ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Ragini Dwivedi) ಇಂದು (ಮೇ 24) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಾಗಿಣಿ 34ನೇ ವರ್ಷದ ಬರ್ತ್ಡೇಯ ಸಂಭ್ರಮ ಡಬಲ್ ಮಾಡಲು ‘ಸಂಜು ವೆಡ್ಸ್ ಗೀತಾ 2’ (Sanju Weds Geetha 2) ಚಿತ್ರತಂಡ ಸ್ಪೆಷಲ್ ವಿಡಿಯೋವೊಂದು ರಿಲೀಸ್ ಮಾಡಿ ನಟಿಗೆ ಶುಭಕೋರಿದ್ದಾರೆ. ರಿಲೀಸ್ ಮಾಡಿರುವ ಮೇಕಿಂಗ್ ವಿಡಿಯೋದಲ್ಲಿ ರಾಗಿಣಿ ಸಖತ್ ಗ್ಲ್ಯಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಬೆಳ್ಳಿಪರದೆಯಲ್ಲಿ ಸಮಂತಾ ಎಂಟ್ರಿ ನೋಡ್ತಿದ್ದಂತೆ ನಾಚಿ ನೀರಾದ ನಾಗಚೈತನ್ಯ
ಅಂದಹಾಗೆ, ಕಾಡುವಂಥ ಪ್ರೇಮಕಥೆಗಳನ್ನು ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ‘ಸಂಜು ವೆಡ್ಸ್ ಗೀತಾ’ ಚಿತ್ರದ ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ ಹೆಣೆದು ‘ಸಂಜು ವೆಡ್ಸ್ ಗೀತಾ 2’ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಶ್ರೀನಗರ ಕಿಟ್ಟಿ ಮತ್ತು ರಚಿತಾ (Rachita Ram) ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ. ಅದೇ ಸಂದರ್ಭದ ಸಣ್ಣ ತುಣುಕನ್ನು ಇದೀಗ ರಾಗಿಣಿ ಹುಟ್ಟುಹಬ್ಬದ ದಿನ ರಿಲೀಸ್ ಮಾಡಿದ್ದಾರೆ.


ನಾಗಶೇಖರ್ ಅವರ ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು, ಶ್ರೀಧರ ವಿ. ಸಂಭ್ರಮ್ 5 ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ, ತಬಲಾನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್ ಅಲ್ಲದೆ, ಖಳನಟ ಸಂಪತ್ ಕುಮಾರ್ ಸೇರಿದಂತೆ ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

