ಭೋಪಾಲ್: ಬಿಜೆಪಿಯ ಪ್ರಜ್ಞಾ ಸಿಂಗ್ ಠಾಕೂರ್ (Pragya Thakur) ಅವರೊಂದಿಗೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ವೀಕ್ಷಿಸಿದ ಯುವತಿ (Woman) ಕೆಲವೇ ದಿನಗಳ ಬಳಿಕ ನಾಪತ್ತೆಯಾಗಿರುವ ಘಟನೆ ಮಧ್ಯ ಪ್ರದೇಶದಲ್ಲಿ (Madhya Pradesh) ನಡೆದಿದೆ.
20 ವರ್ಷದ ಯುವತಿ ಮುಸ್ಲಿಂ ಯುವಕನೊಂದಿಗೆ ಓಡಿಹೋಗಿದ್ದಾಳೆಂದು ಆಕೆಯ ಕುಟುಂಬದವರು ಶಂಕಿಸಿದ್ದಾರೆ. ಆಕೆ ಮನೆಯಿಂದ 70,000 ರೂ. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ್ದಾಳೆ ಎಂದು ಆರೋಪಿಸಿದ್ದಾರೆ.
ಈ ನಡುವೆ ಯುವತಿ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ. ನಾನು ವಯಸ್ಕಳಾಗಿದ್ದೇನೆ ಹಾಗೂ ತನಗೆ ಏನು ಮಾಡಬೇಕೆಂಬ ತಿಳುವಳಿಕೆ ಇದೆ ಎಂದು ಆಕೆ ವೀಡಿಯೋದಲ್ಲಿ ಹೇಳಿರುವುದು ಕಂಡುಬಂದಿದೆ. ಇದನ್ನೂ ಓದಿ: ಲಿವ್ ಇನ್ ಪಾರ್ಟ್ನರ್‌ಳನ್ನು ಕೊಂದು ದೇಹವನ್ನು ಪೀಸ್ ಪೀಸ್ ಮಾಡಿದ!
ಈ ಹಿಂದೆಯೂ ಯುವತಿ ಒಂದು ಬಾರಿ ನಾಪತ್ತೆಯಾಗಿದ್ದಳು. ಆ ಸಂದರ್ಭ ಆಕೆಯ ಕುಟುಂಬ ಸಂಸದೆ ಪ್ರಜ್ಞಾ ಠಾಕೂರ್ ಅವರ ಸಹಾಯ ಕೋರಿತ್ತು. ಈ ಹಿನ್ನೆಲೆ ಪ್ರಜ್ಞಾ ಸಿಂಗ್ ಠಾಕೂರ್ ಮೇ 11 ರಂದು ಹಿಂದೂ ಯುವತಿಯರನ್ನು ಇಸ್ಲಾಂಗೆ ಪರಿವರ್ತಿಸುವ ವಿವಾದಿತ ಚಿತ್ರವಾಗಿರುವ ದಿ ಕೇರಳ ಸ್ಟೋರಿಯನ್ನು ವೀಕ್ಷಿಸಲು ಮಹಿಳೆಯರ ಗುಂಪೊಂದನ್ನು ಕರೆದುಕೊಂಡು ಹೋಗಿದ್ದರು. ಆ ಗುಂಪಿನಲ್ಲಿ ನಾಪತ್ತೆಯಾಗಿರುವ ಯುವತಿಯೂ ಸೇರಿದ್ದಳು. ಇದಾದ ಬಳಿಕ ಯುವತಿ ಮೇ 15 ರಂದು ಮತ್ತೆ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಎಚ್ಚರಗೊಂಡ ಪೋಷಕರು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ ಅಲ್ಲಿ ಅವರು ಈ ಕೇಸ್‌ನಲ್ಲಿ ಸಹಕರಿಸಲು ಸಿದ್ಧರಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ ಯುವತಿಗೆ ನರ್ಸಿಂಗ್ ಶಾಲೆಯಲ್ಲಿ ಸ್ನೇಹಿತೆಯಾಗಿದ್ದಾಕೆಯ ಸಹೋದರ ಯೂಸುಫ್ ಖಾನ್ ಅವನೊಂದಿಗೆ ಓಡಿಹೋಗಿರುವುದಾಗಿ ಶಂಕಿಸಲಾಗಿದೆ. ಆತನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಈ ಮೊದಲೇ ಹಲ್ಲೆ, ಕಳ್ಳತನ, ಬೆಂಕಿ ಹಚ್ಚಿರುವಂತಹ ಕ್ರಿಮಿನಲ್ ಕೇಸ್‌ಗಳು ದಾಖಲಾಗಿವೆ.
ಇದೀಗ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ನಾವು ಪ್ರಕರಣವನ್ನು ದಾಖಲಿಸಿದ್ದೇವೆ. ಸಾಧ್ಯವಿರುವ ಎಲ್ಲಾ ವಿಧಾನಗಳಿಂದಲೂ ಆಕೆಯನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಆಕೆಯ ಹೇಳಿಕೆ ಆಧಾರದ ಮೇಲೆ ನಾವು ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸ್ಥಳೀಯ ಹಿರಿಯ ಪೊಲೀಸ್ ಅಧಿಕಾರಿ ಅನಿಲ್ ಬಾಜ್‌ಪೇಯ್ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂ-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಭಯಾನಕ ಅಪಘಾತ- 5 ತಿಂಗಳಲ್ಲೇ 55 ಮಂದಿ ಸಾವು!