Connect with us

Latest

2015ರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ

Published

on

ನವದೆಹಲಿ: ಪ್ರಪಂಚದಾದ್ಯಂತ ಒಂದು ವರ್ಷದಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದ ಜನರ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2015 ರಲ್ಲಿ ಗಾಳಿ, ನೀರು ಹಾಗೂ ಇತರೆ ಮಾಲಿನ್ಯದಿಂದ ಸುಮಾರು 25 ಲಕ್ಷ ಜನರು ಭಾರತದಲ್ಲಿ ಮೃತಪಟ್ಟಿದ್ದಾರೆ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಅಮೆರಿಕದ ಇಕಾಹ್ನ್ ಮೆಡಿಸಿನ್ ಸ್ಕೂಲ್‍ನ ಸಂಶೋಧಕರು ಈ ಕುರಿತು ಅಧ್ಯಯನ ಕೈಗೊಂಡಿದ್ದು, ನವದೆಹಲಿಯ ಐಐಟಿ ವಿದ್ಯಾರ್ಥಿಗಳೂ ಕೂಡ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

ಭಾರತದಲ್ಲಿ 2015ರಲ್ಲಿ 25 ಲಕ್ಷ ಜನ ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಮಾಲಿನ್ಯದಿಂದ ಬರಬಹುದಾದ ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಗಳು, ಶ್ವಾಸಕೋಶ ಕ್ಯಾನ್ಸರ್ ಹಾಗೂ ದೀರ್ಘಕಾಲದ ಶ್ವಾಸಕೋಶ ಕಾಯಿಲೆಗಳು ಬಹುತೇಕ ಜನರ ಸಾವಿಗೆ ಕಾರಣವಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಪ್ರಪಂಚದಲ್ಲಿ ಮಾಲಿನ್ಯದಿಂದ ಪ್ರತಿ ವರ್ಷ 90 ಲಕ್ಷ ಜನ ಸಾವನ್ನಪ್ಪುತ್ತಿದ್ದು, 2015ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಅಂದ್ರೆ 25 ಲಕ್ಷ ಜನರು ಸಾವನ್ನಪ್ಪಿದ್ದಾರೆ. ನಂತರದ ಸ್ಥಾನವನ್ನು ಚೀನಾ ಪಡೆದಿದ್ದು, 18 ಲಕ್ಷ ಜನರು ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ.

2015ರಲ್ಲಿ ವಿಶ್ವದಾದ್ಯಂತ 65 ಲಕ್ಷ ಜನ ವಾಯು ಮಾಲಿನ್ಯದಿಂದ ಸಾವನ್ನಪ್ಪಿದ್ದರೆ, 18 ಲಕ್ಷ ಜನ ಜಲಮಾಲಿನ್ಯದಿಂದ ಹಾಗೂ 80 ಸಾವಿರ ಜನ ಕೆಲಸದ ಸ್ಥಳದಲ್ಲಾಗುವ ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

ಶೇ. 92ರಷ್ಟು ಮಾಲಿನ್ಯ ಸಂಬಂಧಿತ ಸಾವುಗಳು ಕಡಿಮೆ ಹಾಗೂ ಮಧ್ಯಮ ಆದಾಯವುಳ್ಳ ರಾಷ್ಟ್ರಗಳಲ್ಲೇ ಸಂಭವಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

ವೇಗವಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಮಡಗಾಸ್ಕರ್ ಹಾಗೂ ಕೀನ್ಯಾದಲ್ಲಿ 4 ರಲ್ಲಿ 1 ಭಾಗದಷ್ಟು ಸಾವು ಮಾಲಿನ್ಯದಿಂದ ಸಂಭವಿಸುತ್ತಿದೆ ಎಂದು ಹೇಳಿದ್ದಾರೆ.

Click to comment

Leave a Reply

Your email address will not be published. Required fields are marked *