Advertisements

ಚೀನಾದಲ್ಲಿ 57 ಮಂದಿಗೆ ಸೋಂಕು – ಬೀಜಿಂಗ್‌ ದೊಡ್ಡ ಮಾಂಸ ಮಾರುಕಟ್ಟೆ ಸೀಲ್‌ಡೌನ್‌

ಬೀಜಿಂಗ್‌: ಕೋವಿಡ್‌ 19 ಉಗಮಸ್ಥಾನ ಚೀನಾದಲ್ಲಿ ಈಗ ಸೋಂಕಿನ ಎರಡನೇ ಅಲೆ ಆರಂಭವಾಗಿದೆ. ಏಪ್ರಿಲ್‌ ನಂತರ ಮೊದಲ ಬಾರಿಗೆ 24 ಗಂಟೆಯಲ್ಲಿ 57 ಪ್ರಕರಣಗಳು ವರದಿಯಾಗಿದೆ.

Advertisements

57 ಹೊಸ ಪ್ರಕರಣಗಳ ಪೈಕಿ 37 ಪ್ರಕರಣಗಳು ಚೀನಾದಲ್ಲೇ ವರದಿಯಾಗಿದ್ದು, 20 ಪ್ರಕರಣಗಳು ವಿದೇಶಗಳಿಂದ ಆಗಮಿಸಿದ್ದ ಚೀನೀಯರದ್ದು ಎಂದು ಚೀನಾ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

Advertisements

ರಾಜಧಾನಿ ಬೀಜಿಂಗ್‌ನಲ್ಲಿ 36 ಪ್ರಕರಣಗಳು ಬೆಳಕಿಗೆ ಬಂದಿದೆ. ಮೀನು ಮತ್ತು ತರಕಾರಿಗೆ ಹೆಸರಾಗಿರುವ ಬೀಜಿಂಗ್‌ನ ಜಿನ್ ಫಾದಿ ಹೋಲ್‌ ಸೇಲ್‌ ಮಾರುಕಟ್ಟೆಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ಈ ಮಾರುಕಟ್ಟೆಯಲ್ಲಿ ಅತೀ ಹೆಚ್ಚು ಹೊಸ ಸೋಂಕು ಪ್ರಕರಣಗಳನ್ನು ಕಂಡುಬಂದ ಹಿನ್ನೆಲೆಯಲ್ಲಿ ಸೀಲ್‌ಡೌನ್‌ ಮಾಡಲಾಗಿದೆ.

ಮಾರುಕಟ್ಟೆಗೆ ಭೇಟಿ ನೀಡಿದ್ದ ಇಬ್ಬರಲ್ಲಿ ಇತ್ತೀಚಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ 517 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದ್ದು, ಇದರಲ್ಲಿ 45 ಮಂದಿಗೆ ಪಾಸಿಟಿವ್‌ ಬಂದಿದೆ. ಈ 45 ಮಂದಿಯಲ್ಲಿ ಯಾರಿಗೂ ಸೋಂಕಿನ ಲಕ್ಷಣಗಳು ಕಾಣಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisements

 

276 ಎಕ್ರೆ ಪ್ರದೇಶದಲ್ಲಿ ಈ ಮಾರುಕಟ್ಟೆ ವ್ಯಾಪಿಸಿದ್ದು ಅಧಿಕಾರಿಗಳು ಈ ಮಾರುಕಟ್ಟೆಗೆ ಭೇಟಿ ನೀಡಿದ ಎಲ್ಲರೂ ಪರೀಕ್ಷೆಗೆ ಒಳಪಡಬೇಕು ಎಂದು ಸೂಚಿಸಿದ್ದಾರೆ. ಈ ಮಾರುಕಟ್ಟೆಯಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದು, ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಲು ಸರ್ಕಾರ ಮುಂದಾಗಿದೆ.

ತರಕಾರಿ ಮತ್ತು ಮಾಂಸ ಎಲ್ಲ ಒಂದೇ ಕಡೆಯಲ್ಲಿ ಸಿಗು ಕಾರಣ ಪ್ರತಿನಿತ್ಯ 50 ಸಾವಿರ ಜನ, ವಾರಾಂತ್ಯದಲ್ಲಿ 2 ಲಕ್ಷ ಜನ ಈ ಮಾರುಕಟ್ಟೆಗೆ ಭೇಟಿ ನೀಡುತ್ತಾರೆ. ಜಿನ್ ಫಾದಿ ಮಾರುಕಟ್ಟೆಯಿಂದಲೇ ಬೀಜಿಂಗ್‌ ನಗರಕ್ಕೆ ಶೇ.80 ರಷ್ಟು ತರಕಾರಿ ಮತ್ತು ಮಾಂಸ ಸರಬರಾಜು ಆಗುತ್ತಿದೆ.

ಈ ಪ್ರದೇಶ ಸಮೀಪದಲ್ಲಿದ್ದ 9 ಶಿಶು ವಿಹಾರಗಳು ಹಾಗೂ ಶಾಲೆಗಳನ್ನು ಮುಚ್ಚಲಾಗಿದ್ದು, ಲಾಕ್‌ಡೌನ್ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.

ಕಳೆದ ಡಿಸೆಂಬರ್‌ ವುಹಾನ್‌ ನಗರದಲ್ಲಿ ಕಾಣಿಸಿಕೊಂಡ ಈ ಸೋಂಕು ವಿಶ್ವಾದ್ಯಂತ ಹರಡಿದ್ದು, ಒಟ್ಟು 77.86 ಲಕ್ಷ ಮಂದಿಗೆ ಕೋವಿಡ್‌ 19 ಬಂದಿದೆ. ಇಲ್ಲಿಯವರೆಗೆ 4.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಚೀನಾದಲ್ಲಿ 84 ಸಾವಿರ ಮಂದಿಗೆ ಸೋಂಕು ಬಂದಿದ್ದು, 4,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

Advertisements
Exit mobile version