– 14 ಕೆಜಿ ಚಿನ್ನದೊಂದಿಗೆ ಮಾರ್ಚ್ 3 ರಂದು ಸೆರೆ
– ತಿಂಗಳಿಗೆ ಕನಿಷ್ಠ 3 ಬಾರಿ ದುಬೈಗೆ ಪ್ರಯಾಣ
ಬೆಂಗಳೂರು: 2022 ರಲ್ಲಿ ವಿದೇಶ ಪ್ರಯಾಣಕ್ಕೆ ಹೋಗದ ರನ್ಯಾ ರಾವ್ (Ranya Rao) 2023 ರ ಜೂನ್ ಬಳಿಕ 52 ಬಾರಿ ದುಬೈ (Dubai) ಪ್ರಯಾಣ ಮಾಡಿದ್ದ ಸ್ಫೋಟಕ ವಿಚಾರ ಈಗ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ತನಿಖೆಯಿಂದ ಬೆಳಕಿಗೆ ಬಂದಿದೆ.
ಹೌದು. 2021 ರಿಂದ 2025 ರವರೆಗೆ ರನ್ಯಾ ರಾವ್ ವಿದೇಶಕ್ಕೆ ಹೋದ ಲೆಕ್ಕ ಈಗ ಸಿಕ್ಕಿದೆ. 2021 ರಲ್ಲಿ ಒಮ್ಮೆ ಕುಟುಂಬದ ಜೊತೆ ವಿದೇಶಕ್ಕೆ ಹೋಗಿದ್ದ ರನ್ಯಾರಾವ್ 2023 ಜೂನ್ ಬಳಿಕ ದುಬೈ ಅನ್ನೇ ಅಡ್ಡ ಮಾಡಿಕೊಂಡಿದ್ದಳು.
ಒಟ್ಟು 52 ಬಾರಿ ದುಬೈ ಪ್ರಯಾಣದ ಪೈಕಿ 45 ಬಾರಿ ಒಂದೇ ದಿನದಲ್ಲಿ ದುಬೈಗೆ ತೆರಳಿ ಮರಳಿ ಭಾರತಕ್ಕೆ ಬಂದಿದ್ದಳು. ತಿಂಗಳಿಗೆ ಕನಿಷ್ಠ 3 ಬಾರಿ ದುಬೈ ವಿಮಾನ ಹತ್ತುತ್ತಿದ್ದ ರನ್ಯಾ ಕಳೆದ ಐದು ತಿಂಗಳಲ್ಲಿ 11 ಬಾರಿ ದುಬೈಗೆ ಹಾರಿದ್ದಳು. ಈಗ ನವೆಂಬರ್‌ನಿಂದ ಮಾರ್ಚ್‌ವರೆಗೆ ರನ್ಯಾ ಪ್ರಯಾಣ ಮಾಡಿದ ವಿವರ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಮಾರ್ಚ್ 3 ರಂದು ದುಬೈನಿಂದ ಬರುವಾಗ 14 ಕೆಜಿ ಚಿನ್ನವನ್ನು ರನ್ಯಾ ತಂದಿದ್ದಳು. ಒಂದು ಬಾರಿ ಇಷ್ಟು ಪ್ರಮಾಣದ ಚಿನ್ನವನ್ನು ತಂದ ಈಕೆ 45 ಬಾರಿ ಒಂದೇ ದಿನ ಹೋಗಿ ಬಂದಿದ್ದಾಳೆ. ಇದನ್ನು ಲೆಕ್ಕ ಹಾಕಿದ್ದರೆ ಕ್ವಿಂಟಾಲ್‌ಗಟ್ಟಲೇ ಚಿನ್ನವನ್ನು ಕಳ್ಳ ಸಾಗಾಣೆ ಮಾಡಿರಬಹುದಾ ಎಂಬ ಶಂಕೆ ಎದ್ದಿದೆ. ಇದನ್ನೂ ಓದಿ: ನಾನು ವಿಮಾನದಲ್ಲಿ ಚಿನ್ನ ತಂದೇ ಇಲ್ಲ, ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ: ರನ್ಯಾ ರಾವ್
ಯಾವ ಯಾವ ದಿನ ದುಬೈಗೆ ಪ್ರಯಾಣ?
13 ನವೆಂಬರ್, 2024
12 ಡಿಸೆಂಬರ್, 2024
20 ಡಿಸೆಂಬರ್, 2024
27 ಡಿಸೆಂಬರ್, 2024
07 ಜನವರಿ, 2025
11 ಜನವರಿ, 2025
16 ಜನವರಿ, 2025
10 ಫೆಬ್ರವರಿ, 2025
12 ಫೆಬ್ರವರಿ, 2025
18 ಫೆಬ್ರವರಿ, 2025
03 ಮಾರ್ಚ್, 2025
ರನ್ಯಾ ಹೇಳಿದ್ದೇನು?
6 ಅಡಿ ಎತ್ತರದ ವ್ಯಕ್ತಿಯೊಬ್ಬ ಚಿನ್ನವಿದ್ದ ಎರಡು ಬಾಕ್ಸ್ ನೀಡಿದ್ದ ಎಂದು ರನ್ಯಾ ಡಿಆರ್‌ಐ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಳು. ಮಾರ್ಚ್ 1ರಂದು ವಿದೇಶಿ ನಂಬರ್‌ನಿಂದ ನನಗೆ ಕರೆ ಬಂದಿತ್ತು. ಚಿನ್ನ ತಂದು ಡೆಲಿವರಿ ಮಾಡಬೇಕು ಎಂಬ ಸೂಚನೆ ಆ ಕರೆಯಲ್ಲಿ ಇತ್ತು. ನಂತರ ಟಿಕೆಟ್ ಬುಕ್ ಮಾಡಿಕೊಂಡು ಮಾರ್ಚ್ 2ರಂದು ದುಬೈಗೆ ಹೋದೆ. ಇದನ್ನೂ ಓದಿ: ದುಬೈ ಟು ಬೆಂಗಳೂರು – ಆ 9 ಗಂಟೆಯಿಂದ ರನ್ಯಾ ರಾವ್ ಅರೆಸ್ಟ್!
ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಬಳಿ ಬರಲು ಸೂಚನೆ ಸಿಕ್ಕಿತ್ತು. 6 ಅಡಿ ಎತ್ತರದ ವ್ಯಕ್ತಿಯೊಬ್ಬ ಬಂದು ಚಿನ್ನವಿದ್ದ ಎರಡು ಬಾಕ್ಸ್ ನೀಡಿದ. ಬಂಗಾರ ಬಚ್ಚಿಡಲು ವಿಮಾನ ನಿಲ್ದಾಣದಲ್ಲೇ ಬ್ಯಾಡೇಜ್ ಮತ್ತು ಕತ್ತರಿ ಖರೀದಿಸಿದೆ.
ವಾಶ್‌ರೂಂಗೆ ಹೋಗಿ ಮೈಗೆ ಚಿನ್ನದ ಗಟ್ಟಿಗಳನ್ನು ಅಂಟಿಸಿಕೊಂಡು ಬಂದೆ. ಹೇಗೆ ಕಳ್ಳಸಾಗಣೆ ಮಾಡಬೇಕು ಎಂಬುದನ್ನು ಯೂಟ್ಯೂಬ್ ನೋಡಿ ಕಲಿತೆ. ಹಿಂದೆಂದೂ ನಾನು ಚಿನ್ನ ಕಳ್ಳಸಾಗಣೆ ಮಾಡಿರಲಿಲ್ಲ. ಮೊದಲ ಬಾರಿಗೆ ಕಳ್ಳ ಸಾಗಾಣಿಕೆ ಮಾಡಿದ್ದೆ.
ಬೆಂಗಳೂರು ಏರ್‌ಪೋರ್ಟ್ ಟೋಲ್ ಬಳಿ ಬರಲು ನನಗೆ ಸೂಚನೆ ಸಿಕ್ಕಿತ್ತು. ಸರ್ವೀಸ್ ರೋಡ್‌ನಲ್ಲಿ ನಿಲ್ಲಿಸಿದ ಆಟೋದಲ್ಲಿ ಚಿನ್ನ ಇಟ್ಟು ಹೋಗಲು ತಿಳಿಸಿದ್ದರು. ನನ್ನ ಜೊತೆ ಮಾತಾಡಿದ್ದು ಯಾರೆಂದು ಗೊತ್ತಿಲ್ಲ. ಭಾಷೆ ನೋಡಿದರೆ ಆ ವ್ಯಕ್ತಿ ಆಫ್ರಿಕನ್ ಅಮೆರಿಕನ್ ಇರಬಹುದು ಎಂದು ಹೇಳಿದ್ದಳು.
ಅರೆಸ್ಟ್ ಆಗಿದ್ದು ಹೇಗೆ?
ರನ್ಯಾ ಬಂಧನವಾಗುವ 2 ವಾರಗಳ ಹಿಂದೆ ರನ್ಯಾ ದುಬೈಗೆ ಹೋಗಿ ಬಂದಿದ್ದಳು. ಆಗ ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ಕಸ್ಟಮ್ ಅಧಿಕಾರಿಗಳೊಂದಿಗೆ ಕಿರಿಕ್ ಮಾಡಿಕೊಂಡು, ನಾನು ಡಿಜಿಪಿ ಮಗಳು ಎಂದು ತಪಾಸಣೆಗೆ ಒಳಗಾಗದೇ ಹೊರಗೆ ಬರುತ್ತಿದ್ದಳು. ಪ್ರತಿ ಬಾರಿ ಆಕೆಯನ್ನು ಕರೆದೊಯ್ಯಲು ವಿಮಾನ ನಿಲ್ದಾಣ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಬಸವರಾಜು ಹೋಗುತ್ತಿದ್ದರು. ಈ ಜಗಳದ ಬಳಿಕ ರನ್ಯಾಳ ಮೇಲೆ ಕಣ್ಣಿಟ್ಟಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯ ವಿದೇಶ ಪ್ರಯಾಣದ ಮೇಲೆ ಕಣ್ಣಿಟ್ಟಿದ್ದರು.
ರನ್ಯಾ ಮತ್ತೆ ದುಬೈಗೆ ಪ್ರಯಾಣ ಬೆಳೆಸಿದ ಬೆನ್ನಲ್ಲೇ ಜಾಗೃತರಾದ ಅಧಿಕಾರಿಗಳು ರನ್ಯಾ ಬರುವಿಕೆಗಾಗಿಯೇ ಕಾಯುತ್ತಿದ್ದರು. ಮಾ. 3 ರಂದು ರನ್ಯಾ ಪತಿ ಜೊತೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಣಕ್ಕೆ ಬಂದಿಳಿಯುತ್ತಿದ್ದಂತೆ ಡಿಆರ್‌ಐ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದಿದ್ದಾರೆ. ಆಗಲೂ ಸಹ ರನ್ಯಾಳನ್ನು ತಪಾಸಣೆ ಇಲ್ಲದೇ ಹೊರಗೆ ಕರೆತರಲು ವಿಮಾನ ನಿಲ್ದಾಣ ಠಾಣೆ ಹೆಡ್ ಕಾನ್‌ಸ್ಟೇಬಲ್ ಬಸವರಾಜ್ ತೆರಳಿದ್ದರು. ರನ್ಯಾಳನ್ನ ಅಧಿಕಾರಿಗಳು ವಶಕ್ಕೆ ಪಡೆದಾಗ ಅವರು ಡಿಜಿಪಿ ರಾಮಚಂದ್ರರಾವ್ ಅವರ ಮಗಳು ಎಂದಿದ್ದಾರೆ.
ಕೂಡಲೇ ರನ್ಯಾಳನ್ನು ಲೋಹ ಪರಿಶೋಧಕ ಕಚೇರಿಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ 1 ಕೆಜಿ ತೂಕದ 14 ಗೋಲ್ಡ್ ಬಿಸ್ಕೆಟ್ ತಂದಿರುವುದು ತಿಳಿದಿದೆ. ತೊಡೆಯ ಭಾಗಕ್ಕೆ 14 ಬಿಸ್ಕೆಟ್‌ಗಳನ್ನು ಗಮ್ ಹಾಕಿ ಅಂಟಿಸಿಕೊಂಡು ಬಳಿಕ ಟೇಪ್‌ನಿಂದ ಸುತ್ತಿಕೊಂಡಿದ್ದಳು. ಯಾವುದೇ ಸ್ಕ್ಯಾನರ್‌ನಲ್ಲಿ ಅನುಮಾನ ಬಾರದಂತೆ ಕ್ರ್ಯಾಂಪ್ ಬ್ಯಾಂಡೇಜ್ ಹಾಕಿಕೊಂಡು ಬಂದಿದ್ದಳು. ಕೂಡಲೇ ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಿಸಿದಾಗದೇ ಆಕೆ ಪೊಲೀಸ್ ಅಧಿಕಾರಿಯ ಮಗಳು ಎನ್ನುವುದು ಬಯಲಾಗಿದೆ.