– ಡಿಎಂಕೆ, ಆಪ್ ಗೈರು ಸಾಧ್ಯತೆ
ನವದೆಹಲಿ: ಬಿಜೆಪಿ (BJP) ನೇತೃತ್ವದ ಸರ್ಕಾರ ಎದುರಿಸಲು ಹಾಗೂ ವಿಪಕ್ಷಗಳ ಏಕತೆ ಬಲಪಡಿಸಿ ಜಂಟಿ ಕಾರ್ಯತಂತ್ರ ರೂಪಿಸಲು ಇಂದು (ಜೂನ್ 08) ಇಂಡಿಯಾ ಮೈತ್ರಿ ಕೂಟ ಮಹತ್ವದ ಸಭೆ (INDIA Bloc Meet) ನಡೆಸಲಿದೆ.
ಸಭೆಯಲ್ಲಿ ಒಟ್ಟು 23 ರಾಜಕೀಯ ಪಕ್ಷದ (Political Parties) ಪ್ರತಿನಿಧಿಗಳು ಭಾಗಿಯಾಗಲಿದ್ದು, ತಮಿಳುನಾಡಿನ ಚುನಾವಣೆಯ ಬಳಿಕ ಕಾಂಗ್ರೆಸ್ ಜೊತೆ ಮೈತ್ರಿ ಮುರಿದುಕೊಂಡಿರುವ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಆಪ್ ಸಭೆಯಿಂದ ಹೊರಗುಳಿಯುವ ಸಾಧ್ಯತೆಯಿದೆ.
ಸಭೆಯಲ್ಲಿ ಒಟ್ಟು 23 ಪಕ್ಷಗಳು ಭಾಗವಹಿಸುವುದು ಖಚಿತವಾತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ತಿಳಿಸಿದ್ದಾರೆ.

ಸಭೆಯಲ್ಲಿ ಯಾವ್ಯಾವ ಪಕ್ಷದ ಪ್ರತಿನಿಧಿಗಳು ಭಾಗಿ?
ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಶಿವಸೇನೆ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ರಾಷ್ಟ್ರೀಯ ಜನತಾದಳದ ನಾಯಕ (ಆರ್‌ಜೆಡಿ) ತೇಜಸ್ವಿ ಯಾದವ್ ಭಾಗವಹಿಸುವ ಸಾಧ್ಯತೆಯಿದೆ. ಇನ್ನುಳಿದಂತೆ ಎಡಪಕ್ಷಗಳ ಹಾಗೂ ಹಲವು ಪ್ರಾದೇಶಿಕ ಪಕ್ಷಗಳು ಭಾಗಿಯಾಗಲಿವೆ ಎಂದು ಮೂಲಗಳು ತಿಳಿಸಿವೆ.
ಇನ್ನೂ ಕಾಂಗ್ರೆಸ್-ಬಿಜೆಪಿ ಒಳಮೈತ್ರಿ ಬಗ್ಗೆ ಸಂದೇಹವಿದ್ದರೂ ಸಿಪಿಎಂ ಸಭೆಯಲ್ಲಿ ಭಾಗವಹಿಸುವುದು ಖಾಯಂ ಆಗಿದೆ. ಆದರೆ ತಮಿಳುನಾಡು ಚುನಾವಣೆಯಲ್ಲಿ ಕಾಂಗ್ರೆಸ್ ಡಿಎಂಕೆ ಮೈತ್ರಿ ತೊರೆದು ತಮಿಳುನಾಡು ಸಿಎಂ ವಿಜಯ್ ನೇತೃತ್ವದ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿರುವುದು ಡಿಎಂಕೆಯ ಅಸಮಾಧಾನಕ್ಕೆ ಕಾರಣವಾಗಿದೆ. ಈ ಹಿನ್ನೆಲೆ ಡಿಎಂಕೆ ಎಎಪಿ ಸಭೆಯಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗಿದೆ.

ಎಐಸಿಸಿ ಅಧ್ಯಕ್ಷನಾಗುವುದನ್ನ ತಡೆಯಲು ಸಂಚು ನಡೆದಿತ್ತು
ಈ ಹಿಂದೆ 2022ರಲ್ಲಿ ನನಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗುವ ಅವಕಾಶ ಒದಗಿಬಂದಿತ್ತು. ಆದರೆ ನಾನು ಸಿಎಂ ಆಗಿದ್ದರಿಂದ ಎಐಸಿಸಿ ಅಧ್ಯಕ್ಷರ ಗಾದಿ ಹಿಡಿಯಲು ಸಾಧ್ಯವಾಗಲಿಲ್ಲ. ಇದಕ್ಕೆ ಹುನ್ನಾರ ನಡೆದಿತ್ತು. ನನಗೆ ಎಐಸಿಸಿ ಅಧ್ಯಕ್ಷರ ಹುದ್ದೆಗಿಂತ ರಾಜಸ್ಥಾನದ ಸಿಎಂ ಹುದ್ದೆಯೇ ಮುಖ್ಯ ಎಂದು ಬಿಂಬಿಸಲಾಯಿತು ಎಂದು ರಾಜಸ್ಥಾನದ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ, ನೆಹರು ಅವರಂತಹ ನಾಯಕರು ಎಐಸಿಸಿ ಅಧ್ಯಕ್ಷರು ಆಗಿದ್ದರು. ಅಂತಹ ಹುದ್ದೆಯ ಜವಾಬ್ದಾರಿ ವಹಿಸಿಕೊಳ್ಳುವುದನ್ನ ನಾನೇಕೆ ಬೇಡ ಎನ್ನಲಿ? ಆದರೆ ಗೆಹ್ಲೋಟ್ ಅವರಿಗೆ ಸಿಎಂ ಹುದ್ದೆಯೇ ಮುಖ್ಯ ಎಂದು ಬಿಂಬಿಸಲಾಯಿತು. ಅದು ವಾಸ್ತವಕ್ಕೆ ದೂರದ ಮಾತು. ಅಂದು ನಾನು ಸಿಎಂ ಹುದ್ದೆ ಬಿಡದಂತೆ ಪರಿಸ್ಥಿತಿ ಸೃಷ್ಟಿಸಲಾಯಿತು ಎಂದಿದ್ದಾರೆ.
ಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿನ್ ಪೈಲಟ್ ಅವರನ್ನು ಮುಖ್ಯಮಂತ್ರಿ ಮಾಡಲು ನಮ್ಮ ಬೆಂಬಲಿಗರು ವಿರೋಧಿಸಿದ್ದರು. ಏಕೆಂದರೆ ಅವರು ಪಕ್ಷದಲ್ಲಿ ಗುಂಪುಗಾರಿಕೆ ಮಾಡಿದ್ದರು. ಹೀಗಾಗಿ ಸಚಿನ್ ಪೈಲೆಟ್ ಬಿಟ್ಟು ಬೇರೆ ಯಾರಿಗೆ ಬೇಕಾದರೂ ಹುದ್ದೆ ನೀಡಲು ನನ್ನ ಬೆಂಬಲಿಗ ಶಾಸಕರ ಆಕ್ಷೇಪ ಇರಲಿಲ್ಲ ಎಂದು ತಿಳಿಸಿದ್ದಾರೆ.

ಇಂಡಿಯಾ ಮೈತ್ರಿ ಕೂಟ ಸತ್ತು ಸಮಾಧಿಯಾಗಿದೆ:
ಇಂಡಿಯಾ ಮೈತ್ರಿ ಕೂಟದ ಸಭೆ ಬಗ್ಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಇಂಡಿಯಾ ಮೈತ್ರಿ ಕೂಟ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದು, ವಾಸ್ತವವಾಗಿ ಸತ್ತು ಸಮಾಧಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲಾ ಲೇವಡಿ ಮಾಡಿದ್ದಾರೆ.
ಇಂಡಿಯಾ ಕೂಟದಲ್ಲಿ ಯಾವುದೇ ಮೈತ್ರಿ ಇಲ್ಲ ಎಂದು ನಾವು ಭಾವಿಸಿದ್ದೇವೆ. ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ವಿಪಕ್ಷಗಳ ಮೈತ್ರಿ ಕೂಟದಲ್ಲಿ ಬಿರುಕು ಮೂಡಿದೆ. ಈ ಮೈತ್ರಿಕೂಟವು ಅವಕಾಶವಾದದ ಮಾದರಿಯಾಗಿತ್ತು. ಯಾವುದೇ ಧ್ಯೇಯವಿರಲಿಲ್ಲ, ಕೇವಲ ಗೊಂದಲ, ವಿಭಜನೆ ಹಾಗೂ ಅಧಿಕಾರದ ದುರಾಸೆ ಮಾತ್ರ ಇತ್ತು. ರಾಷ್ಟ್ರೀಯವಾಗಿ ಏಕತೆಯನ್ನು ಬಿಂಬಿಸುತ್ತಿದ್ದರೂ, ಮೈತ್ರಿಕೂಟದಲ್ಲಿರುವ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಭಿನ್ನಾಭಿಪ್ರಾಯ ಹೊಂದಿದ್ದವು ಎಂದಿದ್ದಾರೆ.
ಕಾಂಗ್ರೆಸ್ ಮತ್ತು ಎಡಪಂಥೀಯರು ಕೇರಳದಲ್ಲಿ ರಾಜಕೀಯ ವಿರೋಧಿಗಳಾಗಿದ್ದರು. ಆದರೆ ದೆಹಲಿಯಲ್ಲಿ ಮಾತ್ರ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರು. ಪಶ್ಚಿಮ ಬಂಗಾಳದಲ್ಲಿ ಮಿತ್ರ ಪಕ್ಷಗಳೇ ಪರಸ್ಪರ ಹೋರಾಡುತ್ತಿದ್ದವು. ಆದರೆ ದೆಹಲಿಯಲ್ಲಿ ಮಾತ್ರ ಏಕತೆ ಪ್ರದರ್ಶಿಸುತ್ತಿದ್ದರು. ಹೀಗಾಗಿ ಅಂತಹ ಪಕ್ಷಗಳನ್ನು ಜನರು ನಂಬಲಿಲ್ಲ ಎಂದು ಕಿಡಿಕಾರಿದ್ದಾರೆ.
