ಬೆಂಗಳೂರು: ಕೊರೊನಾ 3ನೇ ಅಲೆ ನಡುವೆ ಇಂದು 73ನೇ ಗಣರಾಜ್ಯೋತ್ಸವ ಆಚರಣೆಯನ್ನು ಮಾಣಿಕ್ ಷಾ ಪೇರೇಡ್ ಗ್ರೌಂಡ್ ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಘನವೆತ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ರಾಜ್ಯಪಾಲರು ರಾಜ್ಯ ಸರ್ಕಾರ ಸಾಧನೆಗಳನ್ನು ಭಾಷಣದ ಮೂಲಕ ವಿವರಿಸಿದರು. ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ಅತ್ಯುತ್ತಮ ಸಾಧನೆ ಮಾಡಿದೆ ಎಂದು ಹೊಗಳಿದರು. ಜನರು ಕೊರೊನಾ ನಿಯಂತ್ರಣಕ್ಕೆ ಮಾಸ್ಕ್, ಸಾಮಾಜಿಕ ಅಂತರ, ಸ್ಯಾನಿಟೈಸರ್ ಸೂತ್ರ ಅನುಸರಿಸುವಂತೆ ಕರೆ ನೀಡಿದರು. ತಮ್ಮ ಭಾಷಣದುದ್ದಕ್ಕೂ ಸರ್ಕಾರದ ಕಾರ್ಯಕ್ರಮಗಳ ವಿವರವನ್ನು ಜನತೆಯ ಮುಂದಿಟ್ಟರು. ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು, ಗಣ್ಯರು ಉಪಸ್ಥಿತರಿದ್ದರು.
ಭಾರತವು ಎರಡು ಲಸಿಕೆಗಳನ್ನು ಉತ್ಪಾದಿಸಿರುವುದಲ್ಲದೇ ಈ ಲಸಿಕೆಗಳನ್ನು ಇತರ ದೇಶಗಳಿಗೂ ಸಹ ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹ. ಲಸಿಕೆಯು ಹಂತ ಹಂತವಾಗಿ ಪ್ರತಿಯೊಬ್ಬರಿಗೂ ತಲುಪುವಂತೆ ನೋಡಿಕೊಂಡಿದ್ದೇವೆ. ಕೇಂದ್ರದ ಸಹಕಾರದಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರವು, ಸಾಂಕ್ರಾಮಿಕ ರೋಗದ ಈ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮಿಸಿದ ನಮ್ಮ ವೈದ್ಯರುಗಳಿಗೆ, ನರ್ಸ್‍ಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಎಲ್ಲಾ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಕೋವಿಡ್ ಸಮರ ಕೋಣೆಯ ಮೂಲಕ ಇದನ್ನು ಸಾಧಿಸುವ ದಿಸೆಯಲ್ಲಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಭಾರತ ಸರ್ಕಾರವು ತಂತ್ರಜ್ಞಾನದಲ್ಲಿನ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ. ಕೋವಿಡ್ ಸಮರ ಕೋಣೆಯ ನಿರ್ವಹಣೆ, ಸೋಂಕಿತರ ಗುರುತಿಸುವಿಕೆ ಮತ್ತು ಕ್ವಾರಂಟೈನ್ ನಿಗಾವಣೆ ಮೊದಲಾದಂತಹ ವಿವಿಧ ಕ್ಷೇತ್ರಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ಇದರಿಂದಾಗಿ ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ ಎಂದರು. ಇದನ್ನೂ ಓದಿ: ಜೈ ಹಿಂದ್ – ಗಣರಾಜ್ಯೋತ್ಸವಕ್ಕೆ ಶುಭಕೋರಿದ ಪ್ರಧಾನಿ ಮೋದಿ
ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ವಿಪತ್ತಿನ ಸವಾಲನ್ನು ಸಮರ್ಥವಾಗಿ ಎದುರಿಸಿ, ನಿಯಂತ್ರಿಸಲು ಶ್ರಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿ, ವಿಕೋಪ ನಿರ್ವಹಣಾ ತಂಡಗಳು ಮತ್ತು ಜಿಲ್ಲಾ ಮುಖ್ಯ ಅಧಿಕಾರಿಗಳಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ. ಸ್ವಾತಂತ್ರ್ಯದ ಅಮೃತ ಮಹೋತ್ಸವವು, 75 ವರ್ಷಗಳ ಪ್ರಗತಿಪರ ಭಾರತ ಮತ್ತು ದೇಶದ ಜನರ, ಸಂಸ್ಕೃತಿ ಮತ್ತು ಸಾಧನೆಗಳ ವೈಭವಯುತ ಇತಿಹಾಸವನ್ನು ಆಚರಿಸಲು ಮತ್ತು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಧಿಕೃತ ಪ್ರಯಾಣವು 2021ರ ಮಾರ್ಚ್ 12 ರಂದು ಆರಂಭವಾಗಿದ್ದು, 75ನೇ ವಾರ್ಷಿಕೋತ್ಸವದ 75 ವಾರಗಳ ಕೌಂಟ್‍ಡೌನ್ ಪ್ರಾರಂಭವಾಗಿದೆ ಮತ್ತು 2023ರ ಆಗಸ್ಟ್ 15ರಂದು ಅದು ಕೊನೆಗೊಳ್ಳುತ್ತದೆ. ದೇಶದ ಪ್ರಗತಿಪರ ರಾಜ್ಯಗಳಲ್ಲಿ ಒಂದಾಗಿರುವ ಕರ್ನಾಟಕವು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಅನೇಕ ಮಹತ್ವಪೂರ್ಣ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸುತ್ತಿದೆ. ಅಮೃತ ಗ್ರಾಮಪಂಚಾಯತಿಗಳ ಅಮೃತ ರೈತ, ಅಮೃತ ಗ್ರಾಮೀಣ ವಸತಿ ಯೋಜನೆ, ಅಮೃತ ನಿರ್ಮಲ, ಅಮೃತ ಶಾಲಾ ಮೂಲಸೌಕರ್ಯ ಕಾರ್ಯಕ್ರಮ, ಅಮೃತ ಅಂಗನವಾಡಿ ಕೇಂದ್ರಗಳು, ಅಮೃತ ನಗರೋತ್ಥಾನ ಇತ್ಯಾದಿ ಗಳನ್ನು ಒಳಗೊಂಡಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮ ರಾಜ್ಯವು ಘೋಷಿಸಿದೆ ಎಂದು ತಿಳಿಸಿದರು.
ಕೊರೊನಾ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಬಾರಿಯೂ ಕೈ ಬಿಡಲಾಗಿತ್ತು. ಕೇವಲ ರಾಷ್ಟ್ರಗೀತೆ, ನಾಡಗೀತೆ, ರೈತಗೀತೆ ಮಾತ್ರ ಈ ಬಾರಿ ಪ್ರಸ್ತುತ ಪಡಿಸಲಾಯಿತು. 200 ಜನರಿಗೆ ಮಾತ್ರ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಧ್ವಜಾರೋಹಣ ಬಳಿಕ ರಾಜ್ಯಪಾಲರು ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕಾರ ಮಾಡಿದರು. ಡಾಗ್ ಸ್ವ್ಯಾಡ್, ಕೆಎಸ್‌ಆರ್‌ಪಿ, ಬಿಎಸ್‍ಎಫ್, ಅಗ್ನಿ ಶಾಮಕ, ಮಹಿಳಾ ಪೊಲೀಸ್ ಸೇರಿದಂತೆ 21 ತುಕಡಿಗಳು ರಾಜ್ಯಪಾಲರಿಗೆ ಗೌರವ ವಂದನೆ ಸಲ್ಲಿಸಿದರು. ವಿಶೇಷವಾಗಿ ಈ ಬಾರಿ ಆಂಧ್ರ ಪ್ರದೇಶ ಪೊಲೀಸರು ಗೌರವ ವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನನಗೆ ಅಸಮಾಧಾನ ಇಲ್ಲ, ಬೇಕಾದರೆ ಮಂಪರು ಪರೀಕ್ಷೆ ಮಾಡಿಸಿ: ಆನಂದ್ ಸಿಂಗ್