– ಸುಮಕ್ಕನನ್ನು ಅವಹೇಳನ ಮಾಡಿ ನೀವೇ ನಮ್ಮ ಕೆಲ್ಸ ಕಡಿಮೆ ಮಾಡಿದ್ದು
– ವೋಟ್ ಹಾಕಿದವರು ಮಾತ್ರವಲ್ಲ ಹಾಕದಿದ್ದವರು ಕೂಡ ನಮ್ಮವರು
ಮಂಡ್ಯ: ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಸುಮಲತಾ ಅವರು ನಿಂತಿದ್ದ ಚುನಾವಣೆ ಹೇಗಿತ್ತು ಅನ್ನೋದಕ್ಕೆ ಒಂದು ಕಥೆ ಹೇಳುತ್ತೇನೆ ಕೇಳಿ ಎಂದ ಅವರು, ಜಗತ್ತಿನಲ್ಲಿ ಮೊದಲನೇ ಸಲ ಸ್ಟೀಮ್ ಬೋಟ್ ತಯಾರಿ ಮಾಡುತ್ತಿದ್ದಾಗ ಎಲ್ಲ ಜನ ನೋಡುತ್ತಾ ನಿಂತಿದ್ದರು. ಈ ವೇಳೆ ಜನ ಸ್ಟೀಮಲ್ಲಿ ಹೇಗೆ ಬೋಟ್ ಓಡುತ್ತೆ ಇದು ಸಾಧ್ಯವಿಲ್ಲ ಎನ್ನುತ್ತಿದ್ದರು. ಹಾಗೆಯೇ ನೋಡುತ್ತಿರುವಾಗ ಬೋಟ್ ಎಂಜಿನ್ ಸ್ಟಾರ್ಟ್ ಆಯ್ತು. ಆಗ ಎನೋ ಸ್ಟಾರ್ಟ್ ಆಗಿರಬಹುದು ಆದ್ರೆ ಮುಂದಕ್ಕೆ ಹೋಗಲ್ಲ ಅಂದರು. ಆಮೇಲೆ ಮುಂದಕ್ಕೆ ಹೋಗುತ್ತಿದ್ದಂತೆ ಇದು ನಿಲ್ಲಲ್ಲ ಹಾಗೆ ಹೋಗಿ ಎಲ್ಲಾದರೂ ಗುದ್ದಿಕೊಳ್ಳುತ್ತೆ ಎಂದರು. ಇದನ್ನು ಯಾಕೆ ಹೇಳುತ್ತಿದ್ದೇನೆ ಅಂತ ಅರ್ಥವಾಯ್ತಲ್ಲ ಎಂದು ಜನತೆಗೆ ಕೇಳಿ ನಯವಾಗಿ ನಮ್ಮ ಎದುರಾಳಿಗಳಿಗೆ ಯಶ್ ಮಾತಿನ ಚಾಟಿ ಬೀಸಿದರು.
ರೆಬೆಲ್ ಸ್ಟಾರ್ ಅಂಬರೀಶ್ ಅಣ್ಣನ ಅವರ 67ನೇ ಹುಟ್ಟುಹಬ್ಬಕ್ಕೆ ಮಂಡ್ಯದ ಜನತೆ ಸುಮಲತಾ ಅಮ್ಮನನ್ನು ಚುನಾವಣೆಯಲ್ಲಿ ಗೆಲ್ಲಿಸಿ ದೊಡ್ಡ ಗಿಫ್ಟ್ ಕೊಟ್ಟಿದ್ದೀರಿ. ಒಂದಂತೂ ನಿಜ ಎಂದಿಗೂ ಮಂಡ್ಯದ ಗಂಡು ಅಂಬರೀಶ್ ಅಣ್ಣ ಮಾತ್ರ. ಹೇಗೆ ನಿಮಗೆ ಧನ್ಯವಾದ ಹೇಳಬೇಕು? ಯಾವ ರೀತಿ ನಿಮಗೆ ಕೃತಜ್ಞತೆ ಸಲ್ಲಿಸಬೇಕು ಗೊತ್ತಿಲ್ಲ. ನಿಮ್ಮ ಅಭಿಮಾನಕ್ಕೆ ನನ್ನ ಚರ್ಮ ಸುಲಿದು ಚಪ್ಪಲಿ ಮಾಡಿಸಿ ನಿಮಗೆ ಗೌರವ ಸಲ್ಲಿಸಬೇಕು ಎಂದು ದರ್ಶನ್ ಅವರು ತಮ್ಮ ಸಾಕಷ್ಟು ಸಂದರ್ಶನಗಳಲ್ಲಿ ಹೇಳಿರೋದನ್ನ ಕೇಳಿದ್ದೇನೆ. ಈ ಮಾತು ಯಾಕೆ ಬರುತ್ತದೆ ಎಂದರೆ ನೀವು ನಮಗೆ ಅಷ್ಟರ ಮಟ್ಟಿಗೆ ಪ್ರೀತಿ ಅಭಿಮಾನಿ ತೊರಿಸಿದ್ದೀರಿ. ಮಂಡ್ಯದ ಜನ ಇವತ್ತು ಕೊಟ್ಟಿರುವ ಕೊಡುಗೆ ಎಲ್ಲರಲ್ಲೂ ಕೃತಜ್ಞತಾ ಭಾವ ಮೂಡಿಸಿದೆ. ಅದರಲ್ಲೂ ಸುಮಲತಾ ಅಮ್ಮನವರ ಮೇಲೆ ನೀವು ತೋರಿಸಿದ ಪ್ರೀತಿ ಅಭಿಮಾನ ಹೆಚ್ಚು ಎಂದು ಹೊಗಳಿದರು.
ಹುಟ್ಟುವಾಗಲೇ ಯಾರೂ ಎಲ್ಲವನ್ನೂ ತಿಳಿದುಕೊಂಡು ಬರಲ್ಲ. ಅಂಬೆಗಾಲು ಇಟ್ಟುಕೊಂಡು ಮುಂದೆ ಬರುತ್ತಾರೆ. ನಮ್ಮ ಪ್ರತಿಸ್ಪರ್ಧಿಗಳಿಗೊಂದು ನನ್ನ ನಮ್ಮ ಮನವಿ. ಯಾರೆಲ್ಲಾ ನಮ್ಮನ್ನು ಟೀಕಿಸಿದ್ದೀರಿ. ಯಾರೆಲ್ಲಾ ನಮ್ಮ ಸುಮಕ್ಕನ ಬಗ್ಗೆ ಅವಹೇಳನವಾಗಿ ಮಾತನಾಡಿದ್ದೀರಿ ನೀವೇ ನಮಗೆ ಕೆಲಸ ಕಡಿಮೆ ಮಾಡಿದ್ದು. ಟೀಕೆಗಳಿಂದ ಸುಮಲತಾರ ಪರ ಜನರಿಗೆ ಒಲವು ಹೆಚ್ಚಾಯ್ತು ಎಂದು ಪರೋಕ್ಷವಾಗಿ ಜೆಡಿಎಸ್ ನಾಯಕರ ಟೀಕೆಗಳಿಗೆ ಯಶ್ ತಿರುಗೇಟು ನೀಡಿದರು.
ವೋಟ್ ಹಾಕಿರುವವರಷ್ಟೇ ನಮ್ಮವರಲ್ಲ, ವೋಟ್ ಹಾಕದಿರುವವರು ಕೂಡ ನಮ್ಮವರು. ಎಲ್ಲರೂ ಟೀಕೆ ಮಾಡುವುದನ್ನು ಬಿಟ್ಟು ಸುಮಲತಾರಿಗೆ ಕೆಲಸ ಮಾಡಲು ಬಿಡಿ ಎಂದು ಹೇಳಿದರು.
ಅಮ್ಮನ ಹೋರಾಟ ಸಾಮಾನ್ಯವಾಗಿರಲಿಲ್ಲ. ಇಲ್ಲಿ ಅವರು ಮಾಡಿದ್ದು ತುಂಬಾ ದೊಡ್ಡ ಹೋರಾಟ, ಅವರು ಮಂಡ್ಯದ ಜನರನ್ನು ನಂಬಿದ್ದರು. ನಾವು ಇಲ್ಲಿ ಬಂದು ಹೋರಾಡಿದೆವು, ಕಷ್ಟಪಟ್ಟೆವು ಎನ್ನುವುದಕ್ಕಿಂತ ನಾವು ಸ್ವಲ್ಪ ಕಾಮನ್ ಸೆನ್ಸ್ ಉಪಯೋಗಿಸಿದೆವು. ಕಾಮನ್ ಸೆನ್ಸ್ ಅಂದರೆ ಮೊದಲು ಜನಗಳ ಧ್ವನಿ ಏನು ಎನ್ನುವುದನ್ನು ಕೇಳಬೇಕು. ಆಗ ಸುಮಲತಾ ಅವರು ಚುನವಾಣೆಗೆ ನಿಲ್ಲಬೇಕು ಎನ್ನುವುದು ಜನಗಳ ಕೂಗಾಗಿತ್ತು. ಹೀಗಾಗಿ ಅವರ ಜೊತೆ ನಾವು ಮನೆ ಮಕ್ಕಳಾಗಿ ಜೊತೆಗೆ ನಿಂತೆವು ಎಂದು ಹೇಳಿದರು.