ಭೋಪಾಲ್: ಸಾಮಾಜಿಕ ಜಾಲತಾಣದಲ್ಲಿ (Social Media) ರೀಲ್ಸ್ ಹವಾ ಜಾಸ್ತಿಯಾಗಿದೆ. ಅದರಲ್ಲೂ ಕೆಲ ಯುವತಿಯರು ಹಾಟ್ ಉಡುಗೆಗಳನ್ನ ತೊಟ್ಟು ಪಡ್ಡೆ ಹುಡುಗರ ನಿದ್ದೆಗೆಡಿಸುವಂತೆ ಡ್ಯಾನ್ಸ್ (Dance) ಮಾಡಿ ರೀಲ್ಸ್ ಕ್ರಿಯೇಟ್ ಮಾಡುವುದು ಟ್ರೆಂಡ್ ಆಗಿಬಿಟ್ಟಿದೆ. ಹೆಚ್ಚಿನ ವೀವ್ಸ್‌ಗಾಗಿ ಕಂಡ ಕಂಡ ಸ್ಥಳಗಳಲ್ಲಿ ವೀಡಿಯೋ ಮಾಡೋದಕ್ಕೆ ಶುರು ಮಾಡಿದ್ದಾರೆ. ಇದೇ ರೀತಿ ರೀಲ್ಸ್‌ನಿಂದ ವೈರಲ್ ಆಗೋಕೆ ಇಲ್ಲೊಬ್ಬಳು ಯುವತಿ ಮಾಡಿದ ಯಡವಟ್ಟಿನಿಂದ ಬಾಯ್‌ಫ್ರೆಂಡ್‌ಗೆ ಪೊಲೀಸರು ದಂಡದ ಬಿಸಿ ಮುಟ್ಟಿಸಿದ್ದಾರೆ.
ಹೌದು. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಯುವಕನೊಬ್ಬ ರೀಲ್ಸ್‌ಗಾಗಿ ಯಡವಟ್ಟು ಮಾಡಿಕೊಂಡಿದ್ದು, ತಾನೇ ದಂಡ ಕಟ್ಟಿದ್ದಾನೆ. ಗ್ವಾಲಿಯರ್ ನಿವಾಸಿ ಆದಿತ್ಯ ಸಿಕರ್ವಾರ್ ತನ್ನ ಬಿಳಿ ಬಣ್ಣದ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನ ಬರೋಬ್ಬರಿ 3,400 ಕಿಸ್‌ಗಳಿಂದ ಅಲಂಕಾರ ಮಾಡಿಸಿದ್ದಾನೆ. ಅದೇ ಕಾರಿನಲ್ಲಿ ರೀಲ್ಸ್ ಮಾಡಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಕೇವಲ 24 ಗಂಟೆಗಳಲ್ಲಿ 55 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. ಇದೇ ವೈರಲ್ ರೀಲ್ಸ್ ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿದ್ದಿ, ಆದಿತ್ಯನಿಗೆ 5,500 ರೂ. ದಂಡ ವಿಧಿಸಿದ್ದಾರೆ.

3,400 ಮುತ್ತುಗಳಿಂದ ಮುಚ್ಚಿದ ‘ಕಿಸ್ಸಿಂಗ್ ಕಾರ್’!
ವೈರಲ್ ರೀಲ್ಸ್‌ಗಾಗಿ ಆದಿತ್ಯ ವಿಶೇಷವಾಗಿ ಈ ʻಕಿಸ್ಸಿಂಗ್ ಕಾರ್ʼ ಐಡಿಯಾ ರೂಪಿಸಿದ್ದ. ಆದಿತ್ಯನ ಗರ್ಲ್‌ಫ್ರೆಂಡ್ ಲಿಪ್‌ಸ್ಟಿಕ್ ಬಳಸಿ ಕಾರಿನ ಬಾನೆಟ್, ಬಾಗಿಲು ಸೇರಿದಂತೆ ಸಂಪೂರ್ಣ ಕಾರಿನ ಮೇಲೆ ಸುಮಾರು 3,400 ಕಿಸ್ (ಮುತ್ತು)ನ ಗುರುತುಗಳನ್ನ ಮೂಡಿಸಿದ್ದಾಳೆ. ಈ ಸಂಪೂರ್ಣ ‘ಕಿಸ್ಸಿಂಗ್ ಆರ್ಟ್’ ಪೂರ್ಣಗೊಳಿಸಲು ಸುಮಾರು ಮೂರೂವರೆ ಗಂಟೆ ಸಮಯ ತೆಗೆದುಕೊಂಡಿದ್ದಾಳೆ. ಬಳಿಕ ಲಿಪ್‌ಸ್ಟಿಕ್ ಗುರುತುಗಳಿಂದ ತುಂಬಿದ ಕಾರನ್ನ ರಸ್ತೆಗೆ ತೆಗೆದುಕೊಂಡು ಹೋಗಿ, ಸ್ಪೀಡಾಗಿ ಚಾಲನೆ ಮಾಡುತ್ತಾ ರೀಲ್ಸ್ ಮಾಡಿದ್ದಾನೆ. ನಂತರ ‘Kissing Car’ ಎಂಬ ಹೆಸರಿನಲ್ಲಿ ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಅಪ್‌ಲೋಡ್ ಮಾಡಿದ್ದಾನೆ.
55 ಲಕ್ಷ ವೀಕ್ಷಣೆ… ಪೊಲೀಸರ ಕಣ್ಣಿಗೂ ಬಿತ್ತು!
ವಿಡಿಯೋ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಭಾರೀ ವೈರಲ್ ಆಗಿದೆ. 24 ಗಂಟೆಯೊಳಗೆ 55 ಲಕ್ಷ ವೀಕ್ಷಣೆ ಕಂಡಿದೆ. ರೀಲ್ಸ್ ವೈರಲ್ ಆಗುತ್ತಿದ್ದಂತೆ ಗ್ವಾಲಿಯರ್ ಟ್ರಾಫಿಕ್ ಪೊಲೀಸರ ಗಮನಕ್ಕೂ ಬಂದಿದೆ. ವಿಡಿಯೋದಲ್ಲಿ ಕಾರನ್ನ ಅತಿವೇಗವಾಗಿ ಚಾಲನೆ ಮಾಡುತ್ತಿರುವುದು ಕಾಣಿಸಿಕೊಂಡಿದ್ದು, ಕಾರಿನ ನೋಂದಣಿ ಸಂಖ್ಯೆ MP07 CC 9452 ಕೂಡ ಸ್ಪಷ್ಟವಾಗಿ ಕಾಣಿಸಿತ್ತು. ಇದೇ ನೋಂದಣಿ ಸಂಖ್ಯೆಯ ಆಧಾರದಲ್ಲಿ ಪೊಲೀಸರು ಕಾರನ್ನು ಪತ್ತೆಹಚ್ಚಿದ್ದಾರೆ. ಬಳಿಕ ಥಾಟಿಪುರ ಪ್ರದೇಶದಿಂದ ಕಾರನ್ನು ವಶಕ್ಕೆ ಪಡೆದು, ಆದಿತ್ಯನನ್ನು ಟ್ರಾಫಿಕ್ ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.
ಠಾಣೆಯಲ್ಲೇ 3,400 ಕಿಸ್ ಕ್ಲೀನ್‌ಅಪ್!
ಆದಿತ್ಯ ತನ್ನ ತಪ್ಪು ಒಪ್ಪಿಕೊಂಡ ಬಳಿಕ ಪೊಲೀಸ್ ಠಾಣೆಯಲ್ಲೇ ನೀರಿನಿಂದ ಕಾರಿನ ಮೇಲಿದ್ದ ಎಲ್ಲಾ 3,400 ಲಿಪ್‌ಸ್ಟಿಕ್ ಗುರುತುಗಳನ್ನ ಅವನಿಂದಲೇ ಕ್ಲೀನ್ ಮಾಡಿಸಿದ್ದಾರೆ. ರಸ್ತೆ ಸುರಕ್ಷತೆಗೆ ಧಕ್ಕೆ ತರುವ ರೀತಿಯಲ್ಲಿ ಚಾಲನೆ ಮಾಡಿದ್ದಕ್ಕಾಗಿ ಹಾಗೂ ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು 5,500 ರೂ. ದಂಡವನ್ನೂ ವಿಧಿಸಿದ್ದಾರೆ.
