ಪಾಟ್ನಾ: ಕುಟುಂಬವೊಂದನ್ನು ಶಸ್ತ್ರಸಜ್ಜಿತ ಯುವಕರ ಗುಂಪೊಂದು ಅಡ್ಡಗಟ್ಟಿದ್ದು, ವ್ಯಕ್ತಿಯ ಮುಂದೆಯೇ ಆತನ ಪತ್ನಿ ಹಾಗೂ 15 ವರ್ಷದ ಮಗಳ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆಯೊಂದು ಬಿಹಾರದ ಗಯಾ ಜಿಲ್ಲೆಯಲ್ಲಿ ನಡೆದಿದೆ.
ಗಯಾ ಜಿಲ್ಲೆಯ ಕೋಂಚ್ ಪೊಲೀಸ್ ಠಾಣೆ ವ್ಯಾಪ್ತಿಯ ಸೊಂದಿಹಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ. ವ್ಯಕ್ತಿ ತನ್ನ ಪತ್ನಿ ಹಾಗೂ ಮಗಳೊಂದಿಗೆ ಮೋಟಾರ್ ಬೈಕ್ ನಲ್ಲಿ ಗುರುವಾರ ರಾತ್ರಿ ಹೋಗುತ್ತಿದ್ದರು. ಸೊಂದಿಹಾ ಗ್ರಾಮದ ಬಳಿ ಹೋಗುತ್ತಿದ್ದಂತೆ ಮೂವರು ಯುವಕರು ಬಂದು ಗನ್ ತೋರಿಸಿ ಅಡ್ಡಗಟ್ಟಿದ್ದಾರೆ. ನಂತರ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಹಾಕಿದ್ದು, ಆತನ ಮುಂದೆಯೇ ಪತ್ನಿ ಹಾಗೂ ಮಗಳ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಇನ್ಸ್ ಪೆಕ್ಟರ್ ನಯ್ಯರ್ ಹಸ್ನೈನ್ ಖಾನ್ ಹೇಳಿದ್ದಾರೆ.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಇಬ್ಬರು ಯುವಕರನ್ನು ಗುರುತಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಈ ದುಷ್ಕರ್ಮಿಗಳ ಗುಂಪು ಅತ್ಯಾಚಾರ ಕೃತ್ಯ ಎಸಗುವ ಮುನ್ನ ಇದೇ ಮಾರ್ಗದಲ್ಲಿ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಫೋನ್ ಹಾಗೂ ಹಣ ದೋಚಿದ್ದರೆಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ನಾಪತ್ತೆಯಾದ ಆರೋಪಿಗಾಗಿ ಬಲೆ ಬೀಸಿದ್ದೇವೆ. ಕಳ್ಳತನ ಆದ ತಕ್ಷಣ ಸೂಕ್ತಕ್ರಮ ಕೈಗೊಳ್ಳದೆ ತಳ್ಳಿ ಹಾಕಿದ್ದಾರೆ. ಆದ್ದರಿಂದ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೋಂಚ್ ಪೊಲೀಸ್ ಠಾಣಾಧಿಕಾರಿಯನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಿದ್ದಾರೆ. ಇನ್ನು ಈ ಘಟನೆಗೆ ಸಂಬಂಧಿಸಿದಂತೆ 20 ಯುವಕರನ್ನು ಬಂಧಿಸಲಾಗಿದೆ ಎಂದು ಇನ್ಸ್ ಪೆಕ್ಟರ್ ಹೇಳಿದ್ದಾರೆ.