Connect with us

Bengaluru City

ಬಿಜೆಪಿಯಿಂದ ಮಹದಾಯಿ ದಾಳ- ಪರಿವರ್ತನಾ ಯಾತ್ರೆಯೊಂದಿಗೆ ಮಹದಾಯಿ ವಿವಾದ ಅಂತ್ಯಗೊಳ್ಳುತ್ತಾ?

Published

on

ಬೆಂಗಳೂರು: ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆಯೊಂದಿಗೆ ಮಹದಾಯಿ ವಿವಾದ ಇತ್ಯರ್ಥಗೊಳ್ಳುವ ಸಾಧ್ಯತೆ ಇದೆ. ಯಾಕಂದ್ರೆ ಇಂದು ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿರುವ ಅಮಿತ್ ಶಾ, ಮಹದಾಯಿ ವಿಚಾರವಾಗಿ ಮಹತ್ವದ ಘೋಷಣೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.

ಮಹದಾಯಿ ವಿಚಾರವಾಗಿ ರಾಜ್ಯ ಬಿಜೆಪಿ ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳೊಂದಿಗೆ ಮಾತುಕತೆಗೆ ಯತ್ನಿಸಿದ್ರೂ ಪ್ರಯೋಜನವಾಗಿರಲಿಲ್ಲ. ಗೋವಾ ಸಿಎಂ ಮನೋಹರ್ ಪರಿಕ್ಕರ್ ಮತ್ತು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನಾವಿಸ್ ಮಾತುಕತೆಗೆ ಮುಂದಾಗಿರಲಿಲ್ಲ. ಹೀಗಾಗಿ ಖುದ್ದು ಅಮಿತ್ ಶಾ ಮಾತುಕತೆಗೆ ಒಪ್ಪುವಂತೆ ಗೋವಾ ಮತ್ತು ಮಹಾರಾಷ್ಟ್ರ ಸಿಎಂಗಳಿಗೆ ಸೂಚಿಸುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆದ್ರೆ ಬಿಜೆಪಿಯ ನವ ಕರ್ನಾಟಕ ಪರಿವರ್ತನಾ ಯಾತ್ರೆ ಮುಗಿಯುವ ವೇಳೆಗೆ ಮಹದಾಯಿ ವಿವಾದವೂ ಬಗೆಹರಿಯುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ.

ಬಿಜೆಪಿ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಇವತ್ತು ಚಾಲನೆ ಸಿಗಲಿದೆ. ಬೆಳಗ್ಗೆ 11ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ 224 ಕ್ಷೇತ್ರಗಳಲ್ಲಿ 75 ದಿನಗಳ ಕಾಲ ಯಾತ್ರೆ ಸಂಚರಿಸಲಿದೆ. ಕೇರಳದ ಜನ ರಕ್ಷಾ ಯಾತ್ರೆ ಮಾದರಿಯಲ್ಲೇ ರಾಜ್ಯದಲ್ಲೂ ಯಾತ್ರೆ ನಡೆಯಲಿದ್ದು, ವಾರಕ್ಕೆ ಒಬ್ಬರು ಕೇಂದ್ರದ ಬಿಜೆಪಿ ದಿಗ್ಗಜರು  ರ‍್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.

ರಾಜನಾಥ್ ಸಿಂಗ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಸೇರಿದಂತೆ ಕೇಂದ್ರ ಸಚಿವರ ದಂಡು ಯಾತ್ರೆಯಲ್ಲಿ ಬಂದು ಪ್ರಚಾರ ನಡೆಸಲಿದ್ದಾರೆ. ಅಷ್ಟೇ ಅಲ್ಲ ಹಿಂದುತ್ವವಾದಿಗಳಾದ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಉಮಾಭಾರತಿ, ಸಾಧ್ವಿ ನಿರಂಜನ್ ಕೂಡ ಪರಿವರ್ತನಾ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ. ಅಂತಿಮವಾಗಿ ಜನವರಿ 28ರಂದು ಬೆಂಗಳೂರಲ್ಲಿ ಭರ್ಜರಿ ರ‍್ಯಾಲಿ ಮೂಲಕ ಯಾತ್ರೆ ಅಂತ್ಯಗೊಳ್ಳಲಿದೆ.

ಈ ಬೃಹತ್ ಸಮಾರೋಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದು, ಅಧಿಕೃತವಾಗಿ ಚುನಾವಣಾ ರಣಕಹಳೆ ಊದಲಿದ್ದಾರೆ. ಇನ್ನು ಬಿಜೆಪಿ ಯಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.

ಇದನ್ನೂ ಓದಿ: ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆ- ಇಂದಿನಿಂದ 75 ದಿನ ಕೇಸರಿ ಕಹಳೆ- ಇಲ್ಲಿದೆ ರ‍್ಯಾಲಿ ವೇಳಾಪಟ್ಟಿ

Click to comment

Leave a Reply

Your email address will not be published. Required fields are marked *