– ಮೇ 25ರಿಂದ ಸಿಇಟಿ ಸೀಟು ಹಂಚಿಕೆ ಮಂಥನ
ಬೆಂಗಳೂರು: ಕೌನ್ಸೆಲಿಂಗ್ ಪ್ರಕ್ರಿಯೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ 65 ಸರ್ಕಾರಿ ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕಾಲೇಜುಗಳಲ್ಲಿ ಮೇ 25ರಿಂದ 30ರ ವರೆಗೆ ಸಿಇಟಿ ಸೀಟು ಹಂಚಿಕೆ ಮಂಥನ ಕಾರ್ಯಾಗಾರವನ್ನು ಆಯೋಜಿಸಿದ್ದು, ಇದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
ಮೇ 28ರಂದು ಹೊರತುಪಡಿಸಿ ಎಲ್ಲ ದಿನ ನಿತ್ಯ ಎರಡು ಸೆಷನ್ಸ್ (ಬೆಳಿಗ್ಗೆ 10 ರಿಂದ 12, ಮಧ್ಯಾಹ್ನ 2 ರಿಂದ ಸಂಜೆ 4 ಗಂಟೆವರೆಗೆ) ನಡೆಯಲಿದ್ದು, ನುರಿತ ಹಾಗೂ ಕೆಇಎಯಿಂದ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳು ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಥನದಲ್ಲಿ ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು/ಪೋಷಕರು ಕೆಇಎ ವೆಬ್ ಸೈಟ್ ನಲ್ಲಿ ಸ್ಲಾಟ್ ಬುಕ್ ಮಾಡಿಕೊಂಡೇ ಕಾಲೇಜುಗಳಿಗೆ ಹೋಗಬೇಕು. ಇದಕ್ಕೆ ವೆಬ್ ಸೈಟ್ ನಲ್ಲಿ ಲಿಂಕ್ ಬಿಟ್ಟಿದ್ದು ಅದರಲ್ಲಿ ಸಮಯ ಹಾಗೂ ಕಾರ್ಯಕ್ರಮ ನಡೆಯುವ ಕಾಲೇಜುಗಳನ್ನ ಆಯ್ಕೆ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.
ಎಷ್ಟೊ ಬಾರಿ ವಿದ್ಯಾರ್ಥಿಗಳಿಗೆ ಒಳ್ಳೆಯ ರಾಂಕಿಂಗ್ (Ranking) ಬಂದಿದ್ದರೂ ಆಪ್ಷನ್ಸ್ (Options) ದಾಖಲಿಸುವಾಗ ಆಗುತ್ತಿದ್ದ ಸಣ್ಣಪುಟ್ಟ ತಪ್ಪುಗಳಿಂದಾಗಿ ಅನೇಕ ಮಂದಿಗೆ ಇಷ್ಟದ ಕಾಲೇಜು ಕೈತಪ್ಪಿ ಹೋಗುತ್ತಿತ್ತು. ಇದು ಸೈಬರ್ ಸೆಂಟರ್ ನವರು ಮಾಡುತ್ತಿದ್ದ ಎಡವಟ್ಟುಗಳ ಜೊತೆಗೆ ವಿದ್ಯಾರ್ಥಿ/ಪೋಷಕರಲ್ಲಿನ ಮಾಹಿತಿ ಕೊರತೆ ಕೂಡ ಕಾರಣವಾಗಿತ್ತು. ಈ ಎಲ್ಲ ಕಾರಣಗಳಿಂದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕಳೆದ ವರ್ಷ ಸೀಟು ಹಂಚಿಕೆ ಮಂಥನ ಆರಂಭಿಸಲಾಯಿತು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತ್ತು. ಹೀಗಾಗಿ ಈ ಬಾರಿಯೂ ಮತ್ತಷ್ಟು ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಏನೇನು ಹೇಳ್ತಾರೆ?
ಸೀಟು ಹಂಚಿಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ? ಆಪ್ಷನ್ಸ್ (Options) ದಾಖಲಿಸುವುದು ಹೇಗೆ? ಸೀಟು ಹಂಚಿಕೆ ನಂತರ ಒಪ್ಪಿಗೆಯಾದರೆ ಛಾಯ್ಸ್ ಆಯ್ಕೆ ಹೇಗೆ? ಒಂದು ವೇಳೆ ಇನ್ನೂ ಉತ್ತಮ ಕಾಲೇಜಿನ ಸೀಟು ನಿರೀಕ್ಷೆ ಇದ್ದರೆ ಏನು ಮಾಡಬೇಕು? ಶುಲ್ಕ ಪಾವತಿ ಹೇಗೆ? ಇತ್ಯಾದಿ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡುವುದೇ ಈ ಮಂಥನದ ಉದ್ದೇಶ ಎಂದು ಅವರು ವಿವರಿಸಿದ್ದಾರೆ.
ನೀಟ್ ಪರೀಕ್ಷೆಗೆ ಸಿದ್ಧತೆ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅಗತ್ಯ ಇಲ್ಲ. ಬೇಕಾದರೆ ಅವರ ಬದಲಿಗೆ ಪೋಷಕರು ಹೋಗಿ ಮಾಹಿತಿ ಪಡೆದರೂ ಸಾಕು ಎಂದು ಅವರು ಸಲಹೆ ನೀಡಿದ್ದಾರೆ.
