ಬೆಂಗಳೂರು: ರಾಜ್ಯದ ಕೆಲವು ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿರುವ ನನ್ನ ಕುರಿತ ಆಡಿಯೋ ನಕಲಿ, ಎಐ ತಂತ್ರಜ್ಞಾನ ಬಳಸಿ ಮಾಡಲಾಗಿದೆ ಎಂದು ಕಾಂಗ್ರೆಸ್ (Congress) ನಾಯಕ ಜಮೀರ್ ಅಹಮದ್ ಖಾನ್ (Zameer Ahmed) ತಿಳಿಸಿದ್ದಾರೆ.
ವೈರಲ್ ಆಗುತ್ತಿರುವ ಆಡಿಯೋ ಬಗ್ಗೆ ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹೇಳಿಯಲ್ಲಿ, ಇದೊಂದು ರಾಜಕೀಯ ಷಡ್ಯಂತ್ರ. ನಕಲಿ ಆಡಿಯೋ ಮಾಡಿ ವೈರಲ್ ಮಾಡಿರುವವರ ವಿರುದ್ಧ ಸೈಬರ್ ಠಾಣೆಗೆ ದೂರು ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ರಾ ಜಮೀರ್? – ಕಾಂಗ್ರೆಸ್‌ನಲ್ಲಿ ಆಡಿಯೋ ಸಂಚಲನ
ನಾನು ಆ ರೀತಿ ಮಾತನಾಡಿಲ್ಲ. ಗೊಂದಲ ಉಂಟು ಮಾಡಲು ಇದೆಲ್ಲವೂ ಸೃಷ್ಟಿ ಮಾಡಲಾಗಿದೆ. ಇದು ಕಿಡಿಗೇಡಿಗಳ ಕೃತ್ಯ, ಇದನ್ನು ಯಾರೂ ನಂಬಬಾರದು. ಆಡಿಯೋ ಬಗ್ಗೆ ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಏನಿದು ಆಡಿಯೋ ವಿವಾದ?
ಕಾಂಗ್ರೆಸ್ (Congress) ಮುಖಂಡ ಜಮೀರ್ ಅಹಮದ್ ವಿರುದ್ಧ ದಾವಣಗೆರೆ ದಕ್ಷಿಣ ಉಪ ಚುನಾವಣೆಯಲ್ಲಿ (Davanagere South byelection) ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದಕ್ಕೆ ಪೂರಕವಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಕ್ರೋಚ್ ಪಾರ್ಟಿ ಹೆಸರಿನ ಎಕ್ಸ್‌ನಲ್ಲಿ ಆಡಿಯೋ ರಿಲೀಸ್ ಆಗಿದೆ. ದಾವಣಗೆರೆಯ ಕಾಂಗ್ರೆಸ್ ಮುಖಂಡ ಸಿರಾಜ್ ಜೊತೆ ಜಮೀರ್ ಅಹಮ್ಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಆಡಿಯೋದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿಗೆ ಬೆಂಬಲಿಸಿ ಮಾತನಾಡಲಾಗಿದೆ.
ಮುಸ್ಲಿಂ ವೋಟಿಂಗ್ ಕಡಿಮೆ ಇದೆ ಹೊರಗಡೆ ಬಂದ್ರೆ ಅವರನ್ನ ನಂಬೋಕಾಗಲ್ಲ ಕಾಂಗ್ರೆಸ್‌ಗೆ ವೋಟ್ ಹಾಕುತ್ತಾರೆ. ಒತ್ತಾಯ ಮಾಡಿ ಮನೆಯಿಂದ ಕರ್ಕೊಂಡು ಬರಬೇಡಿ. ಪಕ್ಷೇತರರಿಗೆ ಎಸ್‌ಡಿಪಿಐಗೆ ವೋಟ್ ಹಾಕಲಿ ಎಂದು ಜಮೀರ್ ಅಹಮ್ಮದ್ ಹೇಳಿದ್ದಾರೆ ಎಂದು ಆಡಿಯೋದಲ್ಲಿ ಬಿಂಬಿಸಲಾಗಿದೆ. ಇದನ್ನೂ ಓದಿ: ಜಮೀರ್ ಸಚಿವ, ಡಿಸಿಎಂ ಆಗದಂತೆ ಷಡ್ಯಂತ್ರ – ವೈರಲ್ ಆಡಿಯೋ ಬಗ್ಗೆ ಮೊಹಮ್ಮದ್ ಸಿರಾಜ್ ಪ್ರತಿಕ್ರಿಯೆ
