ಭೋಪಾಲ್: ಸಾಮಾನ್ಯವಾಗಿ ಪ್ರಯಾಣಿಕರು ಬಸ್ಸಿನಲ್ಲಿ ಕುಳಿತ್ತಿದ್ದಾಗ ಕಿಟಿಕಿಯಿಂದ ತಲೆಯನ್ನು ಹೊರಗೆ ಹಾಕುತ್ತಾರೆ. ಆದರೆ 56 ವರ್ಷದ ಮಹಿಳೆ ಬಸ್ಸಿನಿಂದ ತಲೆ ಹೊರ ಹಾಕಿದ ತಕ್ಷಣ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಪನ್ನಾ ಜಿಲ್ಲೆಯಲ್ಲಿ ನಡೆದಿದೆ.
56 ವರ್ಷದ ಆಶಾ ರಾಣಿ ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆ ಪನ್ನಾ ಜಿಲ್ಲೆಯ ಡೈಮಂಡ್ ಕ್ರಾಸಿಂಗ್ ಬಳಿ ನಡೆದಿದೆ. ಮೃತ ಆಶಾ ರಾಣಿ ಸತ್ನಾ ಜಿಲ್ಲೆಯಿಂದ ಪನ್ನಾ ಜಿಲ್ಲೆಗೆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೃತ ಆಶಾ ರಾಣಿ ವಾಂತಿ ಬಂದ ಕಾರಣ ಬಸ್ಸಿನ ಕಿಟಕಿಯಿಂದ ತಲೆಯನ್ನು ಹೊರಗೆ ಹಾಕಿದ್ದಾರೆ. ಆದರೆ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬದ ಬಗ್ಗೆ ರಾಣಿ ಅವರು ಗಮನ ಕೊಡಲಿಲ್ಲ. ಇತ್ತ ಬಸ್ ವೇಗವಾಗಿ ಹೋಗುತ್ತಿದ್ದ ಕಾರಣ ವಿದ್ಯುತ್ ಕಂಬಕ್ಕೆ ತಲೆ ಹೊಡೆದಿದೆ. ವಿದ್ಯುತ್ ಕಂಬಕ್ಕೆ ಹೊಡೆದ ರಭಸಕ್ಕೆ ರುಂಡ, ಮುಂಡ ಬೇರೆಯಾಗಿ ಸ್ಥಳದಲ್ಲಿಯೇ ರಾಣಿ ಮೃತಪಟ್ಟಿದ್ದಾರೆ.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ. ಚಾಲಕ ಅತಿ ವೇಗವಾಗಿ ಬಸ್ ಚಲಾಯಿಸುತ್ತಿದ್ದ ಕಾರಣ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗುತ್ತದೆ. ಸದ್ಯಕ್ಕೆ ಮಹಿಳೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಬಳಿಕ ಕುಟುಂಬವರಿಗೆ ಹಸ್ತಾಂತರಿಸಲಾಗುತ್ತದೆ ಎಂದು ಇನ್ಸ್ ಪೆಕ್ಟರ್ ಅರವಿಂದ್ ಕುಜುರ್ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv