ಹೊಂಬಾಳೆ ಫಿಲ್ಮಸ್ ಬ್ಯಾನರ್ ನಲ್ಲಿ ಮೂಡಿ ಬಂದ ಕೆಜಿಎಫ್ ಸಿನಿಮಾ ಕನ್ನಡದ ನಟ ಯಶ್ (Yash) ಅವರಿಗೆ ಜಾಗತಿಕವಾಗಿ ದೊಡ್ಡ ಹೆಸರು ತಂದು ಕೊಟ್ಟಿತ್ತು. ಇದೀಗ ಯಶ್ ಕೇವಲ ಸ್ಯಾಂಡಲ್ ವುಡ್ ನಟನಾಗಿ ಉಳಿದುಕೊಂಡಿಲ್ಲ. ಭಾರತೀಯ ಸಿನಿಮಾ ರಂಗದ ಟಾಪ್ ನಟನಾಗಿ ಬೆಳೆದಿದ್ದಾರೆ. ಕೆಜಿಎಫ್ 2 ಸಿನಿಮಾದ ಮೂಲಕ ಸಾವಿರಾರು ಕೋಟಿ ಹಣವನ್ನು ನಿರ್ಮಾಪಕರಿಗೆ ತಂದುಕೊಟ್ಟ ಯಶ್, ಇದೀಗ ಮತ್ತೆ ಹೊಂಬಾಳೆ ಬ್ಯಾನರ್ ನಲ್ಲಿ ಸಿನಿಮಾ ಮಾಡಲಿದ್ದಾರಂತೆ. ಹಾಗಂತ ಇದು ಗಾಸಿಪ್ ಅಲ್ಲ. ಮಲಯಾಳಂ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ (Prithviraj Sukumaran) ಅವರೇ ಆಡಿದ ಮಾತು.
ಈಗಾಗಲೇ ಹೊಂಬಾಳೆ ಫಿಲ್ಮಸ್ (Hombale Films) ಮತ್ತು ಪೃಥ್ವಿರಾಜ್ ಜಂಟಿಯಾಗಿ ಸಿನಿಮಾವೊಂದನ್ನು ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಟೈಸನ್ ಎಂದು ಹೆಸರು ಕೂಡ ಇಡಲಾಗಿದೆ. ಹಲವು ಭಾಷೆಗಳಲ್ಲಿ ಈ ಸಿನಿಮಾ ಮೂಡಿ ಬರಲಿದೆ ಎಂದು ಹೇಳಲಾಗಿತ್ತು. ಈ ನಡುವೆ ಪೃಥ್ವಿರಾಜ್ ಅವರು ಯಶ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮುಂದಿನ ಸಿನಿಮಾ ಯಾವುದು ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಸದ್ಯ ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಯಶ್ ಅವರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ’ ಎಂದು ಮಾತನಾಡಿದ್ದಾರೆ. ಆ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ : ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿರುವ ಎಕ್ಸ್‌ಕ್ಲೂಸಿವ್ ಸೆಲೆಬ್ರಿಟಿಗಳು
ಅಂದುಕೊಂಡಂತೆ ಆಗಿದ್ದರೆ ಯಶ್ ಅವರ ಮುಂದಿನ ಸಿನಿಮಾ (Cinema) ಅನೌನ್ಸ್ ಆಗಬೇಕಿತ್ತು. ನರ್ತನ್ ನಿರ್ದೇಶನದಲ್ಲಿ ಯಶ್ ಅವರ 19ನೇ ಸಿನಿಮಾ ಬರಲಿದೆ ಎಂದು ಹೇಳಲಾಗಿತ್ತು. ಈಗ ಅದು ಆಗುತ್ತಿಲ್ಲ ಎನ್ನುವ ಸುದ್ದಿಯೂ ಇದೆ. ಅಲ್ಲದೇ, ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಜೊತೆಯೂ ಒಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯೂ ಇದು. ಸದ್ಯ ಶಂಕರ್ ಬೇರೆ ಸಿನಿಮಾವನ್ನು ಮಾಡುತ್ತಿರುವುದರಿಂದ ಸದ್ಯಕ್ಕೆ ಅದು ಸಾಧ್ಯವಿಲ್ಲ. ಇದೀಗ ಪೃಥ್ವಿರಾಜ್ ಹೆಸರು ತಳುಕು ಹಾಕಿಕೊಂಡಿದೆ.
ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಅವರನ್ನು ಕೇಳಿದಾಗ, ‘ಅವಸರ ಏನೂ ಅಲ್ಲ. ಸಮಯ ಬಂದಾಗ ಹೇಳುತ್ತೇನೆ’ ಎಂದು ಹೇಳಿ ಜಾರಿ ಬಿಡುತ್ತಾರೆ. ಈವರೆಗೂ ಅವರು ತಮ್ಮ 19ನೇ ಸಿನಿಮಾದ ಯಾವ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಆದರೂ, ಹಲವು ನಿರ್ದೇಶಕರ ಹೆಸರು ಕೇಳಿ ಬರುತ್ತಲೇ ಇದೆ. ಇದೀಗ ಪೃಥ್ವಿರಾಜ್ ಮಾತು ಮತ್ತಷ್ಟು ಪುಷ್ಠಿ ನೀಡಿದೆ. ಯಶ್ ಅವರ 19ನೇ ಸಿನಿಮಾ ಮಾಡುತ್ತಾರಾ? ಅಥವಾ ಮುಂದಿನ ಯೋಜನೆಯಾ ಅನ್ನುವುದನ್ನು ಅವರೇ ಸ್ಪಷ್ಟ ಪಡಿಸಬೇಕಿದೆ.