ಲಂಡನ್: ಭಾರತದ (Team India) ಉದಯೋನ್ಮುಖ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ(Vaibhav Sooryavanshi) ಅವರಿಗೆ ಐರ್ಲೆಂಡ್ ವಿರುದ್ಧದ ಪಂದ್ಯದ ವೇಳೆ ತಂಡದ ಮುಖ್ಯ ಡ್ರೆಸ್ಸಿಂಗ್ ರೂಮ್ (Dressing Room) ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿದೆ.
ಹೌದು. ಯುಕೆಯಲ್ಲಿರುವ ಬಾಲ ಕಾರ್ಮಿಕ ಮತ್ತು ಮಕ್ಕಳ ರಕ್ಷಣೆ ಕಾನೂನಿಂದ (Child Protection Laws) 15 ವರ್ಷದ ವೈಭವ್ ಅವರಿಗೆ ಹಿರಿಯ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್‌ನ ಹಂಚಿಕೊಳ್ಳುವಂತಿಲ್ಲ.
ಐರ್ಲೆಂಡ್ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿದ್ದ ವೈಭವ್ ಸೂರ್ಯವಂಶಿ ಇನ್ನು ಅಪ್ರಾಪ್ತ ವಯಸ್ಕರಾಗಿದ್ದಾರೆ. ಯುಕೆಯ ಕಟ್ಟುನಿಟ್ಟಾದ ಮಕ್ಕಳ ಸಂರಕ್ಷಣಾ ನಿಯಮಗಳ ಪ್ರಕಾರ 18 ವರ್ಷದೊಳಗಿನ ಯಾವುದೇ ಕ್ರೀಡಾಪಟು ಅಥವಾ ವ್ಯಕ್ತಿಯನ್ನು ವಯಸ್ಕರ (Adults) ಜೊತೆಗೆ ಒಂದೇ ಖಾಸಗಿ ಕೋಣೆಯಲ್ಲಿ ಅಥವಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಇರಿಸುವಂತಿಲ್ಲ.
ಈ ಕಾನೂನಿನ ಅನ್ವಯ ಪಂದ್ಯದ ಸಮಯದಲ್ಲಿ ವೈಭವ್ ಅವರಿಗಾಗಿ ಪ್ರತ್ಯೇಕವಾದ ಕೋಣೆಯ ವ್ಯವಸ್ಥೆ ಮಾಡಬೇಕಾಗುತ್ತದೆ. ಅವರು ಕೇವಲ ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬರುವಾಗ ಮತ್ತು ತರಬೇತಿ ಅವಧಿಯಲ್ಲಿ ಮಾತ್ರ ತಂಡದೊಂದಿಗೆ ಬೆರೆಯಬಹುದು.
ಕಾಯ್ದೆ ಏನು ಹೇಳುತ್ತದೆ?
ಅಪ್ರಾಪ್ತ ವಯಸ್ಕರ ಸುರಕ್ಷತೆ ಮತ್ತು ಅವರ ಖಾಸಗಿತನವನ್ನು ಕಾಯ್ದುಕೊಳ್ಳುವುದು ಕಡ್ಡಾಯ.
ಹಿರಿಯರ (ವಯಸ್ಕರ) ಬಟ್ಟೆ ಬದಲಾಯಿಸುವ ಕೋಣೆಯಲ್ಲಿ ಅಪ್ರಾಪ್ತರನ್ನು ಇರಿಸಿದರೆ ಅದು ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಸಂಭಾವ್ಯ ಕಿರುಕುಳ ತಡೆ ಕಾಯ್ದೆಯಡಿ ಅಪರಾಧವಾಗಿ ಪರಿಣಮಿಸುತ್ತದೆ.
ಸ್ಥಳೀಯ ಆಡಳಿತ ಮಂಡಳಿಗಳು ಈ ನಿಯಮವನ್ನು ಈಗಾಗಲೇ ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸುತ್ತವೆ. ಒಂದು ವೇಳೆ ನಿಯಮ ಉಲ್ಲಂಘಿಸಿದರೆ ಕ್ರಿಕೆಟ್ ಮಂಡಳಿಗೆ ಭಾರಿ ದಂಡ ಹಾಗೂ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದನ್ನೂ ಓದಿ: ಕೆಣಕಿದ ಲಂಕಾಗೆ ಬ್ಯಾಟ್‌ನಿಂದಲೇ ಬುದ್ಧಿ ಕಲಿಸಿ ಸೂರ್ಯವಂಶಿ ವಿಶ್ವದಾಖಲೆ

ಐಸಿಸಿ ಹಸ್ತಕ್ಷೇಪ ಮಾಡಬಹುದೇ?
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಜಾಗತಿಕ ಕ್ರಿಕೆಟ್ ಅನ್ನು ನಿಯಂತ್ರಿಸಿದರೂ, ಯಾವುದೇ ದೇಶದಲ್ಲಿ ಪಂದ್ಯ ನಡೆಯುವಾಗ ಆಯಾ ದೇಶದ ಸ್ಥಳೀಯ ಕಾನೂನುಗಳೇ ಸರ್ವೋಚ್ಚ ಆಗಿರುತ್ತವೆ.
ಐಸಿಸಿ ನಿಯಮಾವಳಿಗಳಿಗಿಂತ ಯುಕೆಯ ಸಂಸತ್ತು ಅಂಗೀಕರಿಸಿರುವ ಮಕ್ಕಳ ರಕ್ಷಣಾ ಕಾಯ್ದೆ ದೊಡ್ಡದಾಗಿರುವುದರಿಂದ ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಐಸಿಸಿಗೆ ಯಾವುದೇ ಅಧಿಕಾರವಿಲ್ಲ. ಐಸಿಸಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಎರಡೂ ಸ್ಥಳೀಯ ಕಾನೂನಿಗೆ ತಲೆಬಾಗಲೇಬೇಕಾಗಿದೆ.
ಈ ಘಟನೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತು ವಿಶ್ಲೇಷಕರಲ್ಲಿ ತೀವ್ರ ಚರ್ಚೆ ಹುಟ್ಟುಹಾಕಿದೆ. ವೈಭವ್ ಸೂರ್ಯವಂಶಿ ಅವರ ಸುರಕ್ಷತೆಯ ದೃಷ್ಟಿಯಿಂದ ಈ ಕಾನೂನು ಸರಿಯಾಗಿದೆ ಎಂದು ಕೆಲವರು ಸಮರ್ಥಿಸಿಕೊಂಡರೆ, ತಂಡದ ಭಾಗವಾಗಿರುವ ಆಟಗಾರನನ್ನು ಈ ರೀತಿ ಪ್ರತ್ಯೇಕವಾಗಿ ಇಡುವುದರಿಂದ ಆತನ ಮಾನಸಿಕ ಸ್ಥೈರ್ಯ ಮತ್ತು ತಂಡದ ಒಗ್ಗಟ್ಟಿನ (Team Bonding) ಮೇಲೆ ಪರಿಣಾಮ ಬೀರುತ್ತದೆ ಎಂದು ಹಲವು ಹಿರಿಯ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
