ರಾಜಪಥದಲ್ಲಿ ಭಾರತದ ವೈಭವ ಅನಾವರಣ

Public TV
5 Min Read
Karnataka tableau republic day 2022 2

ನವದೆಹಲಿ: ದೇಶಾದ್ಯಂತ 73ನೇ ಗಣರಾಜ್ಯೋತ್ಸವ ಸಂಭ್ರಮದಿಂದ ಆಚರಿಸಲಾಗಿದೆ. ದೆಹಲಿ ರಾಜಪಥ್‍ನಲ್ಲಿ ಭಾರತದ ಸ್ವತಂತ್ರ್ಯೋತ್ಸವದ ಅಮೃತಮಹೋತ್ಸವ ಸಂಭ್ರಮ, ಕೋವಿಡ್ ಮಾರ್ಗಸೂಚಿಯ ನಡುವೆ ಗಣರಾಜ್ಯೋತ್ಸವ ಪರೇಡ್ ಸಂಭ್ರಮದಿಂದ ನಡೆಯಿತು.

Republic Day 2022 PARDE

ವಿಶೇಷತೆ ಏನು?
ರಾಜಪಥ್‍ನಲ್ಲಿ ವಿರಾಟ್ ಭಾರತದ ಒಂದು ವಿಹಾಂಗಮ ನೋಟವನ್ನು ಪ್ರದರ್ಶಿಸಲಾಯಿತು. ನವ ಭಾರತದ ಮಿಲಿಟರಿ ಶಕ್ತಿ ಇಂದಿನ ಸಮಾರಂಭದಲ್ಲಿ ಅನಾವರಣಗೊಂಡಿತು. ಈ ಸಮಾರಂಭದಲ್ಲಿ ಮೊಟ್ಟ ಮೊದಲ ಬಾರಿಗೆ 75 ವಿಮಾನಗಳು ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಇದರೊಂದಿಗೆ ಪರೇಡ್‍ನಲ್ಲಿ ಹಲವು ರಾಜ್ಯಗಳ ಸ್ತಬ್ಧ ಚಿತ್ರ, ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡಗರ ಕಣ್ಮನ ಸೆಳೆಯಿತು. ಇದನ್ನೂ ಓದಿ: ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ

ಬೆಳಗ್ಗೆ 10:30 ಸುಮಾರಿಗೆ ಆರಂಭಗೊಂಡ ಪರೇಡ್ ಕಾರ್ಯಕ್ರಮ 12:15ಕ್ಕೆ ಮುಕ್ತಾಯಗೊಂಡಿತು. ಪ್ರತಿ ವರ್ಷ ಈ ಕಾರ್ಯಕ್ರಮ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತಿತ್ತು. ಈ ಬಾರಿ 30 ನಿಮಿಷ ತಡವಾಗಿ ಆರಂಭಗೊಂಡಿತು. ರಾಜಪಥ್‍ನಲ್ಲಿ ಮಂಜು ಆವರಿಸಿಕೊಂಡಿದ್ದ ಕಾರಣ ಈ ಬಾರಿ ಕಾರ್ಯಕ್ರಮವನ್ನು ಪೂರ್ವನಿಗದಿಯಂತೆ 10:30ಕ್ಕೆ ಆರಂಭಿಸಲಾಯಿತು. ಕೊರೊನಾ ಕಾಟದಿಂದಾಗಿ ಕಳೆದ ಬಾರಿಯಂತೆ ಈ ವರ್ಷ ಕೂಡಾ ಯಾವುದೇ ವಿದೇಶಿ ಮುಖ್ಯ ಅತಿಥಿಗೆ ಆಹ್ವಾನ ನೀಡಿಲ್ಲ. ಈ ಮೂಲಕ ಸತತ 2ನೇ ವರ್ಷ ಯಾವುದೇ ವಿದೇಶಿ ಅತಿಥಿ ಇಲ್ಲದೆ ಗಣರಾಜ್ಯೋತ್ಸವದ ಆಚರಣೆ ನಡೆಯಿತು.  ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ: ಮೋದಿ ಟೋಪಿ, ಶಾಲು ವಿಶೇಷತೆ ಏನು?

ಪರೇಡ್‍ನಲ್ಲಿ ಮೊದಲ ಬಾರಿಗೆ ಭಾರತೀಯ ವಾಯುಪಡೆಯ 75 ವಿಮಾನಗಳ ಭವ್ಯ ಫ್ಲೈ-ಪಾಸ್ಟ್ ಮಾಡಿದವು. ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಆಯ್ಕೆಯಾದ 480 ಸ್ಪರ್ಧಿಗಳು ಸಾಂಸ್ಕೃತಿಕ ಪ್ರದರ್ಶನಗಳನ್ನು ನೀಡಿದರು. ಪ್ರತಿ 75 ಮೀಟರ್ ಅಂತರದಲ್ಲಿ 10 ದೊಡ್ಡ ಎಲ್‍ಇಡಿ ಪರದೆಗಳನ್ನು ಅಳವಡಿಸಲಾಗಿತ್ತು. ಈ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳದಿಂದ ದೂರ ಕುಳಿತಿರುವ ಜನರಿಗೂ ಕಾರ್ಯಕ್ರಮ ವೀಕ್ಷಿಸುವ ಅವಕಾಶ ಕಲ್ಪಿಸಿಕೊಡಲಾಗಿತ್ತು.

ಪರೇಡ್‍ನಲ್ಲಿ ಲಸಿಕೆಯ ಎರಡೂ ಡೋಸ್‍ಗಳನ್ನು ಪಡೆದುಕೊಂಡವರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡಲಾಯಿತು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾರು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಅವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶಕ್ಕೆ ನೀಡಲಾಗಿತ್ತು. ಕೊರೊನಾ ಭೀತಿಯಿಂದಾಗಿ ಈ ಬಾರಿ ವೀಕ್ಷಕರ ಸಂಖ್ಯೆಯನ್ನು 5 ರಿಂದ 8 ಸಾವಿರ ಪ್ರೇಕ್ಷಕರಿಗೆ ಮಾತ್ರ ಮಿತಿಗೊಳಿಸಲಾಗಿತ್ತು. ಕಳೆದ ವರ್ಷ 25 ಸಾವಿರ ಜನರು ಪರೇಡ್ ವೀಕ್ಷಿಸಿದ್ದರು.

ರಾಜಪಥ್‍ನಲ್ಲಿ 25 ಟ್ಯಾಬ್ಲೋಗಳ ಪರೇಡ್:
12 ರಾಜ್ಯ, 9 ಕೇಂದ್ರ ಸಚಿವಾಲಯಗಳು, 2 DRDO, ವಾಯುಪಡೆ ಮತ್ತು ನೌಕಾಪಡೆಯಿಂದ ತಲಾ ಒಂದು ಟ್ಯಾಬ್ಲೋ ಸೇರಿ ಒಟ್ಟು 25 ಟ್ಯಾಬ್ಲೋಗಳು ಪರೇಡ್‍ನಲ್ಲಿ ಸಾಗಿದವು. ಪರೇಡ್‍ನಲ್ಲಿ, ಸಿಆರ್‍ಪಿಎಫ್, ಎಸ್‍ಎಸ್‍ಬಿ ಸಿಬ್ಬಂದಿಯಿಂದ ಶೌರ್ಯ ಪ್ರದರ್ಶನ ನಡೆಯಿತು. ದೆಹಲಿ ಪೆÇಲೀಸರು, ಎನ್‍ಸಿಸಿ ಸ್ಕ್ವಾಡ್ ಸಹ ಪರೇಡ್ ನಲ್ಲಿ ಭಾಗಿಯಾದರು. ವಾಯುಪಡೆ, ನೌಕಾಪಡೆ ಮತ್ತು ಸೇನೆಯ 75 ವಿಮಾನಗಳು ಗ್ರ್ಯಾಂಡ್ ಫ್ಲೈಪಾಸ್ಟ್‍ನಲ್ಲಿ ಭಾಗಿಯಾದರು. ಸ್ವಾತಂತ್ರ್ಯದ 75 ನೇ ವರ್ಷದಲ್ಲಿ ಅಮೃತಮಹೋತ್ಸವದ ಸಂಭ್ರಮಕ್ಕೆ ಸಾಕ್ಷಿ ಎಂಬಂತೆ ಗಣರಾಜ್ಯೋತ್ಸವದಲ್ಲಿ 17 ಜಾಗ್ವಾರ್ ಹೋರಾಟಗಾರರು ಭಾಗವಹಿಸಿದರು. ರಾಜಪಥ್‍ನ ಮೇಲ್ಭಾಗದಲ್ಲಿ 75ರ ಆಕೃತಿ ರಚನೆ ಮಾಡಲಾಗಿತ್ತು. ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ನಿರಾಕರಿಸಿದ ಬುದ್ಧದೇವ್ ಭಟ್ಟಾಚಾರ್ಯ

ಪರೇಡ್ ಮಾರ್ಗದಲ್ಲಿ ಕಡಿತ:
ಈ ಬಾರಿ ಪರೇಡ್ ಮಾರ್ಗವನ್ನೂ ಕಡಿತಗೊಳಿಸಲಾಗಿತ್ತು. ಈ ಹಿಂದೆ 8.3 ಕಿಮೀ ಇದ್ದ ಮಾರ್ಗವನ್ನು 3.3 ಕಿಮೀಗೆ ಇಳಿಸಲಾಗಿತ್ತು. ಸುಮಾರು 2 ಗಂಟೆಗಳ ಕಾಲ ಪರೇಡ್‍ನಲ್ಲಿ 965 ಮತ್ತು 1971 ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಬಳಸಿದ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳು, ಹಳೆಯ ಶಸ್ತ್ರಸಜ್ಜಿತ ವಾಹನಗಳು ಮತ್ತು ಫಿರಂಗಿಗಳು, ಹಳೆಯ ಉಪಕರಣಗಳು, ಶಸ್ತ್ರಾಸ್ತ್ರಗಳು ಮತ್ತು ತಂತ್ರಜ್ಞಾನದ ಸ್ಥಾನದಲ್ಲಿ ಹೊಸ ಹೊಸ ವಿಷಯಗಳನ್ನು ಕೂಡಾ ಇಂದು ಪ್ರದರ್ಶನಕ್ಕೆ ಇಡಲಾಗಿತ್ತು. ಹೀಗೆ ಹತ್ತು ಹಲವು ವೈಶಿಷ್ಟ್ಯಗಳ ಸಂಭ್ರಮಕ್ಕೆ ರಾಜಪಥ್ ವೇದಿಕೆಯಾಯಿತು.

Republic Day parade 1

ದಕ್ಷಿಣ ಭಾರತದಿಂದ ಕರ್ನಾಟಕದ ಏಕೈಕ ಸ್ತಬ್ಧ ಚಿತ್ರ:
ಪ್ರತಿ ವರ್ಷದಂತೆ ಈ ವರ್ಷವೂ ದೆಹಲಿ ರಾಜಪಥ್‍ನಲ್ಲಿ ಸಂಚರಿಸಲು ಕರ್ನಾಟಕದ ಸ್ತಬ್ಧ ಚಿತ್ರ ಗಮನಸೆಳೆಯಿತು. ಈ ಬಾರಿ ದಕ್ಷಿಣ ಭಾರತದಿಂದ ಕರ್ನಾಟಕದ ಏಕೈಕ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿತು. ಕರ್ನಾಟಕದ ಟ್ಯಾಬ್ಲೋ ಸತತ 13ನೇ ವರ್ಷವೂ ಪ್ರದರ್ಶನಗೊಂಡಿತು. ಈ ಬಾರಿ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ಸ್ತಬ್ಧ ಚಿತ್ರ ಪ್ರದರ್ಶನಗೊಂಡಿದ್ದು, ಟ್ಯಾಬ್ಲೋ ತಯಾರಿ ಕಾರ್ಯದಲ್ಲಿ ಕಲಾವಿದ ಶಶಿಧರ್ ಅಡಪ ನೇತೃತ್ವ ವಹಿಸಿದ್ದರು. ಈ ಸ್ತಬ್ಧ ಚಿತ್ರವನ್ನು ತಯಾರು ಮಾಡಲು ಒಂದೂವರೆ ತಿಂಗಳು ಕಾಲ ನೂರಾರು ಜನರು ಒಟ್ಟಾಗಿ ಸೇರಿ ಕೆಲಸ ನಿರ್ವಹಿಸಿ ಕರ್ನಾಟಕದ ಕರಕುಶಲ ಕಲೆಯನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಇದನ್ನೂ ಓದಿ: ಗಣರಾಜ್ಯೋತ್ಸವದ ನಿಮಿತ್ತ ಗೂಗಲ್ ಡೂಡಲ್‍ನಿಂದ ವಿಶೇಷ ಗೌರವ

Karnataka tableau republic day 2022

ಸ್ತಬ್ಧ ಚಿತ್ರದಲ್ಲಿ ಏನಿತ್ತು?
ಕರ್ನಾಟಕದ ಸ್ತಬ್ದಚಿತ್ರದ ಮುಂಭಾಗದಲ್ಲಿ ಮೈಸೂರಿನ ಬೀಟೆ ಮರ ಹಾಗೂ ದಂತದ ಕಸೂತಿ ಕೆತ್ತನೆಯ ಬೃಹದಾಕಾರದ ಆನೆಯ ಕಲಾಕೃತಿ ಇದ್ದು, ಈ ಕಲಾಕೃತಿಯ ಕೆಳಗಿನ ಭಾಗದಲ್ಲಿ ಯಕ್ಷಗಾನ ಬೊಂಬೆಯಾಟದ ಚಿತ್ರಣವಿದೆ ಜೊತೆಗೆ ಗಂಜೀಫಾ ಕಲಾಕೃತಿ ಇತ್ತು. ಸ್ತಬ್ದಚಿತ್ರದ ಮಧ್ಯದಲ್ಲಿ ಕಣ್ಮನ ಸೆಳೆಯುವ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ. ಹೂಜಿಯ ಇಕ್ಕೆಲೆಗಳಲ್ಲಿ ಕರಾವಳಿಯ ವೈಶಿಷ್ಠ್ಯವನ್ನು ಬಿಂಬಿಸುವ ಭೂತಾರಾಧನೆಯ ಮುಖವಾಡವನ್ನು ಹೊತ್ತ ಲೋಹದ ಕಲಾಕೃತಿಗಳು, ಹೂಜಿಯ ಹಿಂಬದಿಯಲ್ಲಿ ಬಿದರಿ ಕಲೆ ಬಳಸಿ ಸಿದ್ದಪಡಿಸಿರುವ ನವಿಲುಗಳಿದ್ದವು. ಅಲ್ಲದೆ, ಮಧ್ಯ ಭಾಗದ ಹಿಂಬಂದಿಯಲ್ಲಿ ಕಿನ್ನಾಳದ ವೈಶಿಷ್ಠಪೂರ್ಣ ಕಲೆಯಲ್ಲಿ ಮೇಳೈಸಿದ ಬೃಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿ ಸ್ತಬ್ದಚಿತ್ರದ ಕೇಂದ್ರ ಬಿಂದುವಿನಂತೆ ಕಂಗೊಳಿಸಿತು.

Karnataka tableau republic day 2022 1

ಆಂಜನೇಯ ಸ್ವಾಮಿಯ ಮೂರ್ತಿಯ ಅಕ್ಕ-ಪಕ್ಕದಲ್ಲಿ ಚೆನ್ನಪಟ್ಟಣದ ಬೊಂಬೆಗಳು, ಮೆರುಗೆಣ್ಣೆಯ ಆಟಿಕೆಗಳು, ನವಲಗುಂದ ಧರಿ (ಜಮಖಾನೆ), ಶ್ರೀಗಂಧ ಮರದ ಕೆತ್ತನೆಯ ಹಾಗೂ ಮಣ್ಣಿನ ಕಲಾಕೃತಿಗಳು ಇತ್ತು. ಸ್ತಬ್ದಚಿತ್ರದ ಕೊನೆಯಲ್ಲಿ ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಉತ್ತೇಜನ ನೀಡಿ ಪ್ರೋತ್ಸಾಹಿಸಿದ ಕಲಾಲೋಕದ ಮಹಾಮಾತೆ, ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕನ್ನಡತಿ ಕಮಲಾದೇವಿ ಚಟ್ಟೋಪಾದ್ಯಾಯ ಅವರು ಗಂಧದ ಪೆಟ್ಟಿಗೆ, ನವಿಲಿನಾಕಾರದ ದೀಪದ ಕಲಶಗಳು, ಸಂಡೂರಿನ ಬಾಳೆ ನಾರಿನ ಚೀಲಗಳು ಹೀಗೆ ವಿವಿಧ ಕರಕುಶಲ ವಸ್ತುಗಳನ್ನು ಬಾಗಿನ ರೂಪದಲ್ಲಿ ನೀಡುತ್ತಿರುವ ದೃಶ್ಯಾವಳಿಯ ದೊಡ್ಡ ಪ್ರತಿಮೆ. ಹಿಂಭಾಗದ ಎಡ – ಬಲ ಭಾಗದಲ್ಲಿ ಕೈಮಗ್ಗದ ಹಿರಿಮೆಯ ಇಳಕಲ್ ಕಸೂತಿ ಸೀರೆಗಳು, ಮೊಳಕಾಲ್ಮೋರು ಸೀರೆಗಳು ಹಾಗೂ ಮೈಸೂರು ರೇಷ್ಮೆ ಸೀರೆ. ಹಿಂಭಾಗದಲ್ಲಿ ಕಿನ್ನಾಳ ಕಲೆಯಲ್ಲಿ ತಯಾರಿಸಿದ ಬಾಲೆಯರ ಕಲಾಕೃತಿಗಳು, ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಬೆತ್ತ, ಬಿದಿರು, ಕಾಡುಬಳ್ಳಿಗಳು ಹಾಗೂ ತಾಟಿನಿಂಗು ಮರದ ಎಲೆಯಿಂದ ತಯಾರಿಸಿದ ಬಗೆ ಬಗೆಯ ಬುಟ್ಟಿಗಳೂ ಕೂಡಾ ಸ್ತಬ್ದಚಿತ್ರಕ್ಕೆ ವಿಶೇಷ ಮೆರುಗನ್ನು ನೀಡಿತ್ತು. ಇದನ್ನೂ ಓದಿ: ಕೊರೊನಾ ನಿಯಂತ್ರಣದಲ್ಲಿ ಸರ್ಕಾರದಿಂದ ಅತ್ಯುತ್ತಮ ಸಾಧನೆ: ಗೆಹ್ಲೋಟ್

ಜಾನಪದ ತಜ್ಞ ಡಾ.ರಾಧಾಕೃಷ್ಣ ಉರಾಳ ನೇತೃತ್ವದ ಕಲಾ ಕದಂಬ ಕಲಾ ಕೇಂದ್ರದ ತಂಡ ಯಕ್ಷಗಾನ ಪಾತ್ರಗಳಲ್ಲಿ ಹೆಜ್ಜೆ ಹಾಕಿ ರಾಜ್‍ಪಥ್‍ನಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಅನಾವರಣಗೊಳಿಸಿದರು.

ಬೀಟಿಂಗ್ ದಿ ರಿಟ್ರೇಟ್:
ಈ ಬಾರಿ ವಿಶೇಷವೆಂದರೆ ಗಣರಾಜ್ಯೋತ್ಸವ ಅಂಗವಾಗಿ ಜ.29 ರಂದು ನಡೆಯುವ ‘ಬೀಟಿಂಗ್ ದಿ ರಿಟ್ರೀಟ್’ ಸಮಾರಂಭವನ್ನು ವೀಕ್ಷಿಸಲು ಆಟೋ-ರಿಕ್ಷಾ ಚಾಲಕರು, ಕಾರ್ಮಿಕರು, ನೈರ್ಮಲ್ಯ ಕಾರ್ಯಕರ್ತರು ಮತ್ತು ಫ್ರಂಟ್ ಲೈನ್ ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ಆಹ್ವಾನ ನೀಡಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *