ಬಿಹಾರ: ಇಂದಿರಾ ಆವಾಸ್ ಯೋಜನೆಯಡಿ 30 ವರ್ಷಗಳ ಹಿಂದೆ ನಿರ್ಮಿಸಿದ್ದ ಮನೆಯ ಛಾವಣಿ ಕುಸಿದು ಮೂರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ಬಿಹಾರದ (Bihar) ಸರನ್ (Saran) ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಬಬ್ಲು ಖಾನ್ (32), ಪತ್ನಿ ರೋಷನ್ ಖಾತೂನ್ (30), ಮಗ ಮೊಹಮ್ಮದ್ ಚಂದ್ (10), ಮಗಳು ರುಕ್ಷಾರ್ (12) ಮತ್ತು ಅವರ ಕಿರಿಯ ಮಗಳು ಚಾಂದನಿ (2) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಉತ್ತರ ಪ್ರದೇಶದ ಶಾಲೆ, ಕಾಲೇಜುಗಳಲ್ಲಿ ವಂದೇ ಮಾತರಂ ಗೀತೆ ಕಡ್ಡಾಯ: ಯೋಗಿ ಆದಿತ್ಯನಾಥ್
ಭಾನುವಾರ (ನ.9) ರಾತ್ರಿ 9:45ರ ಸುಮಾರಿಗೆ ಅವಘಡ ಸಂಭವಿಸಿದೆ. ಮೃತ ಐವರು ಮನೆಯಲ್ಲಿ ಮಲಗಿದ್ದರು. ಈ ವೇಳೆ ಛಾವಣಿ ಕುಸಿದಿದ್ದು, ಪರಿಣಾಮ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಸ್ಥಳೀಯರ ಮಾಹಿತಿ ಪ್ರಕಾರ, ಭಾರೀ ಶಬ್ದ ಕೇಳಿಸಿದ ತಕ್ಷಣ ನಾವೆಲ್ಲ ಸ್ಥಳಕ್ಕೆ ಬಂದೆವು. ಈ ಮನೆಯನ್ನು ಇಂದಿರಾ ಆವಾಸ್ ಯೋಜನೆಯಡಿಯಲ್ಲಿ 30 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು. ಗೋಡೆ ಹಾಗೂ ಛಾವಣಿಯಲ್ಲಿ ಬಿರುಕು ಬಿಟ್ಟಿತ್ತು. ಆದರೆ ಕುಟುಂಬ ಆರ್ಥಿಕವಾಗಿ ದುರ್ಬಲವಾಗಿದ್ದ ಕಾರಣ, ಮನೆಯನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ ಎಂದಿದ್ದಾರೆ.
ಈ ಕುರಿತು ಸರನ್ ಎಸ್‌ಎಸ್‌ಪಿ ಕುಮಾರ್ ಆಶಿಶ್ ಮಾಹಿತಿ ನೀಡಿದ್ದು, ಮನೆ 30 ವರ್ಷಗಳಿಗಿಂತಲೂ ಹಳೆಯದಾಗಿದ್ದು, ಪರಿಣಾಮ ಛಾವಣಿ ಕುಸಿದಿದೆ. ಸದ್ಯ ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗಳೂರು | ಪತ್ನಿಯಿಂದ ಕಿರುಕುಳ ಆರೋಪ – ಬ್ಯಾಂಕ್ ಉದ್ಯೋಗಿ ಆತ್ಮಹತ್ಯೆ!

