ದಾವಣಗೆರೆ: ದಾವಣಗೆರೆ ದಕ್ಷಿಣ (Davanagere South) ಕ್ಷೇತ್ರದ ಉಪಚುನಾವಣೆ ಈಗ ಕೇವಲ ಮತದಾನದ ಕಣವಾಗಿ ಉಳಿದಿಲ್ಲ. ಅದು ಕಾಂಗ್ರೆಸ್‌ನ ಇಬ್ಬರು ಪ್ರಭಾವಿ ಸಚಿವರ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ (S.S.Mallikarjun) ಪುತ್ರ ಸಮರ್ಥ್ ಶಾಮನೂರು ಪರವಾಗಿ ಪ್ರಚಾರಕ್ಕೆ ಬಂದ ಸಚಿವ ಜಮೀರ್ ಅಹ್ಮದ್, ಕೇವಲ ಸುದ್ದಿಗೋಷ್ಠಿ ನಡೆಸಿ ಜಾಗ ಖಾಲಿ ಮಾಡಿದ್ದು, ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಬೂದಿ ಮುಚ್ಚಿದ ಕೆಂಡದಂತಿರುವ ಸಚಿವರ ಅಸಮಾಧಾನ ಕಾರ್ಯಕರ್ತರಿಗೆ ಸಂಕಷ್ಟವಾಗಿದೆ.
ಇಡೀ ರಾಜ್ಯದ ಕಣ್ಣು ನೆಟ್ಟಿರುವ ಕ್ಷೇತ್ರವಿದು. ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಂದೆಯ ವರ್ಚಸ್ಸು, ತಾತ ಶಾಮನೂರು ಶಿವಶಂಕರಪ್ಪ ಅವರ ಆಶೀರ್ವಾದದೊಂದಿಗೆ ಗೆಲುವಿನ ನಗೆ ಬೀರಲು ಸಮರ್ಥ್ ಸನ್ನದ್ಧರಾಗಿದ್ದಾರೆ. ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯ ಮಾಡಿದವರಲ್ಲಿ ಸಚಿವ ಜಮೀರ್ (Zameer Ahmed) ಕೂಡ ಒಬ್ಬರು. ಇದರಿಂದ ಸಚಿವ ಮಲ್ಲಿಕಾರ್ಜುನ್ ಏಕವಚನದಲ್ಲಿ ನಿಂದನೆ ಮಾಡಿದ್ದು, ಇದು ಅಲ್ಪಸಂಖ್ಯಾತ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ನೂರಕ್ಕೆ ನೂರರಷ್ಟು ಸಮರ್ಥ್ ಗೆಲ್ಲಿಸುವ ಕೆಲಸ ಮಾಡ್ತೀನಿ: ಜಮೀರ್ ಅಹ್ಮದ್

ಜಮೀರ್ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಮತಪ್ರಚಾರಕ್ಕೆ ಬರುತ್ತಾರೋ ಇಲ್ಲವೋ ಎನ್ನುವ ಅನುಮಾನ ಕೂಡ ವ್ಯಕ್ತವಾಗಿತ್ತು. ಆದರೆ, ಇಂದು ಜಮೀರ್ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ನಿವಾಸಕ್ಕೆ ಆಗಮಿಸಿ ಜೊತೆಗೆ ಊಟ ಮಾಡಿ, ಈ ಬಾರಿ ಸಮರ್ಥ್ ನೂರಕ್ಕೆ ನೂರರಷ್ಟು ಗೆಲುವು ಸಾಧಿಸುತ್ತಾರೆ. ನಾನು ಕೇರಳ ಚುನಾವಣೆಯ ಸ್ಟಾರ್ ಕ್ಯಾಂಪೇನರ್ ಆಗಿದ್ದೆ. ಆದ್ದರಿಂದ ಬರಲಾಗಲಿಲ್ಲ. ಇಂದು ಬಂದಿದ್ದೇನೆ ನಾಳೆ ಬಾಗಲಕೋಟೆಗೆ ಹೋಗುತ್ತೇನೆ ಎಂದು ಸುದ್ದಿಗೋಷ್ಠಿ ನಡೆಸಿ ಬಾಗಲಕೋಟೆ ಕಡೆ ಪ್ರಯಾಣ ಬೆಳೆಸಿದರು.
ಕೇವಲ ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಸಚಿವ ಜಮೀರ್ ಅಹ್ಮದ್ ಪ್ರಚಾರ ಸುದ್ದಿಗೋಷ್ಠಿಗೆ ಮಾತ್ರ ಸೀಮಿತವಾಗಿದ್ದು, ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್ ನಡುವಿನ ಸಂಬಂಧ ಹಳಸಿದೆ ಎಂಬ ವದಂತಿಗಳಿಗೆ ಈಗ ರೆಕ್ಕೆಪುಕ್ಕ ಬಂದಂತಾಗಿದೆ. ಸಮರ್ಥ್ ಮಲ್ಲಿಕಾರ್ಜುನ್ ಪರ ಪ್ರಚಾರ ನಡೆಸಲು ದಾವಣಗೆರೆಗೆ ಬಂದಿದ್ದ ಸಚಿವ ಜಮೀರ್, ಬೀದಿಗಿಳಿದು ಮತ ಕೇಳುವ ಬದಲು ಕೇವಲ ಸುದ್ದಿಗೋಷ್ಠಿ ನಡೆಸಿ ಹೊರಟು ಹೋದದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಜಮೀರ್ ಪ್ರಚಾರ ರ‍್ಯಾಲಿಗೆ ಆಗಮಿಸುತ್ತಾರೆ ಎಂದು ಕಾತುರದಿಂದ ಕಾಯುತ್ತಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ಮಾಡಿದಂತಾಯಿತು. ಅಲ್ಲದೇ, ದಕ್ಷಿಣ ಕ್ಷೇತ್ರದಲ್ಲಿ ಚುನಾವಣಾ ಇದ್ದರೆ ಜಮೀರ್ ಮಾತ್ರ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಕ್ಷೇತ್ರದಲ್ಲಿ ಬೃಹತ್ ರ‍್ಯಾಲಿ ಮೂಲಕ ಆಗಮಿಸಿದ್ದು, ಇದು ನನ್ನ ಶಕ್ತಿ ಎಂದು ತೋರಿಸುವಂತಿತ್ತು. ಇದನ್ನೂ ಓದಿ: ದಾವಣಗೆರೆಯಲ್ಲಿ ಪ್ರಚಾರದ ವೇಳೆ ಮುಸ್ಲಿಮರಿಂದ ‘ಗೋ ಬ್ಯಾಕ್ ಕಾಂಗ್ರೆಸ್’ ಪ್ರತಿಭಟನೆ

