ಯಾದಗಿರಿ: ಬಿಜೆಪಿ (BJP) ಹಾಗೂ ಕಾಂಗ್ರೆಸ್ (Congress) ಕಾರ್ಯಕರ್ತರ ನಡುವೆ ಘರ್ಷಣೆಯಾಗಿ ಕಲ್ಲು ತೂರಾಟ ನಡೆದ ಘಟನೆ ಸುರಪುರ (Surapur) ಬಿಜೆಪಿ ಶಾಸಕ ರಾಜುಗೌಡರ ಸ್ವಗ್ರಾಮ ಕೊಡೇಕಲ್‍ನಲ್ಲಿ ನಡೆದಿದೆ.
ಕಾಂಗ್ರೆಸ್‍ನ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ನೇತೃತ್ವದಲ್ಲಿ 40ಕ್ಕೂ ಹೆಚ್ಚು ಕಾರಿನಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ನಾರಾಯಣಪೂರ ಗ್ರಾಮಕ್ಕೆ ಚುನಾವಣಾ (Election) ಪ್ರಚಾರಕ್ಕೆ ಹೊರಟಿದ್ದರು. ಅದೇ ಮಾರ್ಗದಲ್ಲಿ ಕಾಲಜ್ಞಾನಿ ಕೊಡೇಕಲ್ ಬಸವಣ್ಣ ದೇವರ ಜಾತ್ರೆ ನಡೆಯುತ್ತಿತ್ತು. ಆಗ ಗದ್ದಲ ಏರ್ಪಟ್ಟಿದ್ದರಿಂದ ವೆಂಕಟಪ್ಪ ನಾಯಕರ ಬೆಂಬಲಿಗರು ಶಬ್ಧ ಮಾಡಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ಶುರುವಾಗಿ ಪರಸ್ಪರ ಕಲ್ಲು ತೂರಾಟ ನಡೆದಿದೆ. ಇದನ್ನೂ ಓದಿ: ಬಿಜೆಪಿ ಶಾಸಕನ ಫೋಟೋವಿದ್ದ ಅಂಬುಲೆನ್ಸ್ ಸೀಜ್ – ಕೇಸ್ ದಾಖಲು
Advertisement
Advertisement
ಬಿಜೆಪಿ ಕಾರ್ಯಕರ್ತರು ಶಬ್ಧ ಮಾಡದಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಕಾರುಗಳ ಮೇಲೆ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಪ್ರತಿಯಾಗಿ ಕಾಂಗ್ರೆಸ್ ಮುಖಂಡರು ಸಹ ಕಲ್ಲು ತೂರಾಡಿದ್ದಾರೆ. ಕಲ್ಲು ತೂರಾಟದಿಂದಾಗಿ ಕಾಂಗ್ರೆಸ್ ಮುಖಂಡರ 15 ಕಾರುಗಳು ಜಖಂಗೊಂಡಿವೆ. ಮಾರಕಾಸ್ತ್ರಗಳಿಂದ ಕೆಲವರು ಹಲ್ಲೆ ನಡೆಸಿದ್ದು ನಾಲ್ಕೈದು ಜನರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಕೊಡೇಕಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement
ಘಟನೆಯ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ಹತೋಟಿಗೆ ತರಲು ಹರಸಾಹಸ ಪಟ್ಟಿದ್ದಾರೆ. ಮತ್ತೆ ಘಟನೆ ಮರುಕಳಿಸದಂತೆ ಎಸ್ಪಿ ವೇದಾಮೂರ್ತಿ ಭೇಟಿ ನೀಡಿದ್ದಾರೆ. ಘಟನೆಯಿಂದ ಇಡೀ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.
Advertisement
ಈ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ 9 ಗಂಟೆಯಿಂದ ಶನಿವಾರ ರಾತ್ರಿ 8 ಗಂಟೆಯವರೆಗೆ ವಿಧಾನಸಭಾ ಕ್ಷೇತ್ರದಾದ್ಯಂತ ನಿಷೇಧಾಜ್ಞೆ (Under section 144 prohibitory order) ಜಾರಿಗೊಳಿಸಲಾಗಿದೆ. ಬಹಿರಂಗ ಸಭೆ, ಸಮಾರಂಭ ಹಾಗೂ ಮೆರವಣಿಗೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಆದೇಶಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಎಂದಿಗೂ ಉದ್ಧಾರವಾಗದು: ಗುಲಾಂ ನಬಿ ಆಜಾದ್