ದಮ್ಮಾಮ್: ಕಟ್ಟಡ ಕಾಮಗಾರಿ ವೇಳೆ ಬಿದ್ದು ಗಂಭೀರ ಗಾಯಗೊಂಡು, ಆರೈಕೆ ನೀಡುವಲ್ಲಿ ಕಂಪೆನಿ ಕಡೆಗಣಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯನ್ನು ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ತವರಿಗೆ ಮರಳಿ ಕಳುಹಿಸಲು ಐ.ಎಸ್.ಎಫ್. ಯಶಸ್ವಿಯಾಗಿದೆ.
ಮಂಗಳೂರಿನ ಬಜಾಲ್ ಮೂಲದ ಬದ್ರುದ್ದೀನ್(47) ಎಂಬವರು ಸೌದಿ ಅರೇಬಿಯಾದ ದಮ್ಮಾಮ್ ಸಮೀಪದ ಸಫ್ವಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಸುಮಾರು 5 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು 10 ಅಡಿ ಎತ್ತರದಿಂದ ಬಿದ್ದು ತಲೆಯ ಮೆದುಳಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ಇಂಟರ್ನೆಟ್ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್
ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದ ಕಂಪೆನಿಯು ಅವರು ಸಂಪೂರ್ಣ ಗುಣಮುಖವಾಗುವ ಮುಂಚೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿತ್ತು. ಆಸ್ಪತ್ರೆಯ ದುಬಾರಿ ವೆಚ್ಚವನ್ನು ತಪ್ಪಿಸಲು ಕಂಪನಿ ಹಾಗೆ ಮಾಡಿತ್ತು. ರೂಮಿಗೆ ಹಿಂದಿರುಗಿದ ಬದ್ರುದ್ದೀನ್ ಅಸ್ವಸ್ಥರಾಗಿಯೇ ಇದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ತವರಿಗೆ ಮರಳುವ ಅಗತ್ಯವಿತ್ತು. ಆದರೆ ಕಂಪನಿ ತವರಿಗೆ ಕಳುಹಿಸಲು ನಿರಾಕರಿಸಿತ್ತು. ಕಂಪನಿ ಎರಡು ವರ್ಷಗಳಿಂದ ಅವರ ಇಕಾಮ ನವೀಕರಿಸಿರಲಿಲ್ಲ ಮತ್ತು ವೇತನವನ್ನೂ ನೀಡಿರಲಿಲ್ಲ.
ಅವರ ಸಹೋದ್ಯೋಗಿಗಳ ಮೂಲಕ ವಿಷಯ ಅರಿತ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಘಟಕವು, ಈ ಸಂಬಂಧ ಮಾಹಿತಿ ಪಡೆಯಲು ತನ್ನ ಸದಸ್ಯರ ತಂಡ ರಚಿಸಿತು. ಅದರಂತೆ ಸದಸ್ಯರಾದ ಮಹಮ್ಮದ್ ಆಲಿ ಮೂಳೂರು ಮತ್ತು ಇಬ್ರಾಹಿಂ ಕ್ರಷ್ನಾಪುರ, ಯಾಸೀನ್ ಗುಲ್ಬರ್ಗ ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸಿ ರೋಗಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದರು. ಕಂಪನಿಯನ್ನು ಸಂಪರ್ಕಿಸಿ ಅವರನ್ನು ತವರಿಗೆ ಮರಳಲು ಅವಕಾಶ ನೀಡುವಂತೆ ಕೋರಿದರು. ಕಂಪನಿ ಇದಕ್ಕೆ ಒಪ್ಪಿದರೂ ಎರಡು ತಿಂಗಳುಗಳ ಕಾಲ ಅವರನ್ನು ತವರಿಗೆ ಮರಳಿಸಿರಲಿಲ್ಲ. ಪಟ್ಟುಬಿಡದ ಇಂಡಿಯನ್ ಸೋಶಿಯಲ್ ಫೋರಮ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಅನುಮತಿ ಪತ್ರ ಪಡೆದು, ಜೂನ್ 5ರಂದು ಅವರನ್ನು ತವರಿಗೆ ಕಳುಹಿಸಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್
ಕೊರೊನದ ಈ ಸಂಕಷ್ಟ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಸಂಘಟನೆಯು ಮಾಡಿದ ಮಾನವೀಯ ಸೇವೆಯೂ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.