ಗಾಂಧಿನಗರ: ಚಿನ್ನದ ಆಭರಣವನ್ನು ಧರಿಸಲು ಬಿಡದ ಪತಿ ವಿರುದ್ಧ ಪತ್ನಿ ಪೊಲೀಸರಿಗೆ ದೂರು ನೀಡಿರುವ ಘಟನೆ ಗುಜರಾತಿನ ಅಹಮದಾಬಾದಿನಲ್ಲಿ ನಡೆದಿದೆ.
ಮಹಿಳೆಯೊಬ್ಬಳು ತನ್ನ ಪತಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಹಾಗೂ ಮಾನಸಿಕ ಹಿಂಸೆ ಕುರಿತು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನನಗೆ ಪತಿ ಚಿನ್ನದ ಆಭರಣ ಧರಿಸಲು ಬಿಡುತ್ತಿರಲಿಲ್ಲ. ಇದರಿಂದ ಮಾನಸಿಕ ಹಿಂಸೆಯಾಗುತ್ತಿದೆ ಎಂದು ಮಹಿಳೆ ಪತಿ ವಿರುದ್ಧ ದೂರಿದ್ದಾಳೆ.
ಮಹಿಳೆ ಖಾಸಗಿ ವಿಶ್ವವಿದ್ಯಾನಿಲಯದಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಪತಿ ಐಟಿ ಎಂಜಿನೀಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 2016ರಲ್ಲಿ ನಮ್ಮ ಮದುವೆಯಾಯ್ತು. ನಮಗೆ ಎರಡು ವರ್ಷದ ಮಗುವಿದೆ. ರಕ್ಷಾಬಂಧನದ ದಿನ ಸಂಬಂಧಿಕರ ಮನೆಗೆ ಹೋಗಿ ವಾಪಸ್ ಬಂದ ಮೇಲೆ ನನ್ನ ಜೊತೆ ಪತಿ ಗಲಾಟೆ ಮಾಡಿದ್ದರು ಎಂದು ಭಾನುವಾರ ಪೊಲೀಸ್ ಠಾಣೆಗೆ ಬಂದ ಮಹಿಳೆ ಪತಿ ವಿರುದ್ಧ ದೂರು ನೀಡಿದ್ದಾಳೆ.
ನನ್ನ ಪತಿ ನನಗೆ ಚಿನ್ನದ ಆಭರಣ ಧರಿಸಲು ಬಿಡುವುದಿಲ್ಲ. ಅವರ ಮಾತು ಕೇಳದಿದ್ದರೆ ಬೆದರಿಸಿ, ಹೊಡೆದು ಚಿತ್ರಹಿಂಸೆ ಕೊಡುತ್ತಾರೆ. ಚಿಕ್ಕ ಚಿಕ್ಕ ವಿಷಯಕ್ಕೂ ನಮ್ಮ ಮಧ್ಯೆ ಜಗಳವಾಗುತ್ತೆ. ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಾರೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮದುವೆ ಸಂಧರ್ಭದಲ್ಲಿ ತವರಿನಿಂದ ನನಗೆ 20 ತೊಲ (200 ಗ್ರಾಂ) ಚಿನ್ನಾಭರಣ ಮಾಡಿಸಿ ಕೊಟ್ಟಿದ್ದರು. ಆದರೆ ಮದುವೆಯ ಬಳಿಕ ನನ್ನ ಪತಿ ಒಂದು ದಿನ ಕೂಡ ಅದನ್ನು ಧರಿಸಲು ನನಗೆ ಬಿಡಲಿಲ್ಲ ಎಂದು ಮಹಿಳೆ ಅಳಲನ್ನು ತೋಡಿಕೊಂಡಿದ್ದಾರೆ.