‘ಸರ್… ನಾನು ನನ್ನ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದೇನೆ. ಆಕೆಯ ಶವ ಮನೆಯಲ್ಲಿ ಕಂಬಳಿಯಲ್ಲಿ ಸುತ್ತಿ ಬಿದ್ದಿದೆ’ ಎಂದು ಹೇಳಿ ಶರಣಾಗಿದ್ದಾನೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ – ಓರ್ವ ಸಾವು, ಇಬ್ಬರಿಗೆ ಗಾಯ

22 ವರ್ಷದ ಸಚಿನ್ ಕೊಲೆ ಆರೋಪಿ. ಶ್ವೇತ ಕೊಲೆಯಾದ ಮಹಿಳೆ. ಪತ್ನಿಯನ್ನು ಕೊಲೆ ಮಾಡಿ ಸುಮಾರು 4 ಗಂಟೆಗಳ ಕಾಲ ನಗರದಲ್ಲಿ ಅಲೆದಾಡಿದ್ದಾನೆ. ಪರಾರಿಯಾಗಲು ಯೋಚಿಸಿದ್ದ. ಕೊನೆಗೆ ಪೊಲೀಸ್‌ ಠಾಣೆಗೆ ಹೋಗಿ ಸರೆಂಡರ್‌ ಆಗಿದ್ದಾನೆ. ಆತನನ್ನು ವಶಕ್ಕೆ ಪಡೆದು ಪೊಲೀಸರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಸಚಿನ್ ಮತ್ತು ಶ್ವೇತಾ ಮೂಲತಃ ಫತೇಪುರ್ ಜಿಲ್ಲೆಯ ಮೋಹನಪುರ್ ಗ್ರಾಮದವರು. ಈ ಜೋಡಿ ಪ್ರೀತಿಸಿ ತಮ್ಮ ಕುಟುಂಬದವರ ಇಚ್ಛೆಗೆ ವಿರುದ್ಧವಾಗಿ ನ್ಯಾಯಾಲಯದ ಮೂಲಕ ವಿವಾಹವಾದರು. ಆರಂಭದಲ್ಲಿ ಸೂರತ್‌ಗೆ ತೆರಳಿದರು. ಅಲ್ಲಿ ಸಚಿನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಒಂದು ತಿಂಗಳ ನಂತರ ಇಬ್ಬರೂ ಕಾನ್ಪುರಕ್ಕೆ ತೆರಳಿ ಒಂದು ರೂಮ್‌ ಬಾಡಿಗೆಗೆ ಪಡೆದರು. ಅಲ್ಲಿ ಸಚಿನ್ ಜೀವನ ಸಾಗಿಸಲು ಆಟೋರಿಕ್ಷಾ ಓಡಿಸಲು ಪ್ರಾರಂಭಿಸಿದ.

ಈ ನಡುವೆ ಸಚಿನ್‌ ತನ್ನ ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ. ಆಕೆಯ ಖಾತೆಗೆ ಆಗಾಗ್ಗೆ ಹಣ ಜಮಾ ಆಗುತ್ತಿತ್ತು. ಈ ಬಗ್ಗೆ ಪ್ರಶ್ನಿಸಿದ್ದ. ನನ್ನ ಅಜ್ಜಿ ಕೊಟ್ಟಿದ್ದಾಳೆಂದು ಶ್ವೇತಾ ಹೇಳಿದರೂ, ಆತ ನಂಬಲಿಲ್ಲ. ತಾವಿದ್ದ ಮನೆಗೆ ಎದುರು ವಾಸವಾಗಿದ್ದ ವಿದ್ಯಾರ್ಥಿಗಳ ಬಗ್ಗೆ ಅನುಮಾನ ಹೊಂದಿದ್ದ. ಪತ್ನಿ ಬಗ್ಗೆ ಅನುಮಾನ ಹೊಂದಿದ್ದ ಸಚಿನ್‌ ಒಂದು ಪ್ಲ್ಯಾನ್‌ ಮಾಡಿದ. ಒಂದು ದಿನ ತನ್ನ ಹೆಂಡತಿಗೆ ಕರೆ ಮಾಡಿ, ನಾನು ಸ್ನೇಹಿತರೊಂದಿಗೆ ಪಾರ್ಟಿ ಮಾಡ್ತಿದ್ದೇನೆ. ರಾತ್ರಿ ಮನೆಗೆ ಬರಲ್ಲ ಅಂತ ಸುಳ್ಳು ಹೇಳಿದ. ನಂತರ ಒಂದು ಹೊತ್ತಲ್ಲಿ ಮನೆಗೆ ಹಿಂತಿರುಗಿದಾಗ, ತನ್ನ ಹೆಂಡತಿ ನೆರೆಹೊರೆಯ ಇಬ್ಬರು ಯುವಕರೊಂದಿಗೆ ಇದ್ದಿದ್ದನ್ನು ಕಂಡಿದ್ದಾನೆ. ಇದನ್ನೂ ಓದಿ: ಡಿವೈಡರ್ ಹಾರಿ ಟಿಪ್ಪರ್‌ಗೆ ಡಿಕ್ಕಿಯಾದ ಬೈಕ್ – ಮೂವರು ವಿದ್ಯಾರ್ಥಿಗಳ ತಲೆ ಛಿದ್ರ

ಸಚಿನ್‌ ತನ್ನ ಪತ್ನಿ ಮತ್ತು ಯುವಕರ ಜೊತೆ ಜಗಳ ತೆಗೆದು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದ. ಪೊಲೀಸರು ಎಲ್ಲರನ್ನೂ ಕರೆಸಿ, ಪತಿ-ಪತ್ನಿಗೆ ಬುದ್ದಿಮಾತು ಹೇಳಿ ಕಳುಹಿಸಿದ್ದರು. ಯುವಕರನ್ನು ಠಾಣೆಯಲ್ಲೇ ಉಳಿಸಿಕೊಂಡಿದ್ದರು. ಮನೆಗೆ ಹಿಂತಿರುಗಿದ ನಂತರ ಗಂಡ-ಹೆಂಡತಿ ನಡುವೆ ಜಗಳ ಮತ್ತಷ್ಟು ಹೆಚ್ಚಾಯಿತು. ಸಚಿನ್‌ ತನ್ನ ಪತ್ನಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

Share This Article