ಪ್ರಸಿದ್ಧ ಅಸ್ಸಾಮೀಸ್ ಗಾಯಕ ಮತ್ತು ಸಾಂಸ್ಕೃತಿಕ ಐಕಾನ್ ಜುಬೀನ್ ಗಾರ್ಗ್ (Zubeen Garg) ಅವರು ಶುಕ್ರವಾರ ಸ್ಕೂಬಾ ಡೈವಿಂಗ್ ಅವಘಡದಲ್ಲಿ ಮೃತಪಟ್ಟಿದ್ದಾರೆ.
52 ವಯಸ್ಸಿನ ಗಾರ್ಗ್ ಅವರು ಸಿಂಗಾಪುರದಲ್ಲಿದ್ದರು. ಸಮುದ್ರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅವಘಡಕ್ಕೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದ ಗರ್ಗ್ ಅವರನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ನಟಿ ದಿಶಾ ಪಟಾನಿ ಮನೆ ಮೇಲೆ ಗುಂಡಿನ ದಾಳಿ; ಇಬ್ಬರು ಅಪ್ರಾಪ್ತರು ಅರೆಸ್ಟ್
ಗಾಯಕ ಈಶಾನ್ಯ ಉತ್ಸವದಲ್ಲಿ ಪಾಲ್ಗೊಳ್ಳಲು ಸಿಂಗಾಪುರದಲ್ಲಿದ್ದರು. ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸಂತಾಪ ವ್ಯಕ್ತಪಡಿಸಿದ್ದಾರೆ. ಇಂದು ಅಸ್ಸಾಂ ತನ್ನ ನೆಚ್ಚಿನ ಪುತ್ರರಲ್ಲಿ ಒಬ್ಬನನ್ನು ಕಳೆದುಕೊಂಡಿದೆ. ಜುಬೀನ್ ಅವರ ಧ್ವನಿಯು ಜನರನ್ನು ಚೈತನ್ಯಗೊಳಿಸುವ ಸಾಟಿಯಿಲ್ಲದ ಸಾಮರ್ಥ್ಯವನ್ನು ಹೊಂದಿತ್ತು. ನಮ್ಮ ಭವಿಷ್ಯದ ಪೀಳಿಗೆಯು ಅವರನ್ನು ಅಸ್ಸಾಂನ ಸಂಸ್ಕೃತಿಯ ಧೀಮಂತ ವ್ಯಕ್ತಿಯಾಗಿ ನೆನಪಿಸಿಕೊಳ್ಳುತ್ತದೆ. ಆ ಮಾಂತ್ರಿಕ ಧ್ವನಿ ಶಾಶ್ವತವಾಗಿ ಮೌನವಾಗಿದೆ ಎಂದು ಭಾವುಕ ಪೋಸ್ಟ್ ಹಾಕಿದ್ದಾರೆ.
ಜುಬೀನ್ ಗರ್ಗ್ ಅಸ್ಸಾಮಿ ಮತ್ತು ಹಿಂದಿ ಮಾತ್ರವಲ್ಲದೆ, ಬಂಗಾಳಿ, ಮರಾಠಿ, ತಮಿಳು, ತೆಲುಗು ಮತ್ತು ನೇಪಾಳಿ ಸೇರಿದಂತೆ ಹಲವು ಭಾಷೆಗಳಿಗೆ ಹಾಡಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲೇ ಹಾಡಲು ಪ್ರಾರಂಭಿಸಿದರು. ಅವರ ಮೊದಲ ಆಲ್ಬಂ ‘ಅನಾಮಿಕಾ’ 1992 ರಲ್ಲಿ ಬಿಡುಗಡೆಯಾಯಿತು. ‘ಮಾಯಾ’, ‘ಜುಬೀನೋರ್ ಗಾನ್’, ‘ಕ್ಸಾಬ್ಡಾ’, ‘ಪಾಖಿ’, ‘ಶಿಶು’, ‘ಜಂತ್ರ’ ಅವರ ಅತ್ಯಂತ ಪ್ರೀತಿಯ ಅಸ್ಸಾಮೀಸ್ ಆಲ್ಬಂಗಳಲ್ಲಿ ಕೆಲವು. ಅವರು ‘ದಿಲ್ ಸೆ’, ‘ವಾಸ್ತವ್’, ‘ಫಿಜಾ’, ‘ಅಶೋಕ’, ‘ಕಾಂಟೆ’, ‘ಗ್ಯಾಂಗ್‌ಸ್ಟರ್’, ‘ಕ್ರಿಶ್ 3’ ಮತ್ತು ಇನ್ನೂ ಹೆಚ್ಚಿನ ಹಿಂದಿ ಚಿತ್ರಗಳಿಗೂ ಹಾಡಿದ್ದಾರೆ. ಆದಾಗ್ಯೂ, ಗ್ಯಾಂಗ್‌ಸ್ಟರ್‌ಗಾಗಿ ಅವರು ಹಾಡಿದ್ದ ‘ಯಾ ಅಲಿ’ ಹಾಡು ಅವರಿಗೆ ಅಸ್ಸಾಂನ ಹೊರಗೂ ಜನಪ್ರಿಯತೆ ತಂದುಕೊಟ್ಟಿತು.