ಯಾದಗಿರಿ: ಸಹಕಾರ ಬ್ಯಾಂಕ್‌ನಲ್ಲಿ 6.62 ಕೋಟಿ ರೂ. ಗೋಲ್ಮಾಲ್ ಆರೋಪ ಎದುರಿಸುತ್ತಿದ್ದ ಅಧ್ಯಕ್ಷ 3 ಪುಟಗಳ ಡೆತ್‌ನೋಟ್ ಬರೆದು, ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಾದಗಿರಿ (Yadagiri) ಜಿಲ್ಲೆಯ ಶಹಪುರ (Shahapur) ನಿವಾಸದಲ್ಲಿ ನಡೆದಿದೆ.
ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಬಸನಗೌಡ ಪಾಟೀಲ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆಗೂ ಮುನ್ನ ಮೂರು ಪುಟಗಳ ಡೆತ್‌ನೋಟ್ ಬರೆದಿಟ್ಟು, ಜೊತೆಗೆ ವಿಡಿಯೋ ಮಾಡಿಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ:ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸ್ಫೋಟ – ಹೊತ್ತಿ ಉರಿದ ಆಪರೇಷನ್ ಥಿಯೇಟರ್
ಕಳೆದ ಏಪ್ರಿಲ್ 13ರಂದು ಮೃತ ಬಸನಗೌಡ ಅವರು ಶಹಾಪುರ ಠಾಣೆಯಲ್ಲಿ ತಮ್ಮ ಬ್ಯಾಂಕ್‌ನ ಸಿಇಓ ರವಿಕೀರಣರೆಡ್ಡಿ, ಸಹಾಯಕ ವ್ಯವಸ್ಥಾಪಕ ವೆಂಕಟರೆಡ್ಡಿ ಹೊಸಮನಿ, ಪಿಗ್ಮಿ ಸಂಗ್ರಹಕಾರ ಸಂಗಣ್ಣ ಅವರ ವಿರುದ್ಧ ದೂರು ನೀಡಿದ್ದರು. ನನ್ನ ಸಹಿ ಫೋರ್ಜರಿ ಮಾಡಿ 6.62 ಕೋಟಿ ರೂ. ಸಾಲದ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅದಾದ ಬಳಿಕ ನಮ್ಮ ಹಣ ನಮ್ಗೆ ನೀಡಿ ಅಂತ ಠೇವಣಿದಾರರು ಬ್ಯಾಂಕ್ ಮುಂದೆ ಧರಣಿ ನಡೆಸಿದ್ದರು. ಧರಣಿ ಆರಂಭವಾಗುತ್ತಿದ್ದ ಹಾಗೆ ಬಸನಗೌಡ ಊರು ಬಿಟ್ಟು ಹೋಗಿದ್ದರು. ನಿನ್ನೆ ರಾತ್ರಿಯಷ್ಟೇ ಮನೆಗೆ ವಾಪಸ್ ಆಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೂ ಮುನ್ನ ಮಾಡಿದ್ದ ವಿಡಿಯೋದಲ್ಲಿ ಏನಿದೆ?
ಬ್ಯಾಂಕ್ ಅವ್ಯವಹಾರ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದ ಬಸನಗೌಡ, ಬ್ಯಾಂಕ್‌ನ ಅವ್ಯವಹಾರ ಬೆಳಕಿಗೆ ಬಂದ ಬಳಿಕ ನನ್ನ ಸಹಿ ಫೋರ್ಜರಿ ಮಾಡಿದ ಬಗ್ಗೆ ತಿಳಿದು ಕೇಸ್ ಮಾಡಿದ್ದೇನೆ. ಏಪ್ರಿಲ್ 13ರಂದೇ ಅಕ್ರಮವಾಗಿ ಹಣ ವರ್ಗಾವಣೆ ಆಗಿದ್ದಕ್ಕೆ ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಮಾಡಿದ್ದೇನೆ. ನಾವೆಲ್ಲ ಸೇರಿ ಇದೇ ಮೇ 15ರ ಒಳಗೆ ಠೇವಣಿದಾರರಿಗೆ ಹಣ ವಾಪಸ್ ಕೊಡುವುದಾಗಿ ಒಪ್ಪಿಕೊಂಡಿದ್ವಿ. ಆದ್ರೆ ಹಣ ದುರುಪಯೋಗಪಡಿಸಿಕೊಂಡವರು ಹಣ ವಾಪಸ್ ಕೊಡೋದು ವಿಳಂಬ ಮಾಡಿದ್ದಾರೆ. ಬಳಿಕ ಹಿರಿಯರ ಸಮ್ಮುಖದಲ್ಲಿ ಸಾಲ ಪಡೆದವರು, ಹಣ ದುರುಪಯೋಗ ಪಡಿಸಿಕೊಂಡವರು ವಾಪಸ್ ಕೊಡಬೇಕು ಅಂತ ಒಪ್ಪಿಕೊಂಡಿದ್ವಿ. ಹಣ ಬಂದ ಮೇಲೆ ಇದೇ ಜೂನ್ 10ಕ್ಕೆ ಎಲ್ಲಾ ಠೇವಣಿದಾರರಿಗೆ ಹಣ ಕೊಡಬೇಕು ಅಂತ ಹೇಳಿದ್ರು.
ನಾನು ಎಲ್ಲಾ ಲೋನ್ ಹಣವನ್ನ ಹಿರಿಯರಿಗೆ ಒಪ್ಪಿಸಿದ್ದೇನೆ, ಉಳಿದವರು ಯಾರು ಕೂಡ ಇಲ್ಲಿವರೆಗೆ ಹಣ ಜಮೆ ಮಾಡಿಲ್ಲ. ಇದರಿಂದ ನನಗೆ ಬಹಳ ನೋವಾಗಿದೆ. ಠೇವಣಿದಾರರಿಗೆ ಹಣ ವಾಪಸ್ ಕೊಡಲು ಆಗ್ತಾಯಿಲ್ಲ ಎನ್ನುವ ನೋವು ಕಾಡ್ತಾಯಿದೆ. ಈಗಲೂ ನಾವು ಎಸ್‌ಬಿ ಅಕೌಂಟ್‌ದಾರರಿಗೆ ಹಾಗೂ ಪಿಗ್ಮಿದಾರರಿಗೆ ಹಣ ಮರಳಿಸುವ ಪ್ರಯತ್ನ ಮಾಡ್ತಾಯಿದ್ದೇವೆ. ಆದ್ರೆ ಬ್ಯಾಂಕ್‌ನ ಸದ್ಯದ ಸ್ಥಿತಿ ನೋಡಿ, ಸಾಲ ಪಡೆದವರು ವಾಪಸ್ ಕೊಡ್ತಾಯಿಲ್ಲ. ಇದೇ ಕಾರಣಕ್ಕೆ ನಾವು ಮಾತು ಕೊಟ್ಟ ಹಾಗೆ ನಡೆದುಕೊಳ್ಳಲು ಆಗ್ತಾಯಿಲ್ಲ. ಠೇವಣಿದಾರರಿಗೆ ಹಣ ವಾಪಸ್ ಕೊಡಲು ಆಗದ್ದಕ್ಕೆ ನೋವು, ಮುಜುಗರ, ಅವಮಾನದಿಂದ ನಿಮ್ಮ ಮುಂದೆ ಬರಲು ಆಗ್ತಾಯಿಲ್ಲ. ಹೀಗಾಗಿ ಕ್ಷಮೆ ಕೇಳ್ತಾಯಿದ್ದೇನೆ. ಅಧ್ಯಕ್ಷನಾಗಿ ಸಿಬ್ಬಂದಿಯನ್ನು ಅತಿಯಾದ ನಂಬಿದ್ದಕ್ಕೆ ಈ ಸ್ಥಿತಿ ಬಂದಿದೆ. ನಮ್ಮ ಕುಟುಂಬಸ್ಥರು ಇದರಿಂದ ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಕೆಲವು ಠೇವಣಿದಾರರು ಮನೆಗೆ ಬಂದು ಕುಟುಂಬಸ್ಥರಿಗೆ ಕಿರುಕುಳ ನೀಡ್ತಾಯಿದ್ದಾರೆ. ಬ್ಯಾಂಕ್ ವಿಷಯವಾಗಿದ್ದಕ್ಕೆ ಮನೆಗೆ ಬರೋದು ಸರಿಯಲ್ಲ. ಠೇವಣಿ ಇಟ್ಟ ಬಡವರಿಗೆ ತೊಂದರೆ ಆಗಿದ್ದಕ್ಕೆ ಕ್ಷಮೆ ಕೇಳುತ್ತೇನೆ. ನಮ್ಮ ಕುಲದೇವತೆ ಎಲ್ಲರಿಗೂ ಹಣ ವಾಪಸ್ ಬರುವ ಹಾಗೆ ಆಶೀರ್ವಾದ ಮಾಡಲಿ ಎಂದು ಬೇಡಿಕೊಂಡಿದ್ದಾರೆ.ಇದನ್ನೂ ಓದಿ: ರಾಮಮಂದಿರ ದೇಣಿಗೆ ಕಳ್ಳತನ ಕೇಸಲ್ಲಿ ಮುಸ್ಲಿಂ ಇದ್ದಿದ್ರೆ ಇಷ್ಟೊತ್ತಿಗೆ ಎನ್‌ಕೌಂಟರ್ ಮಾಡ್ತಿದ್ರು: ಓವೈಸಿ ವಾಗ್ದಾಳಿ
ಈ ಕುರಿತು ಯಾದಗಿರಿಯಲ್ಲಿ ಎಸ್ಪಿ ಪೃಥ್ವಿಕ್ ಶಂಕರ್ ಮಾಹಿತಿ ನೀಡಿದ್ದಾರೆ. ಹೇಮರೆಡ್ಡಿ ಮಲ್ಲಮ್ಮ ಸಹಕಾರಿ ಬ್ಯಾಂಕ್‌ನಲ್ಲಿ ಅಂದಾಜು 7 ಕೋಟಿ ರೂ. ಹಣ ದುರ್ಬಳಕೆ ಆದ ಬಗ್ಗೆ ಏಪ್ರಿಲ್ 13ರಂದು ಶಹಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಬಗ್ಗೆ ಪ್ರಧಾನ ಕಚೇರಿ ಆದೇಶ ಮೇರೆಗೆ ಸಿಐಡಿ ತನಿಖೆ ವಹಿಸಬೇಕೆಂದು ನಾವು ಅಡಿಟ್ ರಿಪೋರ್ಟ್ ತೆಗೆದುಕೊಂಡಿದ್ದೇವೆ. ಅಡಿಟ್ ವರದಿ ನಂತರ ಸಿಐಡಿ ತನಿಖೆಗೆ ಕಳುಹಿಸಲಾಗಿತ್ತು. ಈ ಬಗ್ಗೆ ಸರ್ಕಾರ ಸಿಐಡಿ ತನಿಖೆಗೆ ವರ್ಗಾವಣೆ ಮಾಡಿದೆ ಎಂದಿದ್ದಾರೆ.
ಬಸನಗೌಡ ಅವರು ಬ್ಯಾಂಕ್ ಅಧ್ಯಕ್ಷರಾಗಿದ್ದರು. ಇಂದು ಬೆಳಿಗ್ಗೆ ಮನೆ ಹಿಂಭಾಗದಲ್ಲಿ ಕಬ್ಬಿಣದ ಮೆಟ್ಟಿಲಿಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಠೇವಣಿದಾರರಿಗೆ ಹಣ ಮರಳಿಸುವ ಬಗ್ಗೆ ಒಪ್ಪಂದ ಆಗಿತ್ತು, ಜೂನ್ 10ರ ಒಳಗೆ ಹಣ ಕೊಡಲು ಆಗದಿದ್ದಕ್ಕೆ ಅವರು ಜೂ.9ರಂದೇ ಊರು ಬಿಟ್ಟು ಹೋಗಿದ್ದರು. ಬಸನಗೌಡ ಅವರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೂರು ಪುಟ ಡೆತ್‌ನೋಟ್ ಬರೆದಿದ್ದಾರೆ. “ನನ್ನ ಸಾವಿಗೆ ನಾನೇ ಕಾರಣ, ಯಾರು ಕಾರಣ ಅಲ್ಲ” ಎಂದು ಕೆಲ ಅಂಶ ಬರೆದಿದ್ದಾರೆ. ಈ ಬಗ್ಗೆ ಕೈ ಬರಹ ಹೋಲಿಕೆ ಮಾಡಲಾಗುತ್ತದೆ. ಠೇವಣಿದಾರರಿಗೆ ಹಣ ಹಿಂದುರುಗಿಸಲು ಪ್ರಯತ್ನ ಮಾಡಿದರೂ ಸಹಕಾರ ಸಿಕ್ಕಿಲ್ಲವೆಂದು ಬರೆದಿದ್ದಾರೆ. ಸಾವಿನಲ್ಲಿ ಸಂಶಯವಿರುವ ಬಗ್ಗೆ ಕೇಸ್ ದಾಖಲಾಗಿದೆ. ಈ ಕೇಸ್ ಸಿಐಡಿಗೆ ವರ್ಗಾವಣೆ ಆಗಿದೆ. ತನಿಖಾಧಿಕಾರಿ ನೇಮಕ ನಂತರ ಕೇಸ್ ಫೈಲ್ ಹಸ್ತಾಂತರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಮಾದಕ ಗೀತೆಗೆ ಮೈಚಳಿ ಬಿಟ್ಟು ಕುಣಿದ ಸೋನು ಶ್ರೀನಿವಾಸ್ ಗೌಡ
